ಪ್ರತಿಯೊಂದು ಗ್ರಾಪಂಗಳಲ್ಲಿ ಕಡ್ಡಾಯವಾಗಿ ಪ್ರಜಾಪ್ರಭುತ್ವ ದಿನ ಆಚರಿಸಿ: ಹೆಗ್ಗಣ್ಣವರ
ಸವದತ್ತಿ 14: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಸೆ.15ರಂದು ಎಲ್ಲ ಇಲಾಖೆಯ ಅಧಿಕಾರಿಗಳು ಹಾಗೂ ಪ್ರತಿಯೊಂದು ಗ್ರಾಂ.ಪಂಚಾಯತಗಳಲ್ಲಿ ಕಡ್ಡಾಯವಾಗಿ ಆಚರಣೆ ಮಾಡಬೇಕೆಂದು ತಹಸೀಲ್ದಾರ ಮಲ್ಲಿಕಾರ್ಜುನ ಹೆಗ್ಗಣ್ಣವರ ಹೇಳಿದರು.
ಸ್ಥಳೀಯ ಮಿನಿ ವಿಧಾನಸೌಧದ ತಹಸೀಲ್ದಾರ ಕಾರ್ಯಾಲಯದಲ್ಲಿ ನಡೆದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಬಹಳಷ್ಟು ಅರ್ಥಪೂರ್ಣವಾಗಿ ಆಚರಿಸಬೇಕಾಗಿರುವದರಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಇಟ್ಟು ಪೂಜಿಸಿ ಗೌರವಿಸುವ ಕಾರ್ಯ ತಾಲೂಕು ಆಡಳಿತದ ಎಲ್ಲ ಇಲಾಖೆಗಳಲ್ಲಿ ನಡೆಯಬೇಕೆಂದರು.
ಸೆ.15ರಂದು ಪಟ್ಟಣದ ಮಧ್ಯಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರವರ ಪ್ರತಿಮೆಗೆ ಮಾಲಾರೆ್ಣ ಮಾಡಿ ನಂತರ ತಾ.ಪಂ ಸಭಾಭವನಕ್ಕೆ ಆಗಮಿಸಿ ಅಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಪ್ರಮಾಣ ವಚನದ ಕಾರ್ಯಕ್ರಮ ನಡೆಯಲಿದ್ದು, ಎಲ್ಲರೂ ಕಡ್ಡಾಯವಾಗಿ ಭಾಗವಹಿಸಬೇಕೆಂದರು.
ಎಲ್ಲ ಶಾಲಾ ಕಾಲೇಜುಗಳಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಈ ಕಾರ್ಯಕ್ರಮವನ್ನು ಮಾಡುವುದರ ಮುಖಾಂತರ ಡಾ.ಬಿ.ಆರ್.ಅಂಬೇಡ್ಕರವರ ಸಾಧನೆ ಬಗ್ಗೆ ತಿಳಿಸುವ ಕಾರ್ಯವನ್ನು ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಆರ್.ಆರ್.ಕುಲಕರ್ಣಿ ಅವರು ಪ್ರಸ್ತಾವಿಕವಾಗಿ ಮಾತನಾಡಿದರು.
ದಲಿತ ಸಂಘಟನೆಯ ಮುಖಂಡರಾದ ಬಸವರಾಜ ತಳವಾರ ಅವರು ಮಾತನಾಡಿ ಬಹಳಷ್ಟು ಇಲಾಖೆಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರವರ ಭಾವಚಿತ್ರವನ್ನು ಪೂಜಿಸುತ್ತಿಲ್ಲ ಮತ್ತು ಶಾಲೆ ಕಾಲೇಜುಗಳಲ್ಲಿ ಈ ಒಂದು ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಆಚರಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದರು.
ಪುರಸಭೆ ಮುಖ್ಯಾಧಿಕಾರಿ ಅಧಿಕಾರಿಗಳಾದ ಪ್ರಕಾಶ ಚೆನ್ನಪ್ಪನವರ, ಎಚ್.ಎ.ಕದ್ರಾಪುರ, ಡಾ.ಅನೀಲ ಮರಲಿಂಗಣ್ಣವರ, ಸೋಮಶೇಖರ ಅಯ್ಯನಗೌಡ್ರು, ವೈ.ವೈ.ಕಾಳಪ್ಪನವರ, ಪ್ರಕಾಶ ಮಲ್ಲೂರ, ಮಹಾದೇವ ಬಡ್ಲಿ ಸೇರಿದಂತೆ ತಾಲೂಕ ಮಟ್ಟದ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.