ಧಾರವಾಡದಲ್ಲಿ ಶಿವಾನಂದ ಲಹರಿ ಸಾಹಿತ್ಯದ ಕಂಪು ಕಾರ್ಯಕ್ರಮ: ಸಾಧಕರಿಗೆ ಸನ್ಮಾನ
ಲೋಕದರ್ಶನ ವರದಿ
ಧಾರವಾಡ 10: ಆದಿಗುರು ಅದ್ವೈತ ತತ್ವಜ್ಞಾನಿ ಶ್ರೀ ಶಂಕರಾಚಾರ್ಯರು ಭಗವಾನ ಶಿವನ ಮಹಿಮೆಯನ್ನು ಕೊಂಡಾಡಲು ರಚಿಸಿದ ಅತ್ಯಂತ ಪ್ರಸಿದ್ಧ ಸ್ತ್ರೋತ್ರವೇ ‘ಶಿವಾನಂದ ಲಹರಿ’ ಈ ಕೃತಿ ಶಿವನ ಆನಂದದ ಅಲೆಗಳು ನಿರಂತರವಾಗಿ ಅನುಭವಿಸುವಂತೆ ಮಾಡುವ ದಿವ್ಯ ಕಾವ್ಯವಾಗಿದೆ ಎಂದು ಕರ್ನಾಟಕ ಕಾಲೇಜಿನ ಅತಿಥಿ ಉಪನ್ಯಾಸಕ ಡಾ. ಚಿದಾನಂದ ಮಾಸನಕಟ್ಟಿ ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು, ದಿ ವೀರ್ಪ ವೀರಭದ್ರ್ಪ ನಾಗಶೆಟ್ಟಿ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ‘ಶ್ರೀ ಶಿವಾನಂದ ಲಹರಿ ಸಾಹಿತ್ಯದ ಕಂಪು’ ವಿಷಯ ಕುರಿತು ಮಾತನಾಡಿದರು.
ಶಿವಾನಂದ ಲಹರಿಯು 100 ಸಂಸ್ಕೃತ ಶ್ಲೋಕಗಳನ್ನೊಳಗೊಂಡಿದೆ. ಇದನ್ನು 1956 ರಲ್ಲಿ ವೀರ್ಪ ನಾಗಶೆಟ್ಟಿ ಓರ್ವ ಶಿಕ್ಷಕರಾಗಿ ಸಂಸ್ಕೃತದಲ್ಲಿದ್ದ ಸ್ತ್ರೋತ್ರಗಳನ್ನು ಹಳಗನ್ನಡಕ್ಕೆ ಅನುವಾದಿಸಿದರು. ಹಳಗನ್ನಡ ಇಂದಿನ ತಲೆಮಾರಿನವರಿಗೆ ಓದಲು, ಅರ್ಥ ಮಾಡಿಕೊಳ್ಳಲು ಅಷ್ಟು ಸರಳವಲ್ಲ. ಹೀಗಾಗಿ ಅದನ್ನು ಕನ್ನಡಕ್ಕೆ ಸರಳಾನುವಾದ ಮಾಡುವ ಕಾರ್ಯ ಮಾಡಲಾಗಿದೆ. ದಿ. ವೀರ್ಪ ನಾಗಶೆಟ್ಟಿ ಕನ್ನಡ, ಸಂಸ್ಕೃತ, ಹಳೆಗನ್ನಡದ ವಿದ್ವತ್ಪೂರ್ಣ ಪಂಡಿತರಾಗಿದ್ದರು.
ಮೂರೂ ಭಾಷೆಗಳಲ್ಲಿ ಆಳವಾಗಿ ಅಧ್ಯಯನ ಮಾಡಿ ಅನೇಕ ಅಮೂಲ್ಯ ಕೃತಿ ರಚಿಸಿ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಅವರ ಅಪ್ರಕಟಿತ ನೂರಾರು ಕೃತಿಗಳು ಇನ್ನೂ ಹಸ್ತಪ್ರತಿಗಳಲ್ಲಿದ್ದು, ಅವೂ ಸಹ ಒಂದೊಂದಾಗಿ ಪ್ರಕಟಿಸುವಂತೆ ಮಾಡಲಾಗಿದೆ. ಸೃಜನಶೀಲ ಬರಹಗಾರರಾದ ವೀರ್ಪನವರು ಕಂಬಿ ಬಸವಾರ್ಯರ ಪ್ರೀತಿಯ ಶಿಷ್ಯರಾಗಿದ್ದು ವಿಶೇಷ. ಶಿವಾನಂದ ಲಹರಿ ಮನಸ್ಸಿಗೆ ಆನಂದ ಉಂಟುಮಾಡಿ, ಏಕಾಗ್ರತೆ ಹೆಚ್ಚಿಸುವ ಕೃತಿಯಾಗಿದ್ದು ಎಲ್ಲರೂ ಓದುವಂತಾಗಬೇಕೆಂದು ಹೇಳಿದರು.
ಸಾಧಕರಾದ ಡೈಟ್ನ ವಿಶ್ರಾಂತ ಉಪನ್ಯಾಸಕ ಕೆ. ಜಿ. ದೇವರಮನಿ ದತ್ತಿದಾನಿಗಳ ಪರವಾಗಿ ಸನ್ಮಾನ ಸ್ವೀಕರಿಸಿ ಪ್ರತಿಕ್ರಿಯಿಸಿ, ನಾನು ಮತ್ತು ಸದಾನಂದ ನಾಗಶೆಟ್ಟಿ ಡೈಟ್ನಲ್ಲಿ ಆತ್ಮೀಯ ಸ್ನೇಹಿತರಾಗಿದ್ದವರು. ಸದಾನಂದ ಕಠಿಣ ವಿಷಯಗಳನ್ನೂ ಸರಳೀಕೃತಗೊಳಿಸಿ ಬೋಧಿಸುವ ಕಲೆ ಕರಗತ ಮಾಡಿಕೊಂಡಿದ್ದರು. ಅವರ ವಿಶೇಷ ಗುಣ, ಪ್ರಯೋಗಶೀಲತೆಯಾಗಿತ್ತು. ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಗುರುಗಳಾಗಿದ್ದರೆಂದು ಸ್ಮರಿಸಿ ಈ ಪ್ರಶಸ್ತಿ ನನ್ನ ಗೌರವ ಹೆಚ್ಚಿಸಿದೆ ಎಂದರು.