ಉತ್ಸಾಹಿ ಯುವಪಡೆಯ ರೈಮ್ಸ್ ಬಿಡುಗಡೆಗೆ ಸಿದ್ಧ
ಬೆಂಗಳೂರು, ನವೆಂಬರ್ 03: ತಮಿಳುನಾಡು ಮೂಲದ ಉತ್ಸಾಹಿ ಯುವಕ. ಕಮಲ್ ಹಾಸನ್ ನಿರ್ದೇಶನ ತಂಡದಲ್ಲಿ ಕೆಲಸ ಮಾಡಿದ ಅನುಭವ ಪಡೆದಿರುವ ಅಜಿತ್ ಕುಮಾರ್ ನಿರ್ದೇಶನ ಮಾಡಿರುವ ಚಿತ್ರ 'ರೈಮ್ಸ್' ಸದ್ಯದಲ್ಲಿಯೇ ಬಿಡುಗಡೆ ಕಾಣುವ ಹಂಬಲದಲ್ಲಿದೆ.
ಈ ಹಿನ್ನೆಲೆಯಲ್ಲಿ ಚಿತ್ರತಂಡ ಮಾಧ್ಯಮಗಳ ಮುಂದೆ ಬಂದಿತ್ತು. ಒಂದು ಹೊಸ ಪರಿಕಲ್ಪನೆಯಲ್ಲಿ ಚಿತ್ರ ಮಾಡುವ ಆಶಯವಿತ್ತು. ಅದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ರೈಮ್ಸ್ ಎಂಬುದು ಹುಡುಕಾಟದ ನೆಲೆಯಲ್ಲಿ ನೆರವಾಗುತ್ತದೆ. ಹಾಗಾಗಿ ಚಿತ್ರಕ್ಕೆ ಅದೇ ಹೆಸರನ್ನು ಇಡಲಾಗಿದೆ ಎಂದು ಹೇಳುತ್ತಾ ಹೋದರು ನಿರ್ದೇಶಕ ಅಜಿತ್ ಕುಮಾರ್.
ಅಜಿತ್ ಜಯರಾಜ್, ಶುಭಪೂಂಜಾ ಹಾಗೂ ಸುಷ್ಮಾ ನಾಯರ್ ಮುಖ್ಯ ಪಾತ್ರದಲ್ಲಿದ್ದಾರೆ. ಅಜಿತ್ ಜಯರಾಜ್ ಇನ್ಸ್ ಪೆಕ್ಟರ್ ಪಾತ್ರವನ್ನು ನಿರ್ವಹಿಸಿದ್ದು, ಒಂದು ಕೊಲೆಯ ಸುತ್ತ ಕಥೆ ನಡೆಯುತ್ತದೆ. ಕೊಲೆಗಾರನ ಹುಡುಕಲು ರೈಮ್ಸ್ ನೆರವಾಗುತ್ತದೆ. ಇದು ನಟನೆ ವಿಷಯದಲ್ಲಿ ಬಹಳ ಕಲಿಸಿಕೊಟ್ಟಿತು ಎಂದರು ಅಜಿತ್ ಜಯರಾಜ್.
ನನ್ನದು ಕ್ರೈಮ್ ರಿಪೋರ್ಟರ್ ಪಾತ್ರ. ಅದಕ್ಕಾಗಿ ಕೆಲವು ಸಂಗತಿಗಳನ್ನು ಕಲಿತಿರುವೆ ಎಂದು ಶುಭಪೂಂಜ. ಸುಷ್ಮಾ ನಾಯರ್ ಗೆ ಇದು ಮೊದಲ ಚಿತ್ರ.
ಅಂದ ಹಾಗೆ ಜ್ಞಾನಶೇಖರ್, ರವಿಕುಮಾರ್ ಹಾಗೂ ರಮೇಶ್ ಆರ್ಯ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಕನ್ನಡಕ್ಕೆ ಒಂದು ಒಳ್ಳೆ ಸಿನಿಮಾ ನೀಡುವ ಆಶಯದಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ ಎಂಬ ಅಭಿಪ್ರಾಯ ಅವರಿಂದ ವ್ಯಕ್ತವಾಯಿತು.
ಇದೇ ಡಿಸೆಂಬರ್ 10ರಂದು ಚಿತ್ರವನ್ನು ಬಿಡುಗಡೆ ಮಾಡುವ ಆಶಯ ನಮ್ಮದು. ಇದು ಮಲ್ಟಿಪ್ಲೆಕ್ಸ್ ಗಳಲ್ಲಿ ಮಾತ್ರ ಬಿಡುಗಡೆ ಕಾಣುತ್ತದೆ ಚಿತ್ರಮಂದಿರಗಳ ಬೆಂಬಲ ಅಷ್ಟಾಗಿ ನಮಗೆ ಇಲ್ಲ. ಆದ್ದರಿಂದ ಈ ನಿರ್ಧಾರ ತಳೆಯಲಾಗಿದೆ ಎಂದರು ಜ್ಞಾನಶೇಖರ್.