ಅಥಣಿ

‘ಸಚಿವ ಶಿವಾನಂದ ಪಾಟೀಲರ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ’

‘ಸಚಿವ ಶಿವಾನಂದ ಪಾಟೀಲರ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ’

ಅಥಣಿ 27: ಸಕ್ಕರೆ ಸಚಿವ ಶಿವಾನಂದ ಪಾಟೀಲರು ರೈತ ಮತ್ತು ಕೃಷಿ ಸ್ವಾವಲಂಬಿಯಾಗಬೇಕು ಎಂದು ಹೇಳಿಕೆ ನೀಡಿದ್ದರೂ ಕೂಡ ಕೆಲ ರೈತ ವಿರೋಧಿಗಳು ಸಕ್ಕರೆ ಸಚಿವರು ರೈತರನ್ನು ಅವಮಾನಿಸುವಂತಹ ಹೇಳಿಕೆ ನೀಡಿದ್ದಾರೆ ಎಂದು ಬಿಂಬಿಸಿ ಗೊಂದಲವನ್ನು ಉಂಟು ಮಾಡುತ್ತಿರುವುದನ್ನು ಸುಟ್ಟಟ್ಟಿ ಗ್ರಾಮದ ಹಿರಿಯ ಮುಖಂಡ ಸಾಬು ಮಾಳಿ ಖಂಡಿಸಿದರು.  

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಸಚಿವ ಶಿವಾನಂದ ಪಾಟೀಲರು ಕೂಡ ಸ್ವತ: ರೈತರು ಅವರಿಗೂ ರೈತರ ಕಷ್ಟ, ನಷ್ಟಗಳ ಬಗೆಗೆ ಅರಿವಿದೆ. ಅಲ್ಲದೆ ಕಳೆದ 25 ವರ್ಷಗಳಿಂದ ವಿಜಯಪುರ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ರೈತರ ಪರ ಅನೇಕ ಆರ್ಥಿಕ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಅವರು ನಮ್ಮ ಗ್ರಾಮ ಸುಟ್ಟಟ್ಟಿಯ ಪಿ.ಕೆ.ಪಿ.ಎಸ್ ಬ್ಯಾಂಕಿನ 75 ನೇ ವರ್ಷದ ಅಮೃತ ಮಹೋತ್ಸವದಲ್ಲಿ ರೈತರು ದ್ರಾಕ್ಷಿ ಅಥವಾ ಕಬ್ಬು ಬೆಳೆಯನ್ನು ಅವಲಂಬಿಸದೆ ಮಿಶ್ರ ಬೆಳೆಯತ್ತ ಗಮನ ಕೊಡಬೇಕು ಎಂದು ರೈತರಿಗೆ ಕಿವಿ ಮಾತು ಹೇಳಿರುವ ವಿಷಯವಾಗಲಿ ಅಥವಾ ರೈತರ ಉತ್ಪನ್ನಗಳಿಗೆ ಬೆಂಬಲ ಬೆಲೆ ಸಿಗುವಂತಾಗಬೇಕು ಆಗ ಮಾತ್ರ ರೈತ ಕೃಷಿಯಲ್ಲಿ ಸ್ವಾವಲಂಬಿಯಾಗುವುದರ ಜೊತೆಗೆ ಸರಕಾರಗಳಿಗೂ ಸಾಲ ಕೊಡುವಂತನಾಗುತ್ತಾನೆ ಎಂದು ಸಚಿವರು ಹೇಳಿದ ವಿಷಯ ಹೊರಗೆ ಬರಲೇ ಇಲ್ಲ, ಆದರೆ  ತಮ್ಮ ಭಾಷಣದ ಒಂದು ವಿಶೇಷ ಸಂದರ್ಭದಲ್ಲಿ ಮಾತನಾಡಿರುವುದನ್ನೇ ತಪ್ಪಾಗಿ ಬಿಂಬಿಸುತ್ತಿರುವುದು ರೈತ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ ಎಂದರು.  

ವಿರೋಧ ಪಕ್ಷಗಳು ರೈತ ಪರ ಕೆಲಸ ಮಾಡಬೇಕು ಹೊರತು ರಾಜಕೀಯ ಲಾಭಕ್ಕಾಗಿ ರೈತರ ಆತ್ಮ ವಿಶ್ವಾಸಕ್ಕೆ ಧಕ್ಕೆ ತರುವಂತಹ ವಿಷಯಗಳನ್ನು ಎತ್ತಿಕಟ್ಟಿ ಗೊಂದಲ ಮೂಡಿಸಬಾರದು ಎಂದ ಅವರು ಸಚಿವರು ಮಾತನಾಡಿದ ಎಲ್ಲ ವಿಷಯವನ್ನು ಗಮನಿಸಿ ವಿರೋಧ ಮಾಡಬೇಕು ಹೊರತು ಯಾವುದೋ ಒಂದು ಮಾತಿನ ತುಣುಕು ಹಿಡಿದುಕೊಂಡು ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದು ವಿರೋಧ ಪಕ್ಷದವರಲ್ಲಿ ಮನವಿ ಮಾಡಿದರು.  

ಸುಟ್ಟಟ್ಟಿ ಗ್ರಾಮದ ಮತ್ತೊರ್ವ ಮುಖಂಡ ಅನೀಲ ಚವ್ಹಾಣ ಮಾತನಾಡಿ, ಸಚಿವ ಶಿವಾನಂದ ಪಾಟೀಲರ ಇಡೀ ಭಾಷಣ ಕೇಳಬೇಕು ಆಗ ಮಾತ್ರ ರೈತ ಪರ ಅವರ ಕಾಳಜಿ, ಕಳಕಳಿ ಗೊತ್ತಾಗುತ್ತದೆ ಎಂದ ಅವರು ರೈತರು ಒಂದೇ ಒಂದು ಬೆಳೆಯ ಹಿಂದೆ ಬೀಳದೆ ದ್ರಾಕ್ಷಿ, ಡಾಳಿಂಬೆ ಯಂತಹ ತೋಟಗಾರಿಕೆ ಜೊತೆಗೆ ಕಬ್ಬು, ಅರಿಶಿಣದಂತಹ ವಾಣಿಜ್ಯ ಮತ್ತು ಇತರೆ ಬೆಳೆಗಳನ್ನು ಬೆಳೆದಲ್ಲಿ ಮಾತ್ರ ಕೃಷಿಯಲ್ಲಿ ಲಾಭ ಮಾಡಿಕೊಳ್ಳಲು ಸಾಧ್ಯ ಎಂದು ಸಚಿವರು ಹೇಳಿದ ಮಾತು ಎಲ್ಲಿಯೂ ಪ್ರಸಾರಗೊಳ್ಳಲೇ ಇಲ್ಲ ಆದರೆ ಹಿಂದೆ, ಮುಂದೆ ಇಲ್ಲದೆ ಮಧ್ಯದ ಮಾತನ್ನು ಮಾತ್ರ ಪ್ರಸಾರ ಮಾಡಿ ಗೊಂದಲ ಮೂಡಿಸಿದ್ದಾರೆ ಎಂದು ಹೇಳಿದರು.  

ಸುಟ್ಟಟ್ಟಿ ಗ್ರಾಮದ ರೈತ ಮುಖಂಡರಾದ ಮಂಜುನಾಥ ಅಂಬಾಜಿ, ಬಸಪ್ಪ ಕೊಳಂಬಿ, ಮಹಾದೇವ ಮಾಯನಟ್ಟಿ, ಸತ್ಯಪ್ಪ ಸವದಿ, ಮಹಾದೇವ ಅವಟಿ, ಪಿರಸಾಬ ನದಾಫ, ಶಂಕರ ಮಾಯನಟ್ಟಿ, ಮಾಯಪ್ಪ ಅಜ್ಜಣಗಿ, ಸಂಬಾಜಿ ಗುರ್ಲಾಪುರ, ಲಕ್ಷ್ಮಣ ಕರ್ಜಗಿ, ನಾರಾಯಣ ಅಂಬಾಜಿ, ಹಣಮಂತ ಅರ್ಧಾವುರ, ಗ್ರಾಮ ಪಂಚಾಯತ ಅಧ್ಯಕ್ಷ ಬಸಪ್ಪ ಕಂಕಣವಾಡಿ ಗ್ರಾ.ಪಂ ಸದಸ್ಯ  ದಾನಪ್ಪ ಮಲಾಬಾದಿ ಉಪಸ್ಥಿತರಿದ್ದರು. 


ಸುದ್ದಿ ಓದಿ