ಸನ್ಮತಿ ವಿದ್ಯಾಲಯದಲ್ಲಿ ಗುರುವಂದನೆ, ಸ್ನೇಹಮಿಲನ ಕ್ಷಮಿಸುವ, ಕ್ಷೇಮೆ ಕೇಳುವ ಗುಣ ಗುರುವಿನಲ್ಲಿ ಮಾತ್ರ ಕಾಣಬಹುದು: ಎ.ಬಿ. ಪಾಟೀಲ
ಲೋಕದರ್ಶನ ವರದಿ
ಕಾಗವಾಡ 27: ಕ್ಷಮಿಸುವ ಮತ್ತು ಕ್ಷೇಮೆ ಬೇಡುವ ಗುಣಗಳು ಕೇವಲ ಗುರುವಿನಲ್ಲಿ ಮಾತ್ರ ಕಾಣಬಹುದಾಗಿದ್ದು, ತಮ್ಮ ವಿದ್ಯಾರ್ಥಿಗಳು ತಪ್ಪು ಮಾಡಿದಾಗ ಕ್ಷಮಿಸುವ, ತಮ್ಮಿಂದ ತಪ್ಪಾಗಿದೆ ಎಂದೆನಿಸಿದಾಗ ಮುಲಾಜಿಲ್ಲದೇ ಕ್ಷೇಮೆ ಕೇಳಿ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಗುರುಗಳಿಗೆ ಬರೊಬ್ಬರಿ 50 ವರ್ಷಗಳ ನಂತರ ಸನ್ಮಾನಿಸುತ್ತಿರುವುದು ನಿಜಕ್ಕೂ ಗೌರವದ ವಿಷಯವಾಗಿದೆ ಎಂದು ಬೆಳಗಾವಿಯ ಸನ್ಮತಿ ಶಿಕ್ಷಣ ಸಹಕಾರ ಸಮಿತಿಯ ಶಾಲೆ ಮತ್ತು ಕಾಲೇಜು ಆಡಳಿತ ಮಂಡಳಿಯ ಸದಸ್ಯ ಎ.ಬಿ. ಪಾಟೀಲ ಅಭಿಪ್ರಾಯ ಪಟ್ಟಿದ್ದಾರೆ.
ಅವರು, ರವಿವಾರ ದಿ. 26 ರಂದು ತಾಲೂಕಿನ ಶೇಡಬಾಳ ಪಟ್ಟಣದ ಸನ್ಮತಿ ವಿದ್ಯಾಲಯದ ಸನ್ 1975-76 ನೇ ಸಾಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಪುನರಮಿಲನ ಮತ್ತು ಗುರುವಂದನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡುತ್ತಿದ್ದರು. 50 ವರ್ಷಗಳ ಹಿಂದೆ ಇದೇ ಶಾಲೆಯಲ್ಲಿ ಕಲಿತು, ಇದೇ ಸಂಸ್ಥೆಯಲ್ಲಿ ಪ್ರಾಚಾರ್ಯರಾಗಿ ನಿವೃತ್ತಿಯಾಗಿ ಈಗ ಸಂಸ್ಥೆಯ ಶಾಲಾ-ಕಾಲೇಜು ಆಡಳಿತ ಮಂಡಳಿಯ ಸದಸ್ಯನಾಗಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಷಯವಾಗಿದ್ದು, ನಾವೆಲ್ಲಾ ವರ್ಗ ಮಿತ್ರರು ಸೇರಿ ಕಲಿತ ಶಾಲೆಗೆ ಏನಾದರೂ ಸೇವೆ ಮಾಡಬೇಕೆಂಬ ಉದ್ದೇಶ ಹೊಂದಿರುವುದಾಗಿ ತಿಳಿಸಿದರು.
ಅಗಲಿದ ಗುರುಗಳ ಹೆಸರುಗಳ ಅಚ್ಚು ಉಳ್ಳ ಭಾವಚಿತ್ರದ ಪೂಜೆ ನೆರವೇರಿಸಿ, ಅಗಲಿದ ವರ್ಗ ಮಿತ್ರರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ತಮಗೆ ಕಲಿಸಿದ ಗುರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 3 ನೇ ರಾ್ಯಂಕ್ ಪಡೆದ ಸಂತೋಷ ರತ್ನಪ್ಪಗೋಳ ಅವರ ತಂದೆಯವರನ್ನು ಸನ್ಮಾನಿಸಲಾಯಿತು. ಈಗ ನಿವೃತ್ತ ಜೀವನ ನಡೆಸುತ್ತಿರುವ ವರ್ಗ ಮಿತ್ರರು,
50 ವರ್ಷಗಳ ಹಿಂದಿನ ದಿನಗಳನ್ನು ಮೆಲುಕುಹಾಕಿ ಭಾವುಕರಾದರು. ನಿವೃತ್ತ ಶಿಕ್ಷಕರಾದ ಬಿ.ಬಿ. ಪಾಟೀಲ, ಬಿ.ಜೆ. ಕುರುಂದವಾಡೆ, ಬಿ.ಆರ್. ಜಠಾರ, ಎಂ.ಡಿ. ಅಲಾಸೆ, ಸನ್ಮತಿ ಶಿಕ್ಷಣ ಸಹಕಾರ ಸಮಿತಿಯ ಅಧ್ಯಕ್ಷ ವಿನೋದ ಬರಗಾಲೆ ಸೇರಿದಂತೆ ಸನ್ 1975-76 ನೇ ಸಾಲಿನ ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎಸ್.ಎಸ್. ಹಿರೇಮಠ ಸ್ವಾಗತಿಸಿ, ನಿರೂಪಿಸಿದರು. ರವೀಂದ್ರ ಕೋರೆ ವಂದಿಸಿದರು.