ವಿಶ್ವಾಸಕ್ಕೆ ಧಕ್ಕೆ ಬಾರದ ಹಾಗೆ ಕೆಲಸ ಮಾಡಿದ್ದೇನೆ: ನಡಹಳ್ಳಿ
ತಾಳಿಕೋಟಿ: ಕಳೆದ ಬಾರಿ ನೀವು ನನ್ನ ಮೇಲೆ ವಿಶ್ವಾಸವಿರಿಸಿ ನನಗೆ ಮತ ಹಾಕಿ ಗೆಲ್ಲಿಸಿದ್ದೀರಿ. ಈ ನಿಮ್ಮ ವಿಶ್ವಾಸ ಹಾಗೂ ನೀವು ನನಗೆ ಹಾಕಿರುವ ಮತಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಕೆಲಸ ಮಾಡಿದ್ದೇನೆ ಎಂದು ಮುದ್ದೇಬಿಹಾಳ ಶಾಸಕ ಹಾಗೂ ಕರ್ನಾಟಕ ಆಹಾರ ನಿಗಮದ ಅಧ್ಯಕ್ಷ ಎ.ಎಸ್. ಪಾಟೀಲ(ನಡಹಳ್ಳಿ) ಹೇಳಿದರು.
ಪಟ್ಟಣದಲ್ಲಿ ಇತ್ತೀಚೆಗೆ ಪೌರಾಡಳಿತ ಇಲಾಖೆಯಿಂದ ಹಮ್ಮಿಕೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ನಂತರ 3ನೇ ವಾರ್ಡ್ನಲ್ಲಿ ನೀಡಿದ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು.
ಮತಕ್ಷೇತ್ರದಲ್ಲಿ ಕೆಲವರು ನನ್ನ ಕುರಿತು ಅಪಪ್ರಚಾರದಲ್ಲಿ ತೊಡಗಿದ್ದಾರೆ ಅದರ ಕುರಿತು ನಾನು ತಲೆಕೆಡಿಸಿಕೊಳ್ಳುವದಿಲ್ಲ. ರಾಜಕೀಯದಲ್ಲಿ ಇದೆಲ್ಲವೂ ಸಾಮಾನ್ಯ. ಕ್ಷೇತ್ರದ ಅಭಿವೃದ್ಧಿ ನನಗೆ ಮುಖ್ಯ, ಜನ ನನಗೆ ಮತ ನೀಡಿದ್ದು ಕೆಲಸ ಮಾಡಲಿಕ್ಕಾಗಿ ಹೊರತು ಟೀಕೆ ಮಾಡುವವರಿಗೆ ಉತ್ತರ ನೀಡುತ್ತಾ ಕಾಲಹರಣ ಮಾಡಲಿಕ್ಕಾಗಿ ಅಲ್ಲ. ನನ್ನ ಕೆಲಸಗಳೇ ಉತ್ತರ ನೀಡುತ್ತವೆ. ತಾವೂ ಸಹ ಇಂಥಹ ಅಪ್ರಪಚಾರಕ್ಕೆ ಕಿವಿಗೊಡಬೇಡಿ ತಾಳಿಕೋಟಿ ಪಟ್ಟಣವನ್ನು ಒಂದು ಸ್ವಚ್ಛ ಸುಂದರ ಹಾಗೂ ಹಸಿರಿನಿಂದ ಕಂಗೊಳಿಸುವ ನಗರವನ್ನಾಗಿ ಮಾಡುವುದು ನನ್ನ ಗುರಿಯಾಗಿದೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ನನಗೆ ಬೇಕು ಎಂದರು.
ಈ ಸಮಯದಲ್ಲಿ ವಾರ್ಡ್ ಸದಸ್ಯ ವಾಸುದೇವ ಹೆಬಸೂರ, ಮುಖಂಡರಾದ ಬಸನಗೌಡ ವಣಿಕ್ಯಾಳ, ಎಂ.ಎಂ. ಪೊಲೀಸ್ಪಾಟೀಲ, ಶಿವಶಂಕರ ಹಿರೇಮಠ, ಕಾಶೀನಾಥ ಮುರಾಳ, ದತ್ತು ಹೆಬಸೂರ, ಎಂ.ಎಸ್. ಸರಶೆಟ್ಟಿ, ಕಾಶೀನಾಥ ಸಜ್ಜನ, ಪುರಸಭೆ ಸದಸ್ಯರಾದ ಡಿ.ವಿ. ಪಾಟೀಲ, ಅಣ್ಣಪ್ಪ ಜಗತಾಪ, ಜಯಸಿಂಗ್ ಮೂಲಿಮನಿ, ನಿಂಗು ಕುಂಟೋಜಿ, ಪರಶುರಾಮ ತಂಗಡಗಿ, ಗಣ್ಯರಾದ ಶಳ್ಳಗಿ, ಪತ್ತಾರ, ಸಂತು ದೇಶಪಾಂಡೆ ಇದ್ದರು.