ಲೇಖನಗಳು

ಸೃಷ್ಟಿಯ ಕಥೆ.

ಸೃಷ್ಟಿಯ ಕಥೆ.

ಸೃಷ್ಟಿ, ಶಿಕ್ಷಣ ಪಡೆಯುತ್ತಿರುವ ಅನೇಕ ಹುಡುಗ ಹುಡುಗೆಯರಿಂದ ತುಂಬಿದ ಸಾಮಾನ್ಯ ಶಾಲೆಯೊಂದರ ಸಾಮಾನ್ಯ ಹುಡುಗೆ .  ಉಚ್ಚ ಮಧ್ಯಮ ವರ್ಗದ ಕುಟುಂಬ ಅವರದು.  ಪುಟ್ಟ ಸಂಸಾರ.  ತಂದೆ ಚಾರ್ಟರ್ಡ್ ಅಕೌಂಟಂಟ್,   ಮಗಳಿಗೆ ಡೊನೇಷನ್ ಕೊಟ್ಟು ದೊಡ್ಡ ಡಿಗ್ರಿಯೊಂದನ್ನು ಕೊಂಡುಕೊಳ್ಳಲು ಬೇಕಾದಷ್ಟು ಹಣವನ್ನು ಹೊಂದಿಸಬಹುದಾದಂಥ ಗಳಿಕೆ,  ಆದರೆ ಅವರು ಮನಸ್ಸು ಮಾಡಲಿಲ್ಲ.  ಮಗನನ್ನು ಅವನು ಹೇಳಿದಷ್ಟು ಓದಿಸಿದರು.  ಮಗಳು ಮಾತ್ರ ಸಾಮಾನ್ಯ ಪದವಿಗೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು,  


ಸೃಷ್ಟಿಯನ್ನು ಮುದ್ದಿನಿಂದ ಎಲ್ಲರೂ ಚಿಟ್ಟಿ ಎಂದೇ ಕರೆಯುತ್ತಿದ್ದರು.  ಮಗಳ ಸೌಂದರ್ಯದ ಬಗ್ಗೆ ತಂದೆಗೆ ಹೆಮ್ಮೆ. ಆದರೆ ಅಷ್ಟೇ ಆತಂಕ ಕೂಡ.  ರಕ್ತ ಸಂಬಧಿಕರಲ್ಲೇ ಮದುವೆ ಮಾಡಿಕೊಟ್ಟರೆ,'ಅಷ್ಟು ಚಂದದ ಹುಡುಗೆಯನ್ನು ನಮ್ಮ ಮನೆಗೇಕೆ ಕೊಡಲಿಲ್ಲ.  ನಾವೇನು ಅವರಿಗಿಂತ ಕಡಿಮೆ ?' ಎಂದು ಜಗಳಾಡುವಂಥವರೇ ಎಲ್ಲರೂ.  ಒಂದು ಮನೆತನವನ್ನು ತೃಪ್ತಿ ಪಡಿಸುವಷ್ಟರಲ್ಲಿ ಉಳಿದ ಎಲ್ಲರನ್ನು ಇದಿರು ಹಾಕಿಕೊಳ್ಳುವ ಸಾಧ್ಯತೆಗಳೇ ಹೆಚ್ಚಿದ್ದುದರಿಂದ ಅವರೆಲ್ಲ ಜಾಗೃತರಾಗುವ ಮೊದಲೇ ತಂದೆ  ಹೊರಗಿನ ಸಂಬಂಧದಲ್ಲಿ ಅವಳಮದುವೆ ಮಾಡಿ ಮುಗಿಸಿಬಿಟ್ಟರು,  

ಹುಡುಗನೋ,'ತಾನು ಗಂಡು.ಏನು ಮಾಡಿದರೂ ಚಂದ,  ತಾನು ಯಾರಿಗೇನು ಕಡಿಮೆ 'ಎಂಬ ವಿಚಾರದವ,  ಅವನ ಅಪ್ಪ,'ಯಾವ ಚಟಗಳೂ ಇಲ್ಲದ ಗಂಡಸು ಅವನೊಬ್ಬ ಗಂಡಸೇ ? ನನ್ನ ಮಗ ಯಾರೂ ಮಾಡದ್ದನ್ನೇನು ಮಾಡಿಲ್ಲವಲ್ಲ?' ಎಂದು ಮಗನ ಬಗ್ಗೆ ಬೀಗುವವ,  ಎರಡು ತಲೆಮಾರಿನವರೆಲ್ಲ ಒಟ್ಟಿಗೆ ಇರುತ್ತಿದ್ದ ತುಂಬಿದ ಮನೆ ಅದು,  ಇಂಥದ್ದರಲ್ಲಿ ಹುಡುಗ ಏನು ಮಾಡುತ್ತಿದ್ದಾನೆ ಎಂದು ನೋಡುವವರಾರು?  ಈ ಸುಂದರಿ ಹೆಂಡತಿಯನ್ನು ಭೋಗಿಸುತ್ತ, ಡ್ರಗ್ಸ ತೆಗೆದುಕೊಳ್ಳುತ್ತ, ಶೇರ್ ಗಳಲ್ಲಿ ಕುದುರೆ ರೇಸ್ ಗಳಲ್ಲಿ ಹಣ ತೊಡಗಿಸುತ್ತ ಮನೆಯ ಹೊರಗೇ  ಹೆಚ್ಚಾಗಿ ಇರುತ್ತಿದ್ದ ಗಂಡ.  ಅವನ ದುರ್ಗುಣಗಳು ತಿಳಿದು ಬಟಾ ಬಯಲಾಗುವ ಹೊತ್ತಿಗೆ ಅವಳಿಗಾಗಲೇ ಎರಡು ಮಕ್ಕಳು.  ಒಂದು ದಿನ ತಂದೆ ಚಿಟ್ಟಿಯನ್ನು ಭೆಟ್ಟಿಯಾಗಲು ಬಂದಾಗ ಅಳಿಯನನ್ನೂ ಭೆಟ್ಟಿಯಾಗಿಯೇ ಹೋಗುತ್ತೇನೆ ಎಂದರು. ಅವರು ಕುಳಿತಿದ್ದ ಮೂರು ಗಂಟೆಗಳೂ ಅವನು ಬರಲಿಲ್ಲ.  ನಿರುಪಾಯರಾದ ಅವರು ಮನೆಗೆ ಹೋದರು. ಮಗಳನ್ನು ಕೇಳಿದರೆ ಅವಳಿಗೇನೂ ಗೊತ್ತೇ ಇರಲಿಲ್ಲ.  ಅಷ್ಟೇ ಅಲ್ಲ ಜಂಟಿ ಕುಟುಂಬದ ಆ ಮನೆಯ ಎರಡನೆಯ ತಲೆಮಾರಿನ ಈ ಅತಿ ಚಿಕ್ಕ ಸೊಸೆಯನ್ನು ಹುಡುಕಿ ಅವರು ಕುಳಿತಿದ್ದ ಪಡಸಾಲೆಯ ವರೆಗೆ ಕರೆಸಿಕೊಳ್ಳುವುದೇ  ಒಂದು ದೊಡ್ಡ ಸಾಹಸವಾಗಿತ್ತು ಆ ತಂದೆಗೆ. 

ಅವತ್ತೇನೋ ಅವರು ಮರಳಿ ಬಂದರು.  ಆದರೆ ಅವರ ಮನಸ್ಸು ತಡೆಯಲಿಲ್ಲ.  ಮರುದಿನ ಮತ್ತೆ ಹೋದರು.  ಮತ್ತೆ ನಿರಾಶರಾಗಿ ಮರಳಿದರು.  ಮರುದಿನ ಮತ್ತೆ ಹೋದರು. ಈ ಸಲ ಮಾತ್ರ ಬೀಗಪ್ಪ ಸಿಟ್ಟಿನಿಂದ , ಏನು ಮಗನ ಜಾಸೂಸಿ ಮಾಡಲು ಬರುತ್ತಿದ್ದಿರಾ?' ಎಂದು ದಬಾಯಿಸಿದರು.  ಅಂಥದ್ದೇನೂ ಇಲ್ಲವೆಂದೂ ತಮ್ಮ ಮನೆಯಲ್ಲಿ ನಡೆಯುವ ಒಂದು ಸಮಾರಂಭಕ್ಕೆ ಅಳಿಯಂದಿರ ಅನುಕೂಲಕ್ಕೆ ದಿನ ಹೊಂದಿಸಿಕೊಳ್ಳುವುದಕ್ಕಾಗಿ ಬರುತ್ತಿದ್ದೇನೆಂದೂ ಹೇಳಿದರು. ಬೀಗಪ್ಪ ನಂಬಿದ.  ' ನೀವು ದಿನ ಗೊತ್ತು ಮಾಡಿಕೊಳ್ಳಿ.  ಮಗನನ್ನು ಕಳುಹಿಸುವ ಜವಾಬ್ದಾರಿ ನನ್ನದು' ಎಂದು ಹೇಳಿ ಕಳುಹಿಸಿದ. ಮರುದಿನ ಮಾತ್ರ ನಡೆಯಬಾರದ್ದು ನಡೆದು ಹೋಯಿತು. 

ಸೊಸೆಯನ್ನು ಪಡಸಾಲೆಗೆ ಕರೆಸಿ, 'ನಿಮ್ಮಪ್ಪನಿಗೆ ನನ್ನ ಮಗನ ಬಗ್ಗೆ ಏನು ಹೇಳಿರುವೆ?' ಎಂದು ಮಾವ ಅವಳನ್ನು ದಬಾಯಿಸ ತೊಡಗಿದ್ದ.  'ಅವಳಿಗೇನೂ ಗೊತ್ತಿಲ್ಲ' ಎಂದು ಅತ್ತೆ ಸೊಸೆಯ ಪರವಾಗಿ ಹೇಳಿಕೆ ಕೊಡತೊಡಗಿದ್ದಳು.  ಅತ್ತೆ ಹಾಗೂ ಸೊಸೆ ಇಬ್ಬರನ್ನೂ ಸೇರಿ ದಬಾಯಿಸಿ ದನಿ ಏರಿಸಿ ಮಾವ ಒದರಾಡುವುದಕ್ಕೂ, ಚಿಟ್ಟಿಯ ಸಂಶಯಿತ ತಂದೆ ಮತ್ತೆ ಬರುವುದಕ್ಕೂ ಅದೇ ಕ್ಷಣಕ್ಕೆ ಮತ್ತಿನಿಂದ  ತೂರಾಡುತ್ತ ಮಗ ಒಳಗೆ ಬರುವುದಕ್ಕೂ ಸರಿಹೋಯಿತು.  ನಿನ್ನೆಯೇ ಸಮಜಾಯಿಷಿ ಕೊಟ್ಟು ಕಳುಹಿಸಿದ್ದರಿಂದ ಅವರು ಇವತ್ತು ಖಂಡಿತ ಬರುವುದಿಲ್ಲವೆಂದು ಬಗೆದು ಎಲ್ಲರನ್ನೂ ತರಾಟೆಗೆ ತೆಗೆದುಕೊಳ್ಳುತ್ತಿದ್ದ ಬೀಗಪ್ಪನಿಗೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಗೆದುಕೊಳ್ಳಲು ಆಗಲಿಲ್ಲ. 'ಶೇಷo ಕೋಪೇನ ಪೂರಯೇತ್' ಎಂಬಂತೆ ಸೊಸೆಯ ಮೇಲೆ ಇನ್ನಿಷ್ಟು ಕೋಪಾವಿಷ್ಟನಾಗಿ, 'ನಮ್ಮ ಮನೆ ಒಡೆಯಲು ಬಂದಿದ್ದಾಳೆ ನಿಮ್ಮ ಮಗಳು'  ಎಂದು ಆರೋಪಿಸಿದ. 

ಕಣ್ಣೆದುರೇ ತೂರಾಡುತ್ತಿದ್ದ ಅಳಿಯನನ್ನೂ, ಅವನಿಗೆ ಒಂದು ಮಾತನ್ನೂ ಹೇಳದೆ ಚಿಟ್ಟಿಯ ಮೇಲೆ ಕೂಗಾಡುತ್ತಿರುವ ಬಿಗಪ್ಪನನ್ನೂ ನೋಡಿದ ಅಪ್ಪನಿಗೆ ಚಿಟ್ಟಿಯ ಸಂಸಾರ ಚೆನ್ನಾಗಿ ನಡೆದಿಲ್ಲ. ತಾನು ಕಳೆದೊಂದು ವಾರದಿಂದ ಸಂಶಯಪಟ್ಟಂತೆ ಏನೋ ಅನಾಹುತವಾಗಿದೆ ಎಂದು ಸ್ಪಷ್ಟವಾಯಿತು.  ' ನನ್ನ ಮಗಳು ಮನೆಯೊಡೆಯುತ್ತಿದ್ದಾಳಾ?  ಅದನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಲು ನಿಮ್ಮ ಮಗ ಯಾವ ಪ್ರಯತ್ನ ಮಾಡುತ್ತಿದ್ದಾನೆ.  ತನ್ನನ್ನೇ  ತಾನು  ಸಂಭಾಳಿಸಿಕೊಳ್ಳಲಾಗದವ ... ಅವರು ಮುಂದೇನು ಅನ್ನುವವರಿದ್ದರೋ, ತಮ್ಮಂಥ ದೊಡ್ಡ ಮನೆತನಕ್ಕೆ ಒಂದು ಗಂಡು ಮಗುವನ್ನೂ ಹೆತ್ತು ಕೊಡದಂತಹ ಅವಳಿಂದ ಏನು ಪ್ರಯೋಜನ ಎಂದೂ ತಾವು  ದೊಡ್ಡಮನೆತನದವರು  ಆದ್ದರಿಂದ ದೊಡ್ಡ ಮನಸ್ಸಿನವರು ಆದ್ದರಿಂದ ಬರೀ ಹೆಣ್ಣನ್ನೇ ಹೆತ್ತಿದ್ದರೂ ಇನ್ನೂ ಇಟ್ಟುಕೊಂಡಿದ್ದೇವೆಂದೂ ಬೀಗಪ್ಪ ಶುರು ಮಾಡಿಕೊಂಡ.  'ಈಗಲೂ ಏನಾಯಿತು?  ಇನ್ನೊಂದು ಒಂಬತ್ತು ತಿಂಗಳು ಇಟ್ಟುಕೊಳ್ಳುತ್ತೇವೆ ಅಷ್ಟರಲ್ಲಿ ಒಂದು ಗಂಡು ಹೆತ್ತರೆ ಸರಿ, ಇಲ್ಲವಾದರೆ ...' ಬೀಗಪ್ಪನ ಮಾತನ್ನು ಅಲ್ಲಿಗೆ ತುಂಡರಿಸಿ, ' ಇಲ್ಲವಾದರೆ ಮೂರು ಮಕ್ಕಳೊಂದಿಗೆ ನನ್ನ ಮಗಳನ್ನು ... '

ಮುಂದೆ ಮಾತನಾಡಲಾಗದೇ ತಂದೆ ಮಗಳ ಕೈಹಿಡಿದುಕೊಂಡು ಹೊರಗೆಳೆದುಕೊಂಡು ಬಂದವರೇ ಅಲ್ಲಿಂದ ನೇರವಾಗಿ ನಡೆದು ಕಾರು ಹತ್ತಿ ಮನೆಗೆ ಬಂದು ಬಿಟ್ಟರು.   ತಮ್ಮ ಜೀವನದಲ್ಲಿ ಎಂಥ ದೊಡ್ಡ ಆಘಾತವಾಯಿತು ಎಂದು ಚಿಟ್ಟಿಗಾಗಲೀ ಚಿಟ್ಟಿಯ ಗಂಡನಿಗಾಗಲೀ ತಿಳಿಯುವದಕ್ಕೆ ಮೊದಲೇ ಎಲ್ಲ ಮುಗಿದು ಹೋಯಿತು.  ನಡೆದದ್ದೇನು ಎನ್ನುವುದರ ಸರಿಯಾದ ಕಲ್ಪನೆಯಿದ್ದ ಚಿಟ್ಟಿಯ ತಂದೆ-ತಾಯಿ, ಅವಳ ಅಜ್ಜಿ, ಸೋದರಮಾವ ಎಲ್ಲರೂ ಅವಳನ್ನು ಅತ್ಯಂತ  ನಾಜೂಕಿನಿಂದ ನೋಡಿಕೊಳ್ಳತೊಡಗಿದರು.  

ಮುಂದೆ ಎರಡು ಮೂರು ತಿಂಗಳಿನ ನಂತರ ಚಿಟ್ಟಿಗೆ ತನ್ನ ಜೀವನದಲ್ಲಿ ಏನಾಯಿತು ಎಂಬ ಅರಿವು ಉಂಟಾಗತೊಡಗಿತು.  ಗಂಡ ಎನ್ನಿಸಿಕೊಂಡ ಪ್ರಾಣಿ ಅವಳನ್ನೆಂದೂ ಚೆನ್ನಾಗಿ ನೋಡಿಕೊಂಡಿರಲೇ ಇಲ್ಲ. ಆದ್ದರಿಂದ ಆ ವಿಷಯದಲ್ಲಿ ಅವಳೇನೂ ಅಷ್ಟು ದುಃಖಿಯಾಗಿರಲಿಲ್ಲ.  ಆದರೆ ತನ್ನ ಮಕ್ಕಳನ್ನು ಇನ್ನು ತಾನೇ ಸಾಕಬೇಕಲ್ಲ, ತನಗೆ ತನ್ನದೇ ಆದ ಗಳಿಕೆಯಿಲ್ಲ, ಗಂಡನ ಮನೆಯಿಂದ ಯಾವ ಆಸ್ತಿಯೂ ಬಂದಿಲ್ಲ ಎಂಬ ವಿಷಯಗಳೆಲ್ಲ ಒಂದೊಂದಾಗಿ ತಿಳಿಯತೊಡಗಿದಂತೆ ಅವಳಿಗೆ ಎಷ್ಟೊಂದು ಗಾಬರಿಯಾಯಿತೆಂದರೆ ಅವಳ ಬಾಯಿಂದ ಮಾತೇ ಹೊರಡದಂತಾಯಿತು.  ಎತ್ತಲೋ ನೋಡುತ್ತ ಶೂನ್ಯ ಮನಸ್ಕಳಾಗಿ ಗಂಟೆಗಟ್ಟಲೇ ಕುಳಿತುಬಿಡುತ್ತಿದ್ದಳು.  

ಇದೆಲ್ಲ ಕಳೆದು ಅವಳು ಸಾಮಾನ್ಯ ಜೀವನಕ್ಕೆ ಮರಳಿ ಬರಬೇಕಾದರೆ  ಅವಳಿಗೆ ಹತ್ತು ವರ್ಷಗಳೇ ಬೇಕಾದವು.  ಈ ನಡುವೆ ಎಂದೂ ಅವಳ ಗಂಡನಾಗಲೀ ಗಂಡನ ಮನೆಯವರಾಗಲೀ ಅವಳನ್ನು ನೋಡಲು ಬರಲಿಲ್ಲ.  ಅವಳು ಅಧಿಕೃತ ವಿಧವೆಯೂ ಅಲ್ಲ.  ಹಾಗೆಂದು ಮದುವೆಯಾದವಳು ಎನ್ನುವಂತೆಯೂ ಇರಲಿಲ್ಲ.  ಅವಳ ಮಕ್ಕಳಂತೂ ತಂದೆ ಎದುರಿಗೆ ಬಂದರೂ ಗುರುತು ಹಿಡಿಯುತ್ತಿರಲಿಲ್ಲ.  ಯಾಕೆಂದರೆ ಅವು ಅವನನ್ನು ಸರಿಯಾಗಿ ನೋಡಿರಲೂ ಇಲ್ಲ. ಆದರೆ ದಿನಗಳು ಕಳೆಯುತ್ತಿದ್ದಂತೆ ಚಿಟ್ಟಿ ಬಿರುಸಾಗತೊಡಗಿದಳು.  ಈಗೀಗಂತೂ ಅವಳ ತಾಯಿಯ ಆರೋಗ್ಯವು ಚೆನ್ನಾಗಿರುತ್ತಿರಲಿಲ್ಲ.  ಮಗಳ ಜೀವನದಲ್ಲಾದ ಆಘಾತ ಅವರನ್ನು ಹಣ್ಣುಹಣ್ಣುಮಾಡಿತ್ತು.  ಅವರ ಔಷಧೋಪಚಾರ ಮಾಡುವ ದೈಹಿಕ ಶಕ್ತಿ ಅಪ್ಪನಲ್ಲೂ ಉಳಿದಿರಲಿಲ್ಲ.  ಚಿಟ್ಟಿಯ ಅಣ್ಣನೊಬ್ಬನೇ ಈಗ ಗಳಿಸುವವ.  ಹೀಗಾಗಿ ಅವನು ನೌಕರಿ ಬಿಟ್ಟು ಬರುವಂತಿರಲಿಲ್ಲ.  ಅವಶ್ಯಕತೆ ಇದ್ದಾಗಲೆಲ್ಲ ಯಾವ ಪ್ರಶ್ನೆಯನ್ನೂ ಕೇಳದೇ ಹಣ ಕಳುಹಿಸುತ್ತಿದ್ದ.  ಚಿಟ್ಟಿಯೇ ಅವರಿಬ್ಬರ ಯೋಗಕ್ಷೇಮ, ಅವರ ಆಸ್ತಿಯೆಲ್ಲವನ್ನೂ ನೋಡಿಕೊಳ್ಳತೊಡಗಿದಳು.  ತಂದೆಯ ಆಸ್ತಿಯಲ್ಲಿ ಅವಳಿಗೂ ಪಾಲು ಬಂದಿದ್ದರಿಂದ ಹಣಕ್ಕೇನೂ ಕೊರತೆ ಇರಲಿಲ್ಲ.  

ಈಗ ಅವಳ ಲೋಕಜ್ಞಾನ ಎಷ್ಟೊಂದು ಬೆಳೆದಿತ್ತೆಂದರೆ ಗಂಡನ ಅಸ್ತಿಯಲ್ಲಿಯೂ ಪಾಲುಬೇಡಿ ಖಟ್ಲೆ ಹಾಕಿದಳು.  ಎಂದೂ ಅವಳ ಇರವನ್ನೂ ಗಮನಿಸದ ಅವಳ ನಾದಿನಿ ಅತ್ತಿಗೆಯರು ಈಗ ಆಸ್ತಿಯಲ್ಲಿ ಪಾಲು ಬೇಡತೊಡಗಿದರು.  ಅವಳು ಎದೆಗುಂದದೇ ಎಲ್ಲವನ್ನೂ ಸಲೀಸಾಗಿ ಎದುರಿಸುತ್ತಿದ್ದಾಳೆ.  ಅತ್ಯಂತ ಭ್ರಷ್ಟ ನ್ಯಾಯಾಂಗ ವ್ಯವಸ್ಥೆಯನ್ನು ಒಂಟಿ ಹುಡುಗಿ ದಿಟ್ಟತನದಿಂದ ಯಾವ ಚೆನ್ನಮ್ಮನಿಗೂ ಕಡಿಮೆ ಇಲ್ಲದಂತೆ ಎದುರಿಸುತ್ತಿದ್ದಾಳೆ.  ಸಂಸಾರದ ಭಾರವಷ್ಟೇ ಆದರೆ ಸಂಸಾರವಿಲ್ಲದ ಬಾಳು, ಮಕ್ಕಳ ಮದುವೆಯ ಚಿಂತೆ, ತಂದೆ ತಾಯಿ ಎಂಬ ಇಬ್ಬರು ಹಿರಿಯರನ್ನು ನೋಡಿಕೊಳ್ಳುವ ಭಾರ, ಕೋರ್ಟು ಕಚೇರಿ ಮುಂತಾದ ಭ್ರಷ್ಟ ವ್ಯವಸ್ಥೆಯ ವಿರುದ್ಧದ  ಹೋರಾಟ ಇವುಗಳಲ್ಲಿ ದಿನ ನೂಕುತ್ತಿದ್ದಾಳೆ. 

ಸುಂದರ ನಾಚುಬುರುಕ ಹುಡುಗೆಯಾಗಿದ್ದ ಅವಳಿಂದು ಯಾವುದಕ್ಕೂ ಜಗ್ಗದೇ, ನಾನು ನಡೆದದ್ದೇ ದಾರಿ ಎನ್ನುವ ಬಿರುಸು ಹೆಣ್ಣಾಗಿದ್ದಾಳೆ.  ತನ್ನ ಕೆಲಸವನ್ನು ಸಾಧಿಸಿಕೊಳ್ಳಲು  ಯಾವ ಅನ್ಯಾಯವನ್ನು ಮಾಡಲೂ, ಯಾರಿಗೆ ಲಂಚ ಕೊಡಲೂ, ಯಾರ ವಶೀಲಿ ಹಚ್ಚಲೂ ಹಿಂದೆ ಮುಂದೆ ನೋಡುವುದಿಲ್ಲ. 

ಅವಳಿಂದು ಹೀಗಾಗಲು ಈ ಸಮಾಜದ ಅಲಿಖಿತ ನಿಯಮಗಳೇ ಕಾರಣ.  ಹಣವೆಷ್ಟೇ ಇದ್ದರೂ ಹೆಣ್ಣು ಮಕ್ಕಳಿಗೂ ಶಿಕ್ಷಣ ಕೊಡಿಸಬೇಕು , ತನ್ಮೂಲಕ ತನ್ನ ಕಾಲಮೇಲೆ ತಾನು ನಿಲ್ಲುವ ಯೋಗ್ಯತೆ ಬೆಳೆಸಬೇಕು,  ಬರೀ ಶ್ರೀಮಂತಿಕೆಯೊಂದಿದ್ದು ಯೋಗ್ಯತೆಯಿಲ್ಲದ ಹುಡುಗನೊಂದಿಗೆ ಮದುವೆ ಮಾಡಬಾರದು.  ಮಕ್ಕಳನ್ನು ಬೆಳೆಸಲು ತಂದೆಗಿದ್ದಷ್ಟೇ ತಾಯಿಗೂ ಸ್ವಾತಂತ್ರ್ಯವಿರಬೇಕು.  ಇಲ್ಲವಾದರೆ ಚಿಟ್ಟಿಯ ಗಂಡನಂತಹ ಹುಡುಗರೇ ತಯಾರಾಗುವರು.  ಗಂಡಹೆಂಡಿರ ಜೀವನ ಸುಗಮವಾಗಲು ಗಂಡುಸಂತಾನ ಕಾರಣವಾಗಬಾರದು ಎಂದು ಸಮಾಜ ತಿಳಿಯಬೇಕು.  ಚಟಗಳಿದ್ದವನೇ ಗಂಡಸು, ಗಂಡಸು ಏನು ಮಾಡಿದರೂ ನಡೆಯುತ್ತದೆ ಎಂಬ ವಿಚಾರದವರನ್ನು ಮಟ್ಟಹಾಕಬೇಕು.   ವ್ಯವಸ್ಥೆಯಲ್ಲಿ ತುಂಬಿರುವ ಭ್ರಷ್ಟಾಚಾರವನ್ನು ತಡೆಯಲು ಯಾರಾದರೂ ಪ್ರಯತ್ನಿಸುತ್ತಿದ್ದರೆ ಅಂಥವರ ಜೊತೆ ಕೈಗೂಡಿಸಬೇಕು.  ಇಲ್ಲವಾದರೆ ಚಿಟ್ಟಿಯಂತೆ ಅದರದೇ ಒಂದು ಅಂಗವಾಗಿ ಬಿಡುವ ಸಾಧ್ಯತೆಗಳೇ ಹೆಚ್ಚು. 
-ಭಾರತಿ ತೊರಗಲ್ಲ 
೯೪೮೧೫೨೧೧೫೦ 

ಸುದ್ದಿ ಓದಿ