ಲೇಖನಗಳು

ಎಲ್ಲಿ ಸ್ಪಷ್ಟ ಚಿಂತನೆಯೋ ಅಲ್ಲಿ ಸುಂದರ ಸಮಾಜ.

ಎಲ್ಲಿ ಸ್ಪಷ್ಟ ಚಿಂತನೆಯೋ ಅಲ್ಲಿ ಸುಂದರ ಸಮಾಜ.

ವಾರಿಧಿ ಇದ್ದುಳ್ಳ ಮನೆಯ ಹುಡುಗೆ. ಸುರ ಸುಂದರಿ ಏನಲ್ಲ.  ಆದರೆ ಹಾಗೆಂದು ಕುರೂಪಿಯೂ ಅಲ್ಲ,  ಕೆಂಪು ಬಣ್ಣ.  ಎತ್ತರದ  ಆಳು.  ಅತಿ ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡಳು.  ಅವರದು ಕೂಡು ಕುಟುಂಬ.  ಅದೂ ಹಿಂದಿನ ಕಾಲದ್ದು.  ತಂದೆಯ ಪ್ರತಿಯೊಬ್ಬ ಸಹೋದರನದೂ ದೊಡ್ಡ ಸಂಸಾರ.  ಮನೆತುಂಬ ಜನ.  ಅದರ ಮೇಲೆ ಸ್ನೇಹಿತರ ಮಕ್ಕಳು, ಪೈಕದವರು, ವಾರದ ಹುಡುಗರು.  ಹೀಗಾಗಿ ತಂದೆ ಎಷ್ಟೇ ಗಳಿಸಿದರೂ ಸಾಲದಂತಹ ಪರಿಸ್ಥಿತಿ.   ಏಳು ಜನ ಸಹೋದರ ಸಹೋದರಿಯರು . ಮನೆತುಂಬ ಜನರ ಮಧ್ಯೆ ಯಾವಾಗ ಬಾಲ್ಯ ಕಳೆದು ಹೋಯಿತೋ ತಿಳಿಯಲೇ ಇಲ್ಲ.  ವಾರಿಧಿ ನವತಾರುಣ್ಯದಲ್ಲಿ ಕಾಲಿಡುತ್ತಿದ್ದಳು.  ಆದರೆ ಮನೆಯಲ್ಲಿ ಇವಳಿಗಿಂತ ದೊಡ್ಡವರ ಮದುವೆಯಾಗಿರಲಿಲ್ಲ.  ಗಂಡು ಹುಡುಗರ ಶಿಕ್ಷಣ ಮುಗಿದಿರಲಿಲ್ಲ.  ಹೀಗಾಗಿ ಇವಳತ್ತ ಯಾರೂ ಲಕ್ಷ್ಯ ಹಾಕಲಿಲ್ಲ.  


ಪರಿವಾರದವರು ಲಕ್ಷ್ಯ ಕೊಡದಿದ್ದರೇನಾಯಿತು.  ಹೊರಗಿನವರು ಇವಳನ್ನು ಕನ್ಯೆ ಎಂತಲೇ ನೋಡತೊಡಗಿದರು.  ಬೇಡಿಕೆ ಹಾಕತೊಡಗಿದರು.  ಆದರೆ ಮನೆಯಲ್ಲಿ ಇನ್ನೂ ಆ ವಾತಾವರಣವೇ ಇಲ್ಲದ್ದರಿಂದ ಅವರ ಬೇಡಿಕೆಗಳಿಗೆ ಮನೆಯರಿಂದ ಪ್ರತಿಕ್ರಿಯೆಯೇ ಬರುತ್ತಿರಲಿಲ್ಲ.  ಈ ನಡುವೆ ವಾರಿಧಿಯ ಗೆಳತಿಯರು ಒಬ್ಬೊಬ್ಬರಾಗಿ ನಿಧಾನವಾಗಿ ಮದುವೆಯಾಗತೊಡಗಿದರು.  ತನ್ನ ಮದುವೆಯನ್ನೂ ಮಾಡಬಹುದಲ್ಲ ಎಂದು ವಾರಿಧಿಗೆ ಒಮ್ಮೊಮ್ಮೆ ಅನ್ನಿಸಿದರೂ ಅವಳಿಗೆ ಓದುವ ಆಸೆ ಬಹಳ ಇದ್ದುದರಿಂದ ಮದುವೆಗಿಂತ ಹೆಚ್ಚಾಗಿ ಕಾಲೇಜು ಜೀವನದ ಕನಸನ್ನು ಅವಳು ಕಾಣುತ್ತಿದ್ದಳು.  ಈ ನಡುವೆ ಮೆಟ್ರಿಕ್ ವರೆಗಿನ ಅವಳ ಶಿಕ್ಷಣ ಮುಗಿಯಿತು.  ಕಾಲೇಜಿಗೆ ಹೋಗಬಹುದಲ್ಲ ಎಂಬ ಕನಸು ಅವಳದು.  ಮನೆಯಲ್ಲಿ ಪೂರ್ಣಾವಧಿ ಕೆಲಸ ಮಾಡಲು ಒಬ್ಬಳು ಸಿಗುವಳಲ್ಲ ಎಂಬ ಕನಸು ಉಳಿದವರದು.  ಎರಡು ಮೂರು ದಿನ ಉಪವಾಸ ಕುಳಿತರೂ,  'ಕಲಿತು ಏನು ಮಾಡುತ್ತೀ ಎಂದೇ ಎಲ್ಲರೂ ಅಂದರೇ ಹೊರತು ಕಲಿಸಲು ಯಾರೂ  ಬರಲಿಲ್ಲ.   ವಾರಿಧಿ ಮದುವೆಯೂ ಇಲ್ಲದೇ, ಮುಂದಿನ ಶಿಕ್ಷಣವೂ ಇಲ್ಲದೇ ಮನೆಯಲ್ಲಿ ಅಡುಗೆ ಮಾಡುತ್ತ ಉಳಿದಳು.  ಮೇಲಿನ ಕೆಲ ಅಕ್ಕಂದಿರ ಅಣ್ಣಂದಿರ ಮದುವೆಯಾಗುವ ಹೊತ್ತಿಗೆ ಇವಳಿಗಾಗಲೇ ೨೨ ವರ್ಷ.  ತಳ್ಳಗೆ,ಬೆಳ್ಳಗೆ, ಎತ್ತರಕ್ಕಿರುವ ಇವಳನ್ನು ಕೇಳಿಕೊಂಡು ಅನೇಕ ಸ್ಥಳಗಳು ಬಂದರೂ ದೊಡ್ಡವಳ ಮದುವೆಯಾಗದೇ ಚಿಕ್ಕವಳ ಮದುವೆಯಾದರೆ ದೊಡ್ಡವಳಿಗೆ ಏನೋ ಐಬು ಇದೆ ಎಂದೇ ಅರ್ಥ ಮಾಡುವ ಕಾಲ ಅದಾಗಿತ್ತು.  ಹೀಗಾಗಿ ಇವಳ ಮದುವೆ  ಮತ್ತೂ ಹಿಂದೆ ಬಿದ್ದಿತು.  ಮನೆಯಲ್ಲಿ ಕುಳಿತು ತಿನ್ನುವವರು,  ಬರು ಹೋಗುವ ಜನ.   ಮದುವೆಯಾದ ಅಣ್ಣಂದಿರು ಎಷ್ಟು ದಿನ ಇವರ ಖರ್ಚು ನೋಡಿಯಾರು.  ವಾರಿಧಿಯ  ಮದುವೆ ಗೊತ್ತಾಗಲಿ ಖರ್ಚಿಗೆ ಕೊಡುತ್ತೇವೆ ಎಂದು ಹೇಳುತ್ತಾ ಒಬ್ಬೊಬ್ಬರಾಗಿ ಮನೆಯಿಂದ ಜಾರಿಕೊಂಡರು.  ಮೇಲಿನ ಎಲ್ಲರ ಮದುವೆಯೂ ಆಯಿತು. ತಂಗಿಗೆ ಹುಡುಗನನ್ನು ಹುಡುಕುವ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಯಾರೂ ತಯಾರಾಗಲಿಲ್ಲ. ಮನೆಯಲ್ಲಿ ಉಳಿದವರು ೨೪ ವರ್ಷದ ವಾರಿಧಿ ಹಾಗೂ ಅವಳ ತಂದೆ. ತಂದೆ  ಅಲ್ಲಿ ಇಲ್ಲಿ  ಹುಡುಗನನ್ನು ಹುಡುಕಲು ಅಲೆಯುತ್ತಿದ್ದರು.  ಆದರೆ ವರದಕ್ಷಿಣೆಯ  ವಿಷಯ ಕೇಳಿ ಹಿಂದೆಗೆದು ಬಿಡುತ್ತಿದ್ದರು. 

ಈ ನಡುವೆ ತಂದೆಗೆ ಹಾರ್ಟ್ ಅಟ್ಯಾಕ್ ಬಂದಿತು.  ಎಲ್ಲಿಯೂ ಹೊರಗೆ ಅಡ್ಡಾಡುವ ತಾಕತ್ತು ಅವರಿಗೆ ಉಳಿಯಲಿಲ್ಲ.  ಅವರ ಆಸ್ಪತ್ರೆ, ಔಷಧಿ, ಸೇವೆಗಳ ನಡುವೆ ಒಮ್ಮೊಮ್ಮೆ ತೀವ್ರ ಮನಸ್ತಾಪದಿಂದ ಅವರನ್ನು ಬೈಯುವದು ನಂತರ ಪಶ್ಚತ್ತಾಪದಿಂದ ಅಳುವುದೇ ವಾರಿಧಿಯ ಜೀವನವಾಗಿ ಹೋಯಿತು. ಅವರು ಮರಣ ಹೊಂದಿದಾಗ ಅವಳಿಗೆ ೨೮ ವರ್ಷ ವಯಸ್ಸು.  ತಂದೆಯ ದಿನಕರ್ಮಗಳೆಲ್ಲ ಮುಗಿದ ಮೇಲೆ ಆ ದೊಡ್ಡ ಮನೆಯಲ್ಲಿ ವಾರಿಧಿ ಒಬ್ಬಳೇ ಇರತೊಡಗಿದಳು.  ಈಗ ಮಾತ್ರ ಮನದಲ್ಲಿ ಧೃಡ ನಿಶ್ಚಯ ಮಾಡಿಕೊಂಡಳು.  ಇನ್ನು ಮೇಲೆ ಮದುವೆ  ಬೇಡ.  ತನ್ನ ಹೆಸರಿಗೇ ಕೆಲ ಆಸ್ತಿಯನ್ನು ಬರೆಸಿಕೊಂಡು ಯಾರಿಗೂ ಕೈಯೊಡ್ಡದೇ ತನ್ನ ಕಾಲಮೇಲೆ ತಾನು ನಿಲ್ಲುವುದು ಎಂದು. 

ಇಡೀ ದಿನದ ಕತ್ತೆ ದುಡಿತವಿಲ್ಲ.  ಸಂಪೂರ್ಣ ಸ್ವಾತಂತ್ರ್ಯ. ಎಲ್ಲ ದೊರಕಿತು.  ಆದರೆ ಅತೃಪ್ತ ಮನಸ್ಸು.  ಕಂಡ ಕಂಡವರ ಮೇಲೆ ಹರಿಹಾಯುತ್ತಿತ್ತು.  ಆಸ್ತಿ ಹಂಚುವಾಗ, ಮನೆಗೆ ಪೈಕದವರು ಬಂದಾಗ ಇವಳು ಎದುರಿಗೆ ಸಿಕ್ಕ ಎಲ್ಲರನ್ನೂ ಬೈದುಕೊಳ್ಳುತ್ತಿದ್ದಳು.  ಅವಳ ಅಕ್ಕಂದಿರೂ ತಮ್ಮ ತಮ್ಮ ಮನೆಗಳಲ್ಲಿ ಕೈದಿಗಳೇ.  ಹಾಗಾಗಿ ಅವರು ಆಗೀಗ ತಮ್ಮ ಕೈಲಾದಷ್ಟು ಮಾಡುತ್ತಿದ್ದರು.  ಬರಬರುತ್ತ ಒದರಾಟ, ಬೈಗುಳಗಳು ಹೆಚ್ಚಿಗೆ ಆದಾಗ 'ದುಷ್ಟ ಹೆಣ್ಣು ಮಗಳು'  ಎಂದು ಬಿರುದಾಂಕಿತಳಾದಳು.  

ಈಗ ಸಾಕಷ್ಟು ಆಸ್ತಿ ಇತ್ತು.  ಅಕ್ಕಂದಿರೂ, ಅಣ್ಣ-ತಮ್ಮಂದಿರೂ ಅವಳಿಗೆ ಸಾಕಷ್ಟು ಆಸ್ತಿಯನ್ನು ಬಿಟ್ಟುಕೊಟ್ಟಿದ್ದರು.  ಆದ್ದರಿಂದ ಈಗ ಅವಳಿಗೆ ಕೈತುಂಬಾ ಹಣವಿತ್ತು.  ಆದರೆ ಬಡತನದಲ್ಲಿಯೇ ಬೆಳೆದು ಬಂದಿದ್ದರಿಂದ ಕೈ ಹಿಡಿದು ಖರ್ಚು ಮಾಡುವ ಅಭ್ಯಾಸ ಇನ್ನೂ ಹೋಗಿರಲಿಲ್ಲ.  ಹಾಗಾಗಿ ಕೈಯೆತ್ತಿ ಯಾರಿಗೂ ಏನೂ ಕೊಡುತ್ತಿರಲಿಲ್ಲ.  ತನ್ನ ಮೇಲೂ ಖರ್ಚು ಮಾಡುತ್ತಿರಲಿಲ್ಲ.  ಯಾರೇ ಬಂದರೂ ಅವರೇ  ತನಗೆ ಏನಾದರೂ ಮಾಡಲಿ ಎಂದು ಅಪೇಕ್ಷಿಸುತ್ತಿದ್ದಳು.  ಅಕ್ಕಂದಿರ ಬಾಣಂತಿತನ, ಸೂಟಿಗೆ ಅಜ್ಜನ ಮನೆಗೆಂದು ಹುಡುಗರು ಬಂದಾಗ ಅವರಿಗೆ ಮಾಡುವುದು, ಅವರೊಂದಿಗೆ ಆಡುವುದು, ವೇಳೆ ತೆಗೆಯುವದು ಎಲ್ಲವನ್ನೂ ಮಾಡಿದ್ದಳು.  ಹುಡುಗರು ದೊಡ್ಡವರಾದಂತೆ ತಾವು ಹೋದಲ್ಲೆಲ್ಲ ಅವಳನ್ನೂ ಕರೆದುಕೊಂಡು ಹೋಗುತ್ತಿದ್ದರು.  ಸಾಕಷ್ಟು ಅಂತಃಕರಣ ಮಾಡುತ್ತಿದ್ದರು.  ಆದರೂ, 'ಎಲ್ಲರೂ ನನ್ನ ಕಡೆಯಿಂದ ಮಾಡಿಸಿಕೊಂಡರು.  ಆದರೆ ನನಗೆ ಯಾರೂ ಮಾಡುವುದಿಲ್ಲ' ಎಂದೇ ದುಃಖಿಸುತ್ತಿದ್ದಳು.  ಅದರಿಂದಾಗಿ ಮಾಡಿದವರ ಮನಸ್ಸೂ ಮುರಿದು ಹೋಗುತ್ತಿತ್ತು. 

ಅವಳ ಹೃದಯದಲ್ಲಿ ಅಡಗಿದ ಒಂದು ಶೂನ್ಯತೆ ಅವಳಿಂದ ಈ ರೀತಿಯೆಲ್ಲ ಮಾತನ್ನಾಡಿಸುತ್ತಿತ್ತು.  ಆದರೆ ಯಾರೂ ಅದನ್ನು ಅರ್ಥ ಮಾಡಿಕೊಳ್ಳಲೇ ಇಲ್ಲ.  ಎಂದೂ ಅವಳ ಆಸೆ ಎನ್ನುವುದು ಈಡೇರಿರಲೇ ಇಲ್ಲ.  ಅವಳೇನೂ ಮಹಾನ್ ಸಾಮ್ರಾಜ್ಯದ ಮಹಾರಾಣಿಯಾಗಬೇಕೆಂದು ಬಯಸಿರಲಿಲ್ಲ.  ನಾಲ್ಕು ಜನ ಸಾಮಾನ್ಯ ಹುಡುಗೆಯರು ಬಯಸುವದನ್ನೇ ಬಯಸಿದ್ದಳು.  ಚಿಕ್ಕವಳಿದ್ದಾಗ ಶಾಲೆಯಿಂದ ಮನೆಗೆ ಬಂದ ತಕ್ಷಣ ಆಡಲು ಹೋಗಬೇಕೆಂದು ಬಯಸಿದ್ದಳು.  ಅದು ಸಾಧಿಸಲಿಲ್ಲ.  ಕಾಲೇಜು ಶಿಕ್ಷಣವನ್ನು ಬಯಸಿದಳು.  ಅದು ಈಡೇರಲಿಲ್ಲ.  ಹರೆಯದಲ್ಲಿ ನಾಲ್ಕು ಊರು ಸುತ್ತಬೇಕು, ಗೆಳತಿಯರೊಂದಿಗೆ ಅಲ್ಲಲ್ಲಿ ಪ್ರವಾಸಕ್ಕೆ ಹೋಗಬೇಕು ಎಂದು ಬಯಸಿದ್ದಳು.  ಆದರೆ ವಾರಿಧಿಯ ಕಥೆ. 

ಮೊದಮೊದಲು ಕೈಯಲ್ಲಿ ದುಡ್ಡಿರಲಿಲ್ಲ.  ನಂತರ  ಜಡ್ಡಿನ ಅಪ್ಪನ ಹೊಣೆಗಾರಿಕೆ.  ಮದುವೆಯ ವಯಸ್ಸಿನಲ್ಲಿ ಮದುವೆಯಾಗಲಿಲ್ಲ.ತನ್ನ ಹತಾಶೆಯನ್ನು ಯಾರದಾದರೂ ಮುಂದೆ ತೋಡಿಕೊಂಡು ಅಳಬೇಕೆಂದರೆ ಅವಳಿಗೆ ಆಸರೆಯಾಗಿ ಭುಜ ನೀಡಲೂ ಯಾರೂ ಇರಲಿಲ್ಲ.   ಅಂತಹವಳು ಅವಕಾಶ ಸಿಕ್ಕಾಗ ಕಂಡವರ ಮೇಲೆಲ್ಲ ಕೂಗಾಡುವುದನ್ನು ಬಿಟ್ಟು ಬೇರೆ ಏನು ಮಾಡಲು ಸಾಧ್ಯ? ಈಗ ಮುಪ್ಪಿನ ದಿನಗಳು ಬಂದು, ಉಂಡು-ಉಡುವ ಆಸೆಗಳೆಲ್ಲ ಕಮರಿ, ತಿರುಗಾಡಲು ಶಕ್ತಿ ಸಾಲದಂತಾದಾಗ ಅಕ್ಕನ ಮಕ್ಕಳು ಅಣ್ಣನ ಮಕ್ಕಳು ಅವಳಿಗೆ ಬೇಕಾದದ್ದನ್ನು ಮಾಡಲು ಸಿದ್ಧರಿದ್ದಾರೆ.  ಆದರೆ ಏನು ಪ್ರಯೋಜನ?  ಇದನ್ನೆಲ್ಲ ಅನುಭವಿಸಿದ್ದರ ಫಲ, 'ಮಹಾ ದುಷ್ಟ ಹೆಣ್ಣು ಮಗಳು', 'ಯಾರ ಸಂಸಾರವನ್ನು ಒಡೆದಿದ್ದಳೋ ಈಗ ಅನುಭವಿಸುತ್ತಿದ್ದಾಳೆ', ' ಇಂಥ ದುಷ್ಟ ಹೆಂಗಸನ್ನು ಯಾರು ಮದುವೆಯಾಗುವವರು?' ಎಂಬೆಲ್ಲ ಮೂದಲಿಕೆಗಳು. 

ಹೊಲಿಗೆ, ಹೆಣಿಗೆ, ಮನೆಯನ್ನು ಸ್ವಚ್ಛವಾಗಿಡುವುದು, ಅಭ್ಯಾಗತರ ಆತಿಥ್ಯ, ತುಸುಮಟ್ಟಿಗೆ ಹಾಡುಹೇಳುವಷ್ಟು ಇಂಪಾದ ಧ್ವನಿ ಅಂದರೆ ಒಂದು ಹುಡುಗೆ ಒಂದು ಸಂಸಾರವನ್ನು  ನಡೆಸಿಕೊಂಡು ಹೋಗಲು ಬೇಕಾದಂತಹ ಎಲ್ಲವೂ ಅವಳ ಬಳಿ ಇತ್ತು.  ಆದರೆ ಅವಳ ಜೀವನ ದಡಕಾಣದ ದೋಣಿಯಂತಾಯಿತು.  ಇದು ಯಾರ ತಪ್ಪು?  ತಮ್ಮ ಆದಾಯವೆಷ್ಟು ಎಂದು ಲೆಕ್ಕ ಹಾಕಿ, ತಾವು ನೀಗಿಸಬಲ್ಲಷ್ಟೇ ಸಂಸಾರವನ್ನಿಟ್ಟುಕೊಳ್ಳದ ತಂದೆ, ದೊಡ್ಡವಳ ಮದುವೆಯಾಗದೆ ಸಣ್ಣವಳ ಮದುವೆ ಮಾಡಬಾರದೆಂಬ ಸಮಾಜದ ದೃಷ್ಟಿಕೋನ ಇವೆಲ್ಲ ಸಮಾಜದ ಅಲಿಖಿತ ನಿಯಮಗಳು ವಾರಿಧಿಯಂತಹ ಉತ್ತಮ ಹುಡುಗೆಯ ಜೀವನವನ್ನು ಬಲಿತೆಗೆದುಕೊಂಡವು  ಸಮಾಜ ಮದುವೆಯಾದ ಹೆಣ್ಣುಮಕ್ಕಳಿಗೆ ಗಂಡನ ಮನೆಯಲ್ಲಿ ತುಸು ಸ್ವಾತಂತ್ರ್ಯವನ್ನು  ಕೊಟ್ಟಿದ್ದರೆ ವಾರಿಧಿಯ ಅಕ್ಕಂದಿರು ತಮ್ಮ ತಂಗಿಗೆ ಏನಾದರೂ ಮಾಡದೇ ಇರುತ್ತಿದ್ದರೆ? ಒಂದು ಹುಡುಗ ಒಂದು ಹುಡುಗಿ ಕೂಡಿ ಜೋಡಿಯಾಗಿ ಸಂಸಾರ ಮಾಡಬೇಕಾದರೆ ಹುಡುಗೆಯ ಮನೆಯವರೇ ಯಾಕೆ ಹಣ ತೆತ್ತಬೇಕು?  ಇಷ್ಟಕ್ಕೂ ಒಂದು ಮದುವೆಯಾಗಬೇಕಾದರೆ ಯಾರಾದರೂ ಏಕೆ ಖರ್ಚು ಮಾಡಬೇಕು?  ಕೋರ್ಟಿನಲ್ಲಿ ಮದುವೆ ನಮೂದಾಗಬೇಕಾದರೆ ಹಣ ಬೇಕಿಲ್ಲಎಂಬ ಸಮಾಜದ ನಿಯಮಗಳಿದ್ದರೆ, ಗಂಡಿನವರು ವರದಕ್ಷಿಣೆ ಕೇಳದಿದ್ದರೆ, ಸಾಯುವ ಮೊದಲು ವಾರಿಧಿಯ ಅಪ್ಪ ಅವಳ ಮಾಡುವೆ ಮಾಡಿಯೇ ಸಾಯುತ್ತಿದ್ದರು.  ಗುರು ಹಿರಿಯರ ಆಶೀರ್ವಾದ ಅಗ್ನಿ ಸಾಕ್ಷಿ.ಇಷ್ಟಿದ್ದರೆ ಸಾಕು ಎನ್ನುವುದೆಲ್ಲ  ಎನ್ನುವುದೆಲ್ಲ ಬೂಟಾಟಿಕೆಯ ಮಾತುಗಳು.  ಅಗ್ನಿ ಬಂದು ಸಾಕ್ಷಿ ಹೇಳುತ್ತಾನೆಯೇ?  ಒಂದು ಮದುವೆ  ಮುರಿದುಬಿದ್ದರೆ  ಮದುವೆಗೆ ಸಾಕ್ಷಿಯಾದ ಎಷ್ಟು ಜನ ಮುಂದೆ ಬಂದು, ಯಾರಿಗೂ ಅನ್ಯಾಯವಾಗದಂತೆ ಆ ಮದುವೆಯನ್ನು ಉಳಿಸಲು ಪ್ರಯತ್ನಿಸುತ್ತಾರೆ?  ಬದಲು ತಮಗೆ ತಿಳಿದಷ್ಟು ಛಿಮಾರಿ ಹಾಕಿ ಹೋಗುವವರೇ ಬಹಳ ಜನ.   

ಸಮಾಜದ ಇಂಥ ಕೆಲಸಕ್ಕೆ ಬಾರದ ಕಟ್ಟಳೆಗಳಿಂದಾಗಿಯೇ ವಾರಿಧಿಯಂತಹ ಒಬ್ಬ ಜಾಣ ಸಮರ್ಥ ಹುಡುಗೆ , ಒಂದು ಸಂಸಾರವನ್ನು ಮುಂದೆ ತರುವ ಯೋಗ್ಯತೆ ಇದ್ದವಳು, ತೌರು ಮನೆಯ ಜನಗಳ ಸೇವೆ ಮಾಡಿ, ತಂದೆಯನ್ನು ಅವರ ಮುಪ್ಪಿನಲ್ಲಿ ಏಕಾಕಿಯಾಗಿ ನೋಡಿಕೊಂಡು,ಒಂದು ಗಂಡು ಹುಡುಗ ಮಾಡಬೇಕಾದದ್ದನ್ನೆಲ್ಲ ಮಾಡಿದರೂ ಸಮಾಜದಿಂದ ದುಷ್ಟ ಹೆಣ್ಣುಮಗಳು ಎಂದು ಬಿರುದಾಂಕಿತಳಾದಳು. ಅವಳ ಜೀವನವಂತೂ ಹಳ್ಳ ಹಿಡಿದು ಹೋದದ್ದು ಯಾವ ಲೆಕ್ಕಕ್ಕೂ ಇಲ್ಲ. 

-ಭಾರತಿ ತೊರಗಲ್ಲ 
೯೪೮೧೫೨೧೧೫೦

ಸುದ್ದಿ ಓದಿ