ಸಮಾಜದ ಹಿತಕ್ಕಾಗಿ ಸಂಘಟಿತರಾಗಿ ಕೆಲಸ ಮಾಡಿ: ರಾಮಲಿಂಗಯ್ಯ ಶ್ರೀಗಳು
ತಾಳಿಕೋಟಿ: ಸಮಾಜ ಎಲ್ಲಾ ದೃಷ್ಟಿಯಿಂದ ಸದೃಢವಾದಾಗ ಮಾತ್ರ ನಾವೆಲ್ಲರೂ ನೆಮ್ಮದಿಯ ಬದುಕು ನಡೆಸಲು ಸಾಧ್ಯ. ನಿಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಸಮಾಜವನ್ನು ಬಲಿಕೊಡುವ ಕೆಲಸ ಮಾಡಬೇಡಿ ಸದಾ ಸಮಾಜದ ಒಳಿತಿಗಾಗಿ ಕೆಲಸ ಮಾಡಲು ಪ್ರಯತ್ನಿಸಿ ಎಂದು ಚಬನೂರ ಹಿರೇಮಠದ ಪೀಠಾಧಿಪತಿ ಜ್ಯೋತಿಷ್ಯರತ್ನ ಪರಮ ಪೂಜ್ಯ ಶ್ರೀ ರಾಮಲಿಂಗಯ್ಯ ಮಹಾಸ್ವಾಮಿಗಳು ಹೇಳಿದರು.
ಬೇಡ ಜಂಗಮ ಕ್ಷೇಮಾಭಿವೃದ್ಧಿ ಸಂಘ ತಾಲೂಕ ತಾಳಿಕೋಟಿ ವತಿಯಿಂದ ತಾಲೂಕ ಜಂಗಮ ಜಾಗೃತಿ ಅಭಿಯಾನದ ಅಂಗವಾಗಿ ಹಡಗಿನಾಳ, ಕಲ್ಲದೇವನಹಳ್ಳಿ, ಹರನಾಳ, ಹೊಸಳ್ಳಿ, ಹೂವಿನಹಳ್ಳಿ, ರಾಂಪೂರ ಪಿಟಿ, ಬೂದಿಹಾಳ ಪಿಟಿ, ಹಾಳಗುಂಡಕನಾಳ, ತುರಕನಗೇರಿ ಹಾಗೂ ಕಲಕೇರಿ ಗ್ರಾಮಗಳಲ್ಲಿ ಹಮ್ಮಿಕೊಂಡ ಸಾರ್ವಜನಿಕ ಸಭೆಯಲ್ಲಿ ಅವರು ಸಾನಿಧ್ಯವಹಿಸಿ ಮಾತನಾಡಿದರು.
ಬೇಡ ಜಂಗಮ ಸಮಾಜವನ್ನು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ತರಲು ಹಾಗೂ ಸಮಾಜದಲ್ಲಿರುವ ಸಣ್ಣಪುಟ್ಟ ವ್ಯತ್ಯಾಸಗಳನ್ನು ಸರಿಪಡಿಸಿ ಅವರನ್ನು ಉನ್ನತ ಸಂಸ್ಕಾರಗಳೊಂದಿಗೆ ಒಗ್ಗೂಡಿಸುವ ಕೆಲಸವನ್ನು ನಾನು ಸಮಾಜಬಾಂಧವರ ಸಹಕಾರದಿಂದ ಮಾಡುತ್ತಿದ್ದೇನೆ ಇದರಲ್ಲಿ ಯಾವುದೇ ರೀತಿಯ ರಾಜಕೀಯ ಇಲ್ಲ ಇದೊಂದು ಪಕ್ಷಾತೀತವಾದ ವೇದಿಕೆ ಕಳೆದ ಒಂದು ತಿಂಗಳಿನಿಂದ ನಾವು ಈ ಅಭಿಯಾನವನ್ನು ನಡೆಸುತ್ತಿದ್ದೇವೆ ನಮ್ಮ ಸ್ವಂತ ಖರ್ಚಿನಿಂದ ಈ ಕೆಲಸ ಮಾಡುತ್ತಿದ್ದೇವೆ ಇದಕ್ಕೆ ನಿಮ್ಮೆಲ್ಲರ ಸಹಕಾರ ನನಗೆ ಬೇಕು ಎಂದರು.
ಇದೇ ಸಮಯದಲ್ಲಿ ಭೇಟಿ ನೀಡಿದ ಎಲ್ಲಾ ಗ್ರಾಮಗಳಲ್ಲಿ ಸಮಾಜದ ಗಣ್ಯರೊಂದಿಗೆ ಸಮಾಲೋಚನೆ ನಡೆಸಿ ಬೇಡಜಂಗಮ ಗ್ರಾಮ ಘಟಕಗಳ ಅಧ್ಯಕ್ಷರನ್ನು ರಾಮಲಿಂಗಯ್ಯ ಶ್ರೀಗಳ ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು ನಂತರ ಅವರನ್ನು ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಮಯದಲ್ಲಿ ತಾಲೂಕ ಬೇಡ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಗ್ರಾಮದ ಗಣ್ಯರು ಹಾಗೂ ಹಿರಿಯರು ಉಪಸ್ಥಿತರಿದ್ದರು