ಎಸ್.ಆರ್.ಪಾಟೀಲ ಸ್ಪರ್ಧೆಗೆ ವಿರೋಧ ಬೇಡ
ತಾಳಿಕೋಟೆ19: ಕಾಂಗ್ರೆಸ್ ನಾಯಕರಾದ ಎಸ್.ಆರ್.ಪಾಟೀಲ ಅವರು ಪ್ರಬುದ್ಧ ರಾಜಕಾರಣಿ. ಅವರು ದೇವರಹಿಪ್ಪರಗಿ ಮತಕ್ಷೇತ್ರದಿಂದ ಸ್ಪರ್ಧಿಸಲು ಇಚ್ಚಿಸಿರುವುದರಲ್ಲಿ ತಪ್ಪಿಲ್ಲ. ಅವರು ಈ ಕ್ಷೇತ್ರದಿಂದ ಸ್ಪರ್ಧಿಸಿದರೆ ಗೆಲುವು ಖಚಿತ, ಹಿಂದುಳಿದ ದೇವರ ಹಿಪ್ಪರಗಿ ಮತಕ್ಷೇತ್ರ ಅಭಿವೃದ್ಧಿ ಆಗಿ ಮಾದರಿ ಮತಕ್ಷೇತ್ರವಾಗಲಿದೆ ಎಂದು ಕಾಂಗ್ರೆಸ್ ಪಕ್ಷದ ಯುವ ಮುಖಂಡ ಶಿವನಗೌಡ ಬಿರಾದಾರ (ಅಸ್ಕಿ) ಹೇಳಿದರು.
ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್.ಆರ್. ಪಾಟೀಲರು ಜಿಪಂ ಸದಸ್ಯರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ವಿರೋಧ ಪಕ್ಷದ ನಾಯಕರಾಗಿ, ಸಚಿವರಾಗಿ ಕೆಲಸ ಮಾಡಿದ್ದಾರೆ. ರಾಜ್ಯ ಕಂಡ ಧೀಮಂತ ನಾಯಕರ ಸಾಲಿನಲ್ಲಿ ಅವರೂ ಒಬ್ಬರಾಗಿದ್ದಾರೆ. ಎಸ್.ಆರ್.ಪಾಟೀಲ 40 ವರ್ಷದಿಂದ ಕಾಂಗ್ರೆಸ್ ಪಕ್ಷವನ್ನು ಬಲ ಪಡಿಸಿದ್ದಾರೆ. ಅವರು ಯಾವುದೇ ಕ್ಷೇತ್ರದಿಂದಲೂ ಸ್ಪರ್ಧೆ ಬಯಸಬಹುದು. ಅವರ ಆಯ್ಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ಬರಲಿದೆ. ಅಂತಹ ನಾಯಕರು ನಮ್ಮ ದೇವರಹಿಪ್ಪರಗಿ ಮತಕ್ಷೇತ್ರದಿಂದ ಸ್ಪರ್ಧೆ ಬಯಿಸಿದ್ದು ಸಂತೋಷ ಪಡುವ ವಿಷಯವಾಗಿದೆ. ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ಸ್ಥಳೀಯವಾಗಿರುವ 9 ಜನ ಆಕಾಮಕ್ಷಿಗಳೂ ಕೂಡಾ ಯೋಗ್ಯ ಅಭ್ಯರ್ಥಿಗಳಾಗಿದ್ದಾರೆ. ಅವರ ಜೊತೆಯಾಗಿ ಎಸ್.ಆರ್.ಪಾಟೀಲರು ಒಬ್ಬರಾಗಿದ್ದಾರೆ. ಎಸ್.ಆರ್.ಪಾಟೀಲರು ದೇವರಹಿಪ್ಪರಗಿ ಮತಕ್ಷೇತ್ರದಿಂದ ಸ್ಪರ್ಧಿಸಬಾರದು ಎಂದು ಸ್ಥಳೀಯ ಆಕಾಂಕ್ಷಿಗಳು ಪಟ್ಟು ಹಿಡಿದಿರುವುದು ಸರಿಯಲ್ಲ. ತಮ್ಮ ಜತೆ ಪಾಟೀಲರು ಒಬ್ಬ ಆಕಾಂಕ್ಷಿ ಎಂದು ಪರಿಗಣಿಸಬೇಕು ಎಂದು ಕೋರಿದರು. ಕಾಂಗ್ರೆಸ್ ನಾಯಕರ ಮೇಲೆ ಮುನಿಸಿಕೊಳ್ಳುವ ಕೆಲಸ ಮಾಡುತ್ತ ಹೋದಲ್ಲಿ ಪಕ್ಷಕ್ಕೆ ನಷ್ಟವಾಗುತ್ತದೆ. ಇದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕಿದೆ. ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ಎಸ್.ಆರ್.ಪಾಟೀಲರ ಅಭಿಮಾನಿಗಳು ಹೇಳಿಕೆಗಳಿಂದ ಅವರ ಮನಸ್ಸಿಗೆ ನೋವಾಗಲಿದೆ. ನಮ್ಮ ಪಕ್ಷದ ನಾಯಕರಾದ ಸಿದ್ದರಾಮಯ್ಯ ಬೇರೆ ಬೇರೆ ಕ್ಷೇತ್ರದಿಂದ ಸ್ಪರ್ಧಿಸುವದಾದರೆ ಪಾಟೀಲರು ಯಾಕೆ ಸ್ಪರ್ಧಿಸಬಾರದು. ರಾಜ್ಯ ನಾಯಕರು ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೂ ಸ್ಥಳೀಯ ಆಕಾಂಕ್ಷಿಗಳು ಅವರಿಗೆ ಅವಕಾಶ ಕಲ್ಪಿಸಿಕೊಡಬೇಕು. ಇದರಿಂದ ಕೇವಲ ಕ್ಷೇತ್ರವಷ್ಟೇ ಅಲ್ಲ, ಇಡಿ ಜಿಲ್ಲೆಯೇ ಅಭಿವೃದ್ಧಿ ಹೊಂದಲಿದೆ. ಎಲ್ಲ ಆಕಾಂಕ್ಷಿಗಳು ಪಕ್ಷ ಬೆಳೆಸಲು ಶ್ರಮಿಸಿದ್ದು ಕೆಲ ಸಂದರ್ಭದಲ್ಲಿ ಪಕ್ಷಕ್ಕಾಗಿ ತ್ಯಾಗ ಮಾಡಲು ಸಿದ್ದರಾಗಬೇಕು. ಪಕ್ಷದ ತತ್ವ ಸಿದ್ದಾಂತಗಳ ಅಡಿಯಲ್ಲಿ ಪ್ರತಿರೋಧ ವ್ಯಕ್ತವಾಗಬೇಕೆ ಹೊರತು ಬಹಿರಂಗ ಅಲ್ಲ ಎಂದರು.
ಕಾಂಗ್ರೆಸ್ ಕಾರ್ಯಕರ್ತರಾದ ಯಲ್ಲಾಲಿಂಗ ವಾಲೀಕಾರ, ಮಹಿಬೂಬ ವಾಲೀಕಾರ, ಪ್ರಭುಗೌಡ ಬಿರಾದಾರ, ಅಯ್ಯನಗೌಡ ಪಾಟೀಲ ಇದ್ದರು.