ಸನವಳ್ಳಿ ಜಲಾಶಯದ ನೀರು ಬಿಡದಂತೆ ಸಣ್ಣ ನೀರಾವರಿ ಇಲಾಖೆಗೆ ಸಾರ್ವಜನಿಕರ ಆಗ್ರಹ
ಲೋಕದರ್ಶನ ವರದಿ
ಮುಂಡಗೋಡ: ತಾಲೂಕಿನ ಸನವಳ್ಳಿ ಜಲಾಶಯದ ನೀರನ್ನು ಇಲ್ಲಿನ ಸಣ್ಣ ನೀರಾವರಿ ಇಲಾಖೆಯವರು ಬೇಸಿಗೆ ಬೆಳೆಗಾಗಿ ಹೊಲ-ಗದ್ದೆಗಳಿಗೆ ಬಿಟ್ಟ ಕಾರಣ ಸಾರ್ವಜನಿಕರು ಜಲಾಶಯದ ನೀರು ಬಿಡಬಾರದು ಎಂದು ಶನಿವಾರ ಆಕ್ರೋಶ ವ್ಯಕ್ತಪಡಿಸಿದರು.
ಸಣ್ಣ ನೀರಾವರಿ ಇಲಾಖೆಯವರು ಕಳೆದ ಒಂದು ತಿಂಗಳಿಂದ ಪದೇ-ಪದೇ ಜಲಾಶಯದ ನೀರನ್ನು ಹೊಲ-ಗದ್ದೆಗಳಿಗೆ ಅಥವಾ ಇನ್ನಾವುದೊ ಬೇರೆ ಉದ್ದೇಶಕ್ಕೆ ಬಿಡುತ್ತಿದ್ದಾರೆ. ಈ ವರ್ಷದಲ್ಲಿ ಇದು ಮೂರನೇ ಬಾರಿಯಾಗಿದೆ. ಈ ರೀತಿಯಾಗಿ ನೀರು ಬಿಡುವುದರಿಂದ ಮುಂದೆ ಪಟ್ಟಣದಲ್ಲಿ ಕುಡಿಯುವ ನೀರಿನ ಹಾಹಾಕಾರವಾಗುವುದರಲ್ಲಿ ಸಂದೇಹವಿಲ್ಲ.
ಜಲಾಶಯದ ನೀರು ಬಿಡಬಾರದು ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ಕಾಯ್ದುಕೊಳ್ಳಬೇಕು ಎಂದು ಈ ಹಿಂದೆ ತಹಶೀಲ್ದಾರರು ಸಣ್ಣ ನೀರಾವರಿ ಇಲಾಖೆಯವರಿಗೆ ತಿಳಿಸಿದ್ದರು. ಅಲ್ಲದೆ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಲಿಖಿತವಾಗಿ ಪತ್ರ ನೀಡಿದ್ದರು. ಆದರೂ ಸಣ್ಣ ನೀರಾವರಿ ಇಲಾಖೆಯವರು ಜಲಾಶಯದ ನೀರನ್ನು ಬಿಡುತ್ತಿದ್ದಾರೆ. ಇದರಿಂದ ಮುಂದೆ ಕುಡಿಯುವ ನೀರಿನ ಸಮಸ್ಯೆ ತಲೆದೋರುವುದು. ಇದಕ್ಕೆ ಸಣ್ಣ ನೀರಾವರಿ ಇಲಾಖೆಯವರೇ ಹೊಣೆ. ಇನ್ನು ಮುಂದಾದರೂ ಸಣ್ಣ ನೀರಾವರಿ ಇಲಾಖೆಯವರು ಜಲಾಶಯದ ನೀರನ್ನು ಯಾವುದೇ ಕಾರಣಕ್ಕೂ ಬಿಡಬಾರದು ಎಂದು ಸನವಳ್ಳಿ ಗ್ರಾಮದ ಪ್ರಭು ಅರಶಿಣಗೇರಿ ತಿಳಿಸಿದರು.
***ಸನವಳ್ಳಿ ಜಲಾಶಯದ ನೀರನ್ನು ಯಾರು ಬಿಟ್ಟಿದ್ದರೊ ಗೊತ್ತಿಲ್ಲ ಸಣ್ಣ ನೀರಾವರಿ ಇಲಾಖೆಯವರು ನೀರು ಬಿಡಲು ಹೇಳಿದ್ದರು ಎಂದು ರೈತರು ತಿಳಿಸಿದರು. ಸಣ್ಣ ನೀರಾವರಿ ಇಲಾಖೆಯವರಿಗೆ ತಿಳಿಸಿ ಮಾತನಾಡಿ ನೀರು ಬಿಡುವುದನ್ನು ಬಂದ್ ಮಾಡಿಸಲಾಯಿತು.
-ಮಲ್ಲಯ್ಯ ಹಿರೇಮಠ,
ಪ.ಪಂ.ಮುಖ್ಯಾಧಿಕಾರಿ
**ದನ-ಕರುಗಳಿಗೆ ಕುಡಿಯಲು ಅನುಕೂಲವಾಗಲೆಂದು ಜಲಾಶಯದ ನೀರು ಬಿಡಲಾಗಿತ್ತು. ಮುಂದೆ ಇದರಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಿಲ್ಲ.
-ಆರ್.ಎನ್.ನಾಯ್ಕ, ಎಇ ಸಣ್ಣ ನೀರಾವರಿ ಇಲಾಖೆ