ಭತ್ತ ಖರೀದಿ ಮಾಡಿ ಹಣ ನೀಡದ ಸರ್ಕಾರ: ಕಾರ್ತಿಕ
ಬಳ್ಳಾರಿ 26: ಖರೀದಿ ಕೇಂದ್ರದ ಮೂಲಕ ಭತ್ತ ಖರೀದಿ ಮಾಡಿ 2 ತಿಂಗಳು ಕಳೆದರೂ ಇದುವರೆಗೆ ಹಣ ನೀಡಿಲ್ಲ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಕೋಡಿಹಳ್ಳಿ ಬಣ) ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಕಾರ್ತಿಕ್ ಆರೋಪಿಸಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯಾದ್ಯಂತ ಭತ್ತ ಖರೀದಿ ಮಾಡಿದ ಒಟ್ಟು 750 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿವೆ. ನಿನ್ನೆ ಮಂಡ್ಯ ಜಿಲ್ಲೆಗೆ ಮಾತ್ರ 5.25 ಕೋಟಿ ರೂ. ಮಾತ್ರ ಬಿಡುಗಡೆ ಮಾಡಲಾಗಿದೆ. ಹಾಗೆ ನೋಡಿದರೆ ಮಂಡ್ಯ ಜಿಲ್ಲೆ ರೈತರು ಕೇವಲ ಕೆಲವೇ ದಿನಗಳ ಹಿಂದೆ ಭತ್ತ ಮಾರಾಟ ಮಾಡಿದ್ದರು. ಅಲ್ಲಿನ ರಾಜಕಾರಣಿಗಳು ಒತ್ತಡ ಹೇರಿದ ಪರಿಣಾಮ ಹಣ ಬಿಡುಗಡೆ ಮಾಡಲಾಗಿದೆ ಎಂದರು.ನಮ್ಮ ಜಿಲ್ಲೆಯಲ್ಲಿ ಒಟ್ಟಾರೆ ಸುಮಾರು 14.94 ಕೋಟಿ ರೂ. ಮೌಲ್ಯದ 80ಸಾವಿರ ಕ್ವಿಂಟಾಲ್ ಭತ್ತ ಖರೀದಿ ಮಾಡಲಾಗಿದೆ. 1868 ರೂ. ಪ್ರತಿ ಕ್ವಿಂಟಾಲ್ ಗೆ ಬೆಲೆ ನಿಗದಿ ಮಾಡಲಾಗಿತ್ತು ಎಂದು ಅವರು ಮಾಹಿತಿ ನೀಡಿದರು. ಖಾಲಿ ಚೀಲದ ಬೆಲೆ ಹಾಲಿ ಮಾರುಕಟ್ಟೆಯಲ್ಲಿ 50 ರೂ. ಇದೆ. ಆದರೆ, ಸರ್ಕಾರ ಮಾತ್ರ ಕೇವಲ 3 ರೂ. ನೀಡುತ್ತದೆ. ಇದನ್ನೂ ಪರಿಷ್ಕರಿಸುವ ಕಾರ್ಯ ಸರ್ಕಾರ ಮಾಡಬೇಕು ಎಂದರು.
ಒಂದು ವಾರದಲ್ಲಿ ಭತ್ತ ಖರೀದಿ ಮಾಡಿದ ಹಣ ಬಿಡುಗಡೆ ಮಾಡದೆ ಹೋದರೆ ನಾವು ಹೋರಾಟ ಹಮ್ಮಿಕೊಳಲಿದ್ದೇವೆ ಎಂದು ಅವರು ಎಚ್ಚರಿಸಿದರು. ಇನ್ನೂ ದೆಹಲಿಯಲ್ಲಿ ರೈತರು ಹಮ್ಮಿಕೊಂಡ ಹೋರಾಟ 96ನೆಯ ದಿನಕ್ಕೆ ಕಾಲಿಟ್ಟಿದೆ. ಹೋರಾಟದಲ್ಲಿ 250ಕ್ಕೂ ಹೆಚ್ಚು ಜನ ರೈತರು ಅಸುನೀಗಿದ್ದಾರೆ. ಆದರೆ, ಕೇಂದ್ರದ ಯಾವೊಬ್ಬ ನಾಯಕರು ಸ್ಥಳಕ್ಕೆ ಭೇಟಿ ನೀಡಿಲ್ಲ. ಇದು ದುರದೃಷ್ಟಕರ. ಅಂಬಾನಿಗೆ ಮೊಮ್ಮಗ ಆದಾಗ, ಕೊಹ್ಲಿ ತಂದೆ ಆದಾಗ, ಗಂಗೂಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಿದಾಗ ಶುಭ ಕೋರುವ ಪ್ರಧಾನಿಗಳು ರೈತರ ಕಷ್ಟ ಕೇಳಲು ಸಿದ್ದಿವಿಲ್ಲ ಎಂದು ಅವರು ಕಿಡಿಕಾರಿದರು.ವಿದೇಶಿ ಗಾಯಕಿ ರೆಹಾನ ಪ್ರತಿಭಟನೆ ಕುರಿತು ಟ್ವೀಟ್ ಮಾಡಿದ ಕೂಡಲೇ ಬಾಲಿವುಡ್ ತಾರೆಯರು ತಕ್ಷಣ ಎದ್ದೇಳುತ್ತರೆ. ರೈತರ ವಿಷಯದ ಕುರಿತು ವಿದೇಶಿಯರು ಮಾತನಾಡುವುದು ಸಲ್ಲ ಎನ್ನುತ್ತಾರೆ. ಒಂದೇ ಟ್ವೀಟ್ ಅನ್ನು ಹಲವರು ರೆಟ್ವೀಟ್ ಮಾಡಿ, ರೆಹನಾಳನ್ನು ವಿರೋಧಿಸುತ್ತಾರೆ ಎಂದು ಅವರು ಕುಟುಕಿದರು. ಯುಪಿಎ ಸರ್ಕಾರ ಇದ್ದಾಗ 6 ಸಲ ಭಾರತ್ ಬಂದ್ ಕರೆ ನೀಡಿದ್ದರು. ಆದರೆ, ಕಾಂಗ್ರೆಸ್ ಈಗ ಒಂದೇ ಒಂದು ಪ್ರತಿಭಟನೆ ಮಾಡುತ್ತಿಲ್ಲ. ಇದಕ್ಕೆ ಕಾರಣ ಒಳ ಒಪ್ಪಂದ ಇರಬೇಕು ಎಂದು ಅವರು ಆರೋಪಿಸಿದರು. ಸಂಘಟನೆಯ ನೂತನ ಜಿಲ್ಲಾಧ್ಯಕ್ಷ ಬಿ. ವಿ.ಗೌಡ, ಮುಖಂಡರಾದ ಶರಣಬಸಪ್ಪ, ಸಣ್ಣಕೆರೆ ರುದ್ರಪ್ಪ, ಪಿ.ದೇವರೆಡ್ಡಿ, ಭರಮಾಗೌಡ, ಕೆ.ರಮೇಶ್, ವೀರಾರೆಡ್ಡಿ, ಮಲ್ಲಿಕಾರ್ಜುನ್ ಗೌಡ ಸುದ್ದಿಗೋಷ್ಠಿಯಲ್ಲಿ ಇದ್ದರು. ಕೊಟ್10ರಂದು ರಾಜ್ಯ ಸಮಿತಿ ಸಭೆಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯಕಾರಿಣಿ ಸಭೆ ಮಾ.10ರಂದು ಬಳ್ಳಾರಿಯಲ್ಲಿ ನಡೆಯಲಿದೆ. ರಾಜ್ಯದ ವಿವಿಧ ಜಿಲ್ಲೆಗಳ ಪದಾಧಿಕಾರಿಗಳು ಈ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳುವರು. ರಾಜ್ಯದ ಸಮಸ್ಯೆ ಕುರಿತು ಚರ್ಚೆ ನಡೆಸಲಿದ್ದಾರೆ. ಜೆ.ಕಾರ್ತಿಕ್,ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ.