ಹಿತ್ತಲಲ್ಲಿಯೇ ಎಲ್ಲ ರೋಗಗಳಿಗೂ ಔಷಧಿ: ಡಾ.ಹಣಮಂತ ಮಳಲಿ
ತಾಳಿಕೋಟೆ21: ನಮ್ಮ ಮನೆಯ ಹಿತ್ತಲಲ್ಲಿಯೇ ನಮ್ಮ ಆರೋಗ್ಯಕ್ಕೆಬೇಕಾದ ಎಲ್ಲ ಔಷಧಿಯಿದೆ. ನಿಯಮಿತವಾಗಿ ಸೇವನೆಯಿಂದ ರೋಗಮುಕ್ತರಾಗಿ ಶತಾಯುಷಿಗಳಾಗಿ ಬಾಳಬಹುದು ಎಂದು ಗದಗ ಜಿಲ್ಲೆ ವಾಸನ ಗ್ರಾಮದ ಪ್ರಸಿದ್ಧ ಪಾರಂಪರಿಕ ವೈದ್ಯ ಡಾ.ಹಣಮಂತ ಮಳಲಿ ಹೇಳಿದರು.
ಪಟ್ಟಣದ ಬಾಲಾಜಿ ದೇವಸ್ಥಾನದಲ್ಲಿ ರೋಟರಿ ಸಂಸ್ಥೆ ವತಿಯಿಂದ ಆಯೋಜಿಸಿದ್ದ `ಮನೆಮದ್ದು ಆರೋಗ್ಯ ಸಂಜೀವಿನಿ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಳೆದ ವರ್ಷಗಳಿಂದ ಪ್ರತಿ ಬುಧವಾರ ವಿವಿಧ ರೋಗಗಳಿಗೆ ಚಿಕಿತ್ಸೆ ನೀಡುತ್ತಿರುವೆ. ಕ್ಯಾನ್ಸರ್, ಹೃದಯರೋಗ, ರಕ್ತದೊತ್ತಡ, ಮಧುಮೇಹಗಳಂತಹ ರೋಗಗಳಿಗೆ ಮನೆ ಮದ್ದಿನಿಂದಲೇ ವಾಸಿ ಮಾಡಲಾಗುತ್ತಿದ್ದು ನಮ್ಮಲ್ಲಿಗೆ ದೇಶ-ವಿದೇಶಗಳಿಂದ ಚಿಕಿತ್ಸೆಗೆ ಬರುತ್ತಾರೆ. ಶುದ್ಧ ದೇಶಿ ಆಕಳ ತುಪ್ಪವನ್ನು ಬಳಸಿ ತಲೆ ನೋವು, ಕಿವಿನೋವುಗಳಂತಹ ರೋಗ ನಿವಾರಣೆ ಮಾಡಬಹುದು. ನಿತ್ಯ ಮೂರು ಕಾಳು ಮೆಣಸು ತಿನ್ನಿ ಪಚನ ಶಕ್ತಿ ವೃದ್ಧಿಸುತ್ತದೆ. ಆಸಿಡಿಟಿ ಬರದು. ನಿತ್ಯ ಅರ್ಧ ಹೋಳು ನಿಂಬೆ ಸೇವಿಸಿದರೆ ಇದರಲ್ಲಿ ಕ್ಯಾನ್ಸರ್ ರೋಗಿಗೆ ನೀಡುವ ಕಿಮೋಥೆರಪಿ ಶಕ್ತಿ ಅಡಗಿದೆ. ನಾಲ್ಕು ಬೊಳ್ಳೊಳ್ಳಿ ಪಲಕು ಸೇವಿಸಿದರೆ ರಕ್ತ ಶುದ್ದವಾಗುತ್ತದೆ. ಸಕ್ಕರೆ ಬದಲಾಗಿ ಸಾವಯವ ಕೃಷಿಯ ಬೆಲ್ಲ ತಿನ್ನಿ, ಗೋಮೂತ್ರ ಸೇವಿಸಿ ರೋಗಗಳನ್ನು ದೂರಗೊಳಿಸಿ, ಮನೆಯಲ್ಲಿ ನಾಯಿಗಿಂತ ಒಂದು ದೇಶಿಯ ಗೋವನ್ನು ಸಾಕಿ ಅದರ ಲಾಭ ದೊಡ್ಡದು ಎಂದರು. ಅಲಂಕಾರಕ್ಕೆ ಬಳಸುವ ಲಿಪಸ್ಟಿಕ್, ನೇಲ್ ಪಾಲೀಶ್ಗಳನ್ನು ದನದ ಕೊಬ್ಬಿನಿಂದ ತಯಾರಿಸಲಾಗಿದ್ದು ಅವುಗಳು ಹೊಟ್ಟೆಗೆ ಸೇರಿದರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ. ಸಾಬೂನುಗಿಂತ ಕಡಲೆ ಹಿಟ್ಟು ಬಳಸಿ ಹೀಗೆ ಮನೆಮದ್ದುಗಳನ್ನು ಅರಿತು ಸದೃಢ ಕಾಯ-ಆರೋಗ್ಯ ಸಂಪಾದಿಸಿಕೊಳ್ಳಿ ಎಂದು ಸಲಹೆ ನಿಡಿದರು. ನಿತ್ಯವೂ ಮಗುವಿನಿಂದ ಹಿಡಿದು ವೃದ್ಧರವರೆಗೆ ಕ್ಯಾನ್ಸರ್ ರೋಗಿ ತಪಾಸಣೆ ಮಾಡುತ್ತಿದ್ದು ಅತಿ ಕಡಿಮೆ ವೆಚ್ಚದಲ್ಲಿ ಗುಣಮುಖರಾಗಿದ್ದಾರೆ ಎಂದರು.
ವೇದಿಕೆಯಲ್ಲಿ ರೋಟರಿ ಅಧ್ಯಕ್ಷ ಶ್ಯಾಮ ಹಂಚಾಟೆ, ರೋಟರಿಯನ್ಗಳಾದ ಡಾ.ವಿ.ಎಸ್.ಕಾರ್ಚಿ , ಡಾ.ಎ.ಎ.ನಾಲಬಂದ, ಎಂ.ಆರ್.ಕತ್ತಿ, ಎಂ.ಎಸ್.ಸರಶೆಟ್ಟಿ, ಖಜಾಂಚಿ ಬಸವರಾಜ ಕುಂಬಾರ ಇದ್ದರು.
ರೋಟರಿಯನ್ನಗಳಾದ ಘನಶ್ಯಾಮ ಚವಾಣ, ಪ್ರಶಾಂತ ಬಬಲೇಶ್ವರ, ಸಂದೀಪ ಹಜೇರಿ ಇತರರಿದ್ದರು. ಅಶೋಕ ಬಳಗಾನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಸಂಗಮೇಶ ಪಾಲಕಿ ನಿರೂಪಸಿದರು.