ತಾಳಿಕೋಟಿ

ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಸಾಸನೂರ

ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಸಾಸನೂರ

ತಾಳಿಕೋಟಿ: ದೇವರ ಹಿಪ್ಪರಗಿ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕ್ಷೇತ್ರದ 120 ಗ್ರಾಮಗಳ ರಸ್ತೆಗಳನ್ನೂ ಅಭಿವೃದ್ಧಿಗೊಳಿಸಲು ಹೆಚ್ಚಿನ ಅನುದಾನವನ್ನು ತಂದು ಕೆಲಸ ಮಾಡಿದ್ದೇನೆ ಶೇ. 90ರಷ್ಟು ರಸ್ತೆ ಸುಧಾರಣೆ ಕಾಮಗಾರಿಗಳು ಮುಗಿದಿವೆ. ಇನ್ನುಳಿದ ಕೆಲಸವನ್ನು ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು ಎಂದು ಶಾಸಕ ಸೋಮನಗೌಡ ಪಾಟೀಲ (ಸಾಸನೂರ) ಹೇಳಿದರು.

ಮತಕ್ಷೇತ್ರದ ಹುಲಬೆಂಚಿ ಗ್ರಾಮದಲ್ಲಿ ರೂ. 58 ಲಕ್ಷ ಮೊತ್ತದ ಜೆಜೆಎಂ ರೂ. 35 ಲಕ್ಷದ ಸಿ.ಸಿ. ರಸ್ತೆ ರೂ. 4 ಲಕ್ಷದ ಸಮುದಾಯ ಭವನ, ನಾಗರಾಳಹುಲಿ ಗ್ರಾಮದಲ್ಲಿ ರೂ. 40 ಲಕ್ಷದ ಸಿ.ಸಿ. ರಸ್ತೆ, ರೂ. 5 ಲಕ್ಷದ ಸಮುದಾಯಭವನ, ನಂದ್ಯಾಳ ಪಿ.ಎಚ್. ಗ್ರಾಮದಲ್ಲಿ ರೂ. 1.5 ಕೋಟಿಯ ನಂದ್ಯಾಳ-ಕಡಕೋಳ ರಸ್ತೆ, ರೂ. 30 ಲಕ್ಷದ ಸಿ.ಸಿ. ರಸ್ತೆ ಹಾಗೂ ರೂ. 4 ಲಕ್ಷದ ಮೊತ್ತದ ಸಮುದಾಯ ಭವನ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ಮೂಲಸೌಕರ್ಯಗಳಾದ ರಸ್ತೆ, ನೀರು, ವಿದ್ಯುತ್, ಶಿಕ್ಷಣ, ಆರೋಗ್ಯ ಹಾಗೂ ವಿಶೇಷವಾಗಿ ನಮ್ಮ ರೈತರನ್ನು ಆರ್ಥಿಕವಾಗಿ ಮೇಲೆತ್ತಲು ನೀರಾವರಿ ಯೋಜನೆಗೆ ಒತ್ತು ಕೊಟ್ಟು ಕೆಲಸ ಮಾಡಿದ್ದೇನೆ. ರೂ. 870 ಕೋಟಿ ವೆಚ್ಚದ ಪೀರಾಪೂರ-ಬೂದಿಹಾಳ ಯೋಜನೆ ಮುಕ್ತಾಯದ ಹಂತದಲ್ಲಿದೆ, ಆಲಮಟ್ಟಿ ಹಿನ್ನೀರು ತೆಗೆದುಕೊಳ್ಳುವ ಯೋಜನೆಗೆ ರೂ. 2450 ಕೋಟಿ ಅನುದಾನ ಮಂಜೂರಾಗಿದ್ದು ಟೆಂಡರ್ ಪ್ರಕ್ರಿಯೆ ನಡೆದಿದೆ ಇದರಿಂದ ಬರುವ 4 ವರ್ಷಗಳಲ್ಲಿ ಎಲ್ಲಾ ಗ್ರಾಮಗಳಿಗೂ 24 ಗಂಟೆ ನೀರು ಸಿಗಲಿದೆ. ರೈತರಿಗೆ ವಿದ್ಯುತ್ ಸಮರ್ಪಕವಾಗಿ ಕೊಡಲು ಈ ಭಾಗದಲ್ಲಿ ಎರಡು 110/ಕೆ.ವಿ. ಸ್ಟೇಶನ್ ನಿರ್ಮಾಣವಾಗಲಿವೆ. ಹುಲಬೆಂಚಿ ಗ್ರಾಮದ ಸರಕಾರಿ ಶಾಲೆಯ ನೂತನ 2 ಕೋಣೆ ನಿರ್ಮಾಣಕ್ಕೆ ಈಗಾಗಲೇ ಅನುದಾನ ಕೊಟ್ಟಿದ್ದೇನೆ ಇನ್ನೂ 4 ಕೋಣೆ ಕೇಳಿದ್ದೀರಿ ಮುಂದಿನ ದಿನಗಳಲ್ಲಿ ಇದಕ್ಕೆ ಅನುದಾನ ಕೊಡುತ್ತೇನೆ ಇದಲ್ಲದೆ, ಕ್ಷೇತ್ರದ 4 ಸರಕಾರಿ ಆಸ್ಪತ್ರೆಗಳಿಗೆ ಅಂಬ್ಯೂಲೆನ್ಸ್ ಕೊಟ್ಟಿದ್ದೇನೆ. ನನಗೆ ನೀವು ಮತ ಕೊಟ್ಟು 5 ವರ್ಷಗಳಿಗಾಗಿ ಆಯ್ಕೆ ಮಾಡಿದ್ದೀರಿ. ನಾನು ನಿಮ್ಮ ಜೀತದಾಳಿನಂತೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಬರಲಿರುವ ದಿನಗಳಲ್ಲೂ ನಿಮ್ಮೆಲ್ಲರ ಸಹಕಾರ ಹಾಗೂ ಆಶೀರ್ವಾದ ಬೇಕು ಎಂದರು.

ಮುಖಂಡ ಡಾ. ಬಸವರಾಜ ಅಸ್ಕಿ (ಕೊಣ್ಣೂರ) ಅವರು ಮಾತನಾಡಿ ಶಾಸಕ ಸೋಮನಗೌಡರು ಒಬ್ಬ ಸಜ್ಜನ ರಾಜಕಾರಣಿ. ಈ ಕ್ಷೇತ್ರದಲ್ಲಿ ಹಿಂದೆಂದೂ ಆಗದ ಅಭಿವೃದ್ಧಿಯನ್ನು ಮಾಡಿದ್ದಾರೆ. ಕ್ಷೇತ್ರದ ಎಲ್ಲಾ ಗ್ರಮಗಳಿಗೆ ಮೂಲಸೌಕರ್ಯ ನೀಡಲು ಶಕ್ತಿಮೀರಿ ಪ್ರಯತ್ನಿಸಿದ್ದಾರೆ. ರಾಜಕಾರಣದಲ್ಲಿ ಇಂಥಹ ಪ್ರಾಮಾಣಿಕ ಜನರು ಸಿಗುವುದು ಕಷ್ಟ ಅವರನ್ನು ಮತ್ತೊಮ್ಮೆ ಆಶೀರ್ವಾದ ಮಾಡಬೇಕು ಎಂದು ಕೇಳಿಕೊಂಡರು.

ಈ ಸಮಯದಲ್ಲಿ ಗ್ರಾಪಂ ಅಧ್ಯಕ್ಷರ ಪ್ರತಿನಿಧಿ ಅಪ್ಪು ಲಮಾಣಿ, ಗ್ರಾಪಂ ಸದಸ್ಯ ಶ್ರೀಶೈಲ ಸಾಸನೂರ, ವೇ.ಮೂ. ಮಾಂತಯ್ಯ ಹಿರೇಮಠ, ಬಾಪುಗೌಡ ಧನ್ನೂರ, ಜಯಕನರ್ಾಟಕ ರಾಜ್ಯ ಕಾರ್ಯದರ್ಶಿ  ಬಸಲಿಂಗಪ್ಪ ಇಂಗಳಗಿ, ಜಿಪಂ ಮಾಜಿ ಸದಸ್ಯ ಸಾಹೇಬಣ್ಣ ಆಲ್ಯಾಳ, ರಾಮನಗೌಡ ಬಿರಾದಾರ (ವಡವಡಗಿ) ಮುತ್ತುಗೌಡ ಪಾಟೀಲ (ನಂದ್ಯಾಳ ಪಿ.ಎಚ್.) ಎಇಇ ಆನಂದಸ್ವಾಮಿ, ಸಾಹೇಬಗೌಡ ಮತ್ತಿತರರು ಇದ್ದರು.

ಸುದ್ದಿ ಓದಿ