ಮುಂದಗೋಡ

ಇಲಿ ಬಿದ್ದ ಸಾಂಬಾರ್ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ ಅಡುಗೆ ಸಿಬ್ಬಂದಿ ಮೇಲೆ ಕ್ರಮ ಜರುಗಿಸುವಂತೆ ಪಾಲಕರ ಆಗ್ರಹ

ಇಲಿ ಬಿದ್ದ ಸಾಂಬಾರ್ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ  ಅಡುಗೆ ಸಿಬ್ಬಂದಿ ಮೇಲೆ ಕ್ರಮ ಜರುಗಿಸುವಂತೆ ಪಾಲಕರ ಆಗ್ರಹ

ಲೋಕದರ್ಶನ ವರದಿ 

ಮುಂಡಗೋಡ:ಪಟ್ಟಣದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಮಧ್ಯಾಹ್ನದ ಬಿಸಿಯೂಟದ ವೇಳೆ ಇಲಿ ಬಿದ್ದ ಸಾಂಬಾರ ಅನ್ನು ಮಕ್ಕಳಿಗೆ ಬಡಿಸಿದ ಕಾರಣ ಇಬ್ಬರು ವಿದ್ಯಾಥರ್ಿಗಳು ಅಸ್ವಸ್ಥಗೊಂಡಿದ್ದು ಕೂಡಲೆ ಅಡುಗೆ ಸಿಬ್ಬಂದಿಯನ್ನು ವಜಾ ಗೊಳಿಸುವಂತೆ ಪಾಲಕರು ಆಗ್ರಹಿಸಿದ್ದಾರೆ.   

ಸಚಿವ ಶಿವರಾಮ ಹೆಬ್ಬಾರ ಅವರು ಎಸ್ಡಿಎಮ್ಸಿ ಅಧ್ಯಕ್ಷರಾಗಿರುವ ಈ ಶಾಲೆಯಲ್ಲಿ  

ಊಟ ಬಡಿಸುತ್ತಿದ್ದ ವೇಳೆ ಅಡುಗೆ ಸಿಬ್ಬಂದಿ ಸಾಂಬಾರ್ನಲ್ಲಿ ಬಿದ್ದ ಇಲಿಯನ್ನು ತೆಗೆದು ಅದೇ ಸಾಂಬಾರನ್ನು ಮಕ್ಕಳಿಗೆ ಬಡಿಸಿದ್ದಾರೆ ಮತ್ತು ಈ ವಿಷಯ ಯಾರಿಗೂ ಹೇಳಬಾರದು ಎಂದು ಹೆದರಿಸಿದ್ದಾರೆ ಎಂದು ಮಕ್ಕಳು ತಮ್ಮ ಪಾಲಕರಿಗೆ ತಿಳಿಸಿದ್ದಾರೆ. ಇಲಿ ಬಿದ್ದ ಸಾಂಬಾರು ಸೇವಿಸಿ ರಾತ್ರಿ ಇಬ್ಬರು ವಿದ್ಯಾರ್ಥಿ ಗಳು ಅಸ್ವಸ್ಥಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ವಿಷಯ ತಿಳಿದ ಪಾಲಕರು ಶಾಲೆಯ ಮುಖ್ಯೋಪಾಧ್ಯಾಯರಿಗೆ ರಾತ್ರಿಯೆ ಕರೆ ಮಾಡಿ ಶಾಲೆಗೆ ಕರೆಯಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಮುಖ್ಯೋಪಾಧ್ಯಾಯರು ನನಗೆ ವಿಷಯ ಗೊತ್ತಿಲ್ಲ ಎಂದಾಗ ಸಾಂಬಾರ್ನಲ್ಲಿ ಬಿದ್ದ ಇಲಿಯನ್ನು ತೆಗೆದು ಎಸೆದಿದ್ದ ವಿದ್ಯಾರ್ಥಿ ಸಾಂಬಾರ್ನಲ್ಲಿ ಇಲಿ ಬಿದ್ದಿತ್ತು ನಾನೇ ತೆಗೆದು ಎಸೆದೆ ಈ ವಿಷಯ ಯಾರಿಗೂ ಹೇಳಬೇಡಿರಿ ಎಂದು ಸಿಬ್ಬಂದಿ ತಿಳಿಸಿದ್ದರು ಎಂದನು.     

ನಂತರ ಮಂಗಳವಾರ ಶಾಲೆಯಲ್ಲಿ ಬಿಇಒ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ, ಶಿಕ್ಷಕರು ಮತ್ತು ಪಾಲಕರ ಸಭೆ ನಡೆಯಿತು. ಈ ವೇಳೆ ಪಾಲಕರು ಮುಖ್ಯೋಪಾಧ್ಯಾಯ, ಅಡುಗೆ ಸಿಬ್ಬಂದಿ ಮತ್ತು ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡು ತಪ್ಪು ಮಾಡಿದ ಅಡುಗೆ ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಬೇಕು ಎಂದರು. ನಂತರ ಅಡುಗೆ ಸಿಬ್ಬಂದಿಯನ್ನು ಕೇಳಿದಾಗ ಸಾಂಬಾರ್ನಲ್ಲಿ ಇಲಿ ಬಿದ್ದಿಲ್ಲ. ನಾವು ತಪ್ಪು ಮಾಡಿಲ್ಲ ಎಂದು ವಾದಿಸಿದರು. ನಮ್ಮ ಮಕ್ಕಳ ಜೀವನದ ಪ್ರಶ್ನೆ. ಅವರಿಗೆ ಏನಾದರೂ ಆದರೆ ಯಾರು ಹೊಣೆ? ಸರಕಾರಿ ಶಾಲೆಯಲ್ಲಿಯೇ ಹೀಗಾದರೆ ಹೇಗೆ ಎಂದು ಪಾಲಕರು ಪ್ರಶ್ನಿಸಿದರು. ಆಗ ಶಾಲಾ ಆಡಳಿತ ಸಮಿತಿ ಉಪಾಧ್ಯಕ್ಷೆ ಪರವಾಗಿ ಮುಖ್ಯೋಪಾಧ್ಯಾಯರು ಮತ್ತು ನಾವು ಕ್ಷಮೆ ಕೇಳುತ್ತೇವೆ ಎಂದಾಗ ಕ್ಷಮೆ ಕೇಳಿದರೆ ಸಾಲದು ತಪ್ಪು ಮಾಡಿದ ಅಡುಗೆ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಬೇಕು. ಸಿಬ್ಬಂದಿ ತಪ್ಪು ಒಪ್ಪಿಕೊಳ್ಳದಿದ್ದರೆ ಎಲ್ಲ ಅಡುಗೆ ಸಿಬ್ಬಂದಿಯನ್ನು ವಜಾ ಮಾಡಬೇಕು ಎಂದು ಪಾಲಕರು ಒತ್ತಾಯಿಸಿದರು. ನಂತರ ಶಾಲೆಯ ಮುಖ್ಯೋಪಾಧ್ಯಾಯ ಮತ್ತು ಅಧಿಕಾರಿಗಳು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಈ ವೇಳೆ ಬಿಇಒ ಅಕ್ಕಮಹಾದೇವಿ ಗಾಣಿಗೇರ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಫೀಕ್ಸಾಬ್ ಮೀರಾನಾಯಕ, ಪ.ಪಂ.ಸದಸ್ಯರಾದ ಮಂಜುನಾಥ ಹರಮಲಕರ, ಶೇಖರ ಲಮಾಣಿ, ಪ್ರಕಾಶ ಬಡಿಗೇರ, ಷಣ್ಮುಖ ಕೋಳೂರ, ಮಂಜುನಾಥ ಮೈಸೂರ ಮತ್ತು ವಿದ್ಯಾರ್ಥಿಗಳ ಪಾಲಕರು ಉಪಸ್ಥಿತರಿದ್ದರು.

ಸುದ್ದಿ ಓದಿ