ವಿಜಯಪುರದಲ್ಲಿ ವಲಯ ಮಟ್ಟದ ಪ್ರಾಥಮಿಕ ಕ್ರೀಡಾಕೂಟ
ವಿಜಯಪುರ 22: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 2026-27ನೇ ಸಾಲಿನ ಮನಗೂಳಿ ‘ಬಿ’ ವಲಯ ಮಟ್ಟದ ಪ್ರಾಥಮಿಕ ಕ್ರೀಡಾಕೂಟ ವಿಜೃಂಭಣೆಯಿಂದ ನಡೆಯಿತು. ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಸಿಕ್ಯಾಬ್ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ, ಪ್ರಾಥಮಿಕ ಮತ್ತು ಪ್ರೌಢಶಾಲೆ, ನವರಸಪುರ ಇವರ ಸಹಯೋಗದಲ್ಲಿ ಕ್ರೀಡಾಕೂಟ ಆಯೋಜಿಸಲಾಗಿತ್ತು. ದೈಹಿಕ ಶಿಕ್ಷಣಾಧಿಕಾರಿ ಎಸ್.ಜೆ. ಬಿರಾದಾರ್ ಕ್ರೀಡಾಜ್ಯೋತಿ ಬೆಳಗಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಕ್ಕಳು ಕ್ರೀಡೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಕ್ರೀಡಾಸ್ಫೂರ್ತಿಯಿಂದ ಆಟವಾಡಿ ತಮ್ಮ ಗುರಿ ಸಾಧಿಸಬೇಕು. ಕ್ರೀಡೆ ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುವುದರ ಜೊತೆಗೆ ಶಿಸ್ತು, ಆತ್ಮವಿಶ್ವಾಸ ಮತ್ತು ತಂಡ ಮನೋಭಾವ ಬೆಳೆಸುತ್ತದೆ ಎಂದರು.
ಕ್ರೀಡಾಕೂಟದಲ್ಲಿ ಒಟ್ಟು 29 ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. 100 ಮೀಟರ್, 200 ಮೀಟರ್ ಓಟ, ಅಡತಡೆ ಓಟ, ಉದ್ದ ಜಿಗಿತ, ಚಕ್ರ ಎಸೆತ, ಗುಂಡು ಎಸೆತ ಸೇರಿದಂತೆ ವಿವಿಧ ವೈಯಕ್ತಿಕ ಸ್ಪರ್ಧೆಗಳು ನಡೆದವು. ವಾಲಿಬಾಲ್, ಥ್ರೋಬಾಲ್, ಖೋ-ಖೋ ಹಾಗೂ ಕಬಡ್ಡಿ ಸೇರಿದಂತೆ ವಿವಿಧ ತಂಡ ಸ್ಪರ್ಧೆಗಳಲ್ಲೂ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.
ಕ್ರೀಡಾಕೂಟದಲ್ಲಿ ಸಿಕ್ಯಾಬ್ ಆಂಗ್ಲ ಮಾಧ್ಯಮ ಶಾಲೆ, ನವರಸಪುರದ ಪ್ರಾಚಾರ್ಯೆ ಅನಿತಾ ನರೇಗಲ್, ಸಮೂಹ ಸಂಪನ್ಮೂಲ ವ್ಯಕ್ತಿ ಎಂ.ಎಂ. ಮುಲ್ಲಾ, ಸಲೀಂ ಪುಣೇಕರ್ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.