ಅನ್ಯಕೋಮಿನ ಪ್ರೇಮಿಗಳಿಂದ ಬೈಕ್ ಮೇಲೆ ಅಲೆದಾಟ : ಯುವಕರ ಗಲಾಟೆ, ಪರಿಸ್ಥಿತಿ ಉದ್ವಿಗ್ನ

ಅನ್ಯಕೋಮಿನ ಪ್ರೇಮಿಗಳಿಂದ ಬೈಕ್ ಮೇಲೆ ಅಲೆದಾಟ : ಯುವಕರ ಗಲಾಟೆ, ಪರಿಸ್ಥಿತಿ ಉದ್ವಿಗ್ನ

 ಕೊಪ್ಪಳ : ಅಪ್ರಾಪ್ತ ವಯಸ್ಸಿನ ಮುಸ್ಲಿಂ ಯುವತಿ ಹಾಗೂ ಹಿಂದೂ ಯುವಕನ ನಡುವೆ ಪ್ರೀತಿಯ ಸಂಬಂಧ ಇದ್ದ ಆರೋಪದ ಹಿನ್ನೆಲೆಯಲ್ಲಿ ಜಿಲ್ಲೆಯ ಗಂಗಾವತಿ ತಾಲೂಕಿನ ಬಸಾಪಟ್ಟಣದಲ್ಲಿ ಗಲಾಟೆ ನಡೆದಿದೆ. 

   ನಿನ್ನೆ ರಾತ್ರಿ ಬೈಕ್‌ನಲ್ಲಿ ಯುವಕ-ಯುವತಿ ತೆರಳುತ್ತಿದ್ದ ವೇಳೆ ಕೆಲವು ಮುಸ್ಲಿಂ ಯುವಕರು ತಡೆದು ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಕೆಲ ಕಾಲ ಗೊಂದಲದ ವಾತಾವರಣ ಉಂಟಾಗಿತ್ತು.

    ಬುರ್ಕಾದಲ್ಲಿ ಹಾಕಿದ್ದ ಯುವತಿಯನ್ನು ಗಮನಿಸಿ, ಯುವತಿ ಅಪ್ರಾಪ್ತಳಾಗಿರುವ ಹಿನ್ನೆಲೆಯಲ್ಲಿ ಪ್ರಶ್ನೆ ಕೇಳಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂದರ್ಭ ಹೈಡ್ರಾಮಾ ನಡೆದಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.

    ಘಟನೆಯಲ್ಲಿ ತನ್ನ ಮೇಲೆ ಮುಸ್ಲಿಂ ಯುವಕರು ಹಲ್ಲೆ ಮಾಡಿದ್ದಾರೆ ಎಂದು ಯುವಕ ವೆಂಕಟೇಶ್ ಗಂಗಾವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವೆಂಕಟೇಶ್ ದೂರಿನ ಆಧಾರದ ಮೇಲೆ ಸುಮಾರು 10 ಯುವಕರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಈಗಾಗಲೇ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

   ಆದರೆ ಪರಿಶೀಲನೆ ನಡೆಸದೇ ತರಾತುರಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ಗಂಗಾವತಿ ಠಾಣಾ ಅಧಿಕಾರಿಗಳ ವಿರುದ್ಧ ಮುಸ್ಲಿಂ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಠಾಣೆ ಮುಂದೆ ಮುಸ್ಲಿಂ ಮುಖಂಡರು ಹಾಗೂ ಯುವಕರು ಜಮಾಯಿಸಿ ಪ್ರತಿಭಟನೆ ನಡೆಸಿದರು.

  ವೆಂಕಟೇಶ್ ವಿರುದ್ಧವೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಅವರು ಒತ್ತಾಯಿಸಿದರು. ಕೇವಲ ಮುಸ್ಲಿಂ ಯುವಕರ ವಿರುದ್ಧ ಮಾತ್ರ ಪ್ರಕರಣ ದಾಖಲು ಮಾಡಿರುವುದು ಯಾಕೆ ಎಂಬ ಪ್ರಶ್ನೆಯನ್ನೂ ಅವರು ಎತ್ತಿದ್ದಾರೆ. ಇನ್ಸ್‌ಪೆಕ್ಟರ್ ಪ್ರಕಾಶ್ ಮಾಳಿ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ಸುದ್ದಿ ಓದಿ