ಬಳ್ಳಾರಿ

ಸ್ಪಷ್ಟಗುರಿಯೊಂದಿಗೆ ಯುವಜನರು ಮುನ್ನಡೆಯಿರಿ: ಅಧ್ಯಕ್ಷೆ ಪ್ರಮೀಳಾನಾಯ್ಡು

ಸ್ಪಷ್ಟಗುರಿಯೊಂದಿಗೆ ಯುವಜನರು ಮುನ್ನಡೆಯಿರಿ: ಅಧ್ಯಕ್ಷೆ ಪ್ರಮೀಳಾನಾಯ್ಡು

ಬಳ್ಳಾರಿ 25: ಯುವಪೀಳಿಗೆಯಲ್ಲಿ ಸ್ಪಷ್ಟವಾದ ಗುರಿ ಇರಬೇಕು. ಈಗಿನ ಯುವಕ ಮತ್ತು ಯುವತಿಯರು ವಿದ್ಯಾಭ್ಯಾಸದ ಜೊತೆಗೆ ಸ್ಪಷ್ಟವಾದ ಗುರಿಯನ್ನಿಟ್ಟುಕೊಂಡು ಅದನ್ನು ಸಾಧಿಸುವ ನಿಟ್ಟಿನಲ್ಲಿ ಮುನ್ನಡೆದಾಗ ಮಾತ್ರ ಜೀವನದಲ್ಲಿ ಯಶಸ್ಸನ್ನು ಹೊಂದಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ಪ್ರಮೀಳಾನಾಯ್ಡು ಅವರು ಹೇಳಿದರು. 

ಸರಳಾದೇವಿ ಸತೀಶ್ಚಂದ್ರ ಅಗರ್‌ವಾಲ್ ಪ್ರಥಮ ದರ್ಜೆ ಕಾಲೇಜು(ಸ್ವಾಯತ್ತ) ಮತ್ತು ಮಹಿಳಾ ಸಬಲೀಕರಣ ಕೋಶ ಸಹಯೋಗದೊಂದಿಗೆ ಶನಿವಾರದಂದು ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ “ಮಹಿಳೆಯರಿಗಾಗಿ ಕಾನೂನಿನ ಅರಿವು” ಎಂಬ ವಿಷಯದ ಕಾರ್ಯಗಾರದಲ್ಲಿ ಅವರು ಮಾತನಾಡಿದರು. 

ಯುವಕರು ಆರ್ಥಿಕವಾಗಿ ಸದೃಢರಾಗಬೇಕು. ಪದವಿ ಶಿಕ್ಷಣದಿಂದ ಹೊರಹೊಮ್ಮಿದಾಗ ಸ್ವಾವಲಂಬನೆ ಜೀವನ ನಡೆಸಬೇಕು. ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸಮನಾದ ಹಕ್ಕುಗಳಿವೆ. ಅವುಗಳನ್ನು ಬಳಸಿಕೊಂಡು ಮುನ್ನಡೆಯಬೇಕು ಎಂದು ತಿಳಿಸಿದರು. 

ವಿದ್ಯಾರ್ಥಿ ಜೀವನವು ಯಾರು ತಾಳ್ಮೆಯಿಂದ ಸರಿಯಾಗಿ ಉಪಯೋಗಿಸಿಕೊಳ್ಳುತ್ತಾರೆಯೋ ಅವರು ಮಾತ್ರ ಜೀವನದಲ್ಲಿ ಆದರ್ಶ ವ್ಯಕ್ತಿಗಳಾಗಿ ಹೊರಹೊಮ್ಮುತ್ತಾರೆ. ಪ್ರೀತಿ-ಪ್ರೇಮ ಎಂದು ಜೀವನ ಹಾಳು ಮಾಡಿಕೊಳ್ಳಬಾರದು. ಉತ್ತಮ ಆದರ್ಶ ವ್ಯಕ್ತಿಗಳಾಗಿ ಹೊರಹೊಮ್ಮಿದಾಗ ಎಲ್ಲವೂ ತಾನಾಗಿಯೇ ಹಿಂಬಾಲಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. 

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷ ಕಳೆದರೂ, ಇನ್ನೂ ಸಮಾನತೆ ಹುಡುಕುವಲ್ಲಿ ನಿರತರಾಗಿದ್ದೇವೆ. ಅದರಲ್ಲೂ ಮಹಿಳೆಯು ಕೇವಲ ನಾಲ್ಕು ಗೋಡೆಗಳ ಮಧ್ಯೆಯೇ ಅವಳ ಸ್ವಾತಂತ್ರ್ಯ ಅನುಭವಿಸುವಂತಾಗಿದೆ. ಆದ್ದರಿಂದ ಮಹಿಳೆಯರು ಸಂವಿಧಾನಿಕ ಹಕ್ಕುಗಳನ್ನು ಬಳಸಿಕೊಂಡು ತಮ್ಮ ತಮ್ಮ ಜೀವನದಲ್ಲಿನ ಗುರಿಗಳನ್ನು ತಲುಪಲು ಶ್ರಮಿಸಬೇಕು ಎಂದು ಹೇಳಿದರು. 

ಮುಖ್ಯವಾಗಿ ಹುಡುಗರು ಪ್ರೀತಿ-ಪ್ರೇಮದ ಸುಳಿಯಲ್ಲಿ ಬಿದ್ದು ಜೀವನವನ್ನು ಹಾಳುಮಾಡಿಕೊಳ್ಳುವುದರ ಜೊತೆಗೆ ಕಾರಾಗೃಹಗಳಲ್ಲಿ ಪೋಕ್ಸೋ ಕಾಯ್ದೆಯಡಿ ಸೆರೆವಾಸ ಅನುಭವಿಸುತ್ತಿದ್ದಾರೆ. 

ಕಾಲೇಜುಗಳಲ್ಲಿ ವಾರಕೊಮ್ಮೆ ಅಥವಾ ತಿಂಗಳಿಗೊಮ್ಮೆ ನೈತಿಕ ತರಗತಿಗಳನ್ನು ಆಳವಡಿಸುವ ಮುಖಾಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಕರೆಸಿ ವಿಶೇಷ ಉಪನ್ಯಾಸ ನೀಡಬೇಕು ಎಂದು ಅಲ್ಲಿದ್ದ ಕಾಲೇಜು ಉಪನ್ಯಾಸಕರಿಗೆ ಸೂಚನೆ ನೀಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿಯ ಉಪನಿರ್ದೇಶಕರಾದ ವಿಜಯ್ ಕುಮಾರ್ ಅವರು ಮಾತನಾಡಿದರು. 

ಕಾಲೇಜಿನ ಪ್ರಾಂಶುಪಾಲರಾದ ಆರ್‌.ಎಂ.ಶ್ರೀದೇವಿ ಅವರು ಮಾತನಾಡಿದರು. 

ಈ ಸಂದರ್ಭದಲ್ಲಿ ಕಾಲೇಜಿನ ಸಿಡಿಸಿ ಸದಸ್ಯರಾದ ಪದ್ಮಾವತಿ, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶೈಲಜಾ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿನಿಯರು, ಸಿಬ್ಬಂದಿಗಳು, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. 


ಸುದ್ದಿ ಓದಿ