ಯೋಗದಿಂದ ಉತ್ತಮ ಆರೋಗ್ಯ, ಸದೃಢ ದೇಹ ಹಾಗೂ ಉತ್ತಮ ರಾಷ್ಟ್ರ ನಿರ್ಮಾಣ: ಬಸವರಾಜ ಸುಗೂರ
ಲೋಕದರ್ಶನ ವರದಿ
ವಿಜಯಪುರ 21 : ದಿನಾಂಕ 21-06-2026 ರಂದು ವಿಜಯಪುರ ನಗರದ ಕೋರ್ಟ್ ಕಾಲೋನಿಯ ನೇತಾಜಿ ಸುಭಾಷಚಂದ್ರ ಬೋಸ್ ಮಾರ್ಗದಲ್ಲಿರುವ ಎ.ಬಿ.ವಿ ಶಾಲೆಯಲ್ಲಿ ವಿಶ್ವದಾದ್ಯಂತ ಆಚರಿಸಲ್ಪಡುವ ಮಹತ್ವದ ದಿನವಾದ ಅಂತರರಾಷ್ಟ್ರೀಯ ಯೋಗ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಯೋಗವು ಭಾರತದ ಅಮೂಲ್ಯ ಕೊಡುಗೆಯಾಗಿದ್ದು, “ಯೋಗಃ ಚಿತ್ತವೃತ್ತಿ ನಿರೋಧಃ” ಎಂಬಂತೆ ಸದೃಢ ದೇಹದಲ್ಲಿ ಸದೃಢ ಮನಸ್ಸು ನೆಲೆಸುತ್ತದೆ. ಸುಮಾರು 6000 ವರ್ಷಗಳ ಇತಿಹಾಸ ಹೊಂದಿರುವ ಯೋಗವು ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಆರೋಗ್ಯವನ್ನು ವೃದ್ಧಿಸುವ ಭಾರತೀಯ ಮೂಲದ ಅಭ್ಯಾಸವಾಗಿದೆ. ಯೋಗದ ಮೂಲ ಉದ್ದೇಶವು ವ್ಯಕ್ತಿಗೆ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಯೋಜನಗಳನ್ನು ಒದಗಿಸುವುದಾಗಿದೆ.
ಯೋಗ ದಿನದ ಅಂಗವಾಗಿ ಎ.ಬಿ.ವಿ ಶಾಲೆಯ ವಿದ್ಯಾರ್ಥಿಗಳು ಯೋಗ ಮುದ್ರೆಯ ಥೀಮ್ ಮೂಲಕ ಶಾಲಾ ಆವರಣವನ್ನು ಸಂಭ್ರಮಗೊಳಿಸಿದರು. ನೃತ್ಯ, ಗೀತಗಾಯನ, ಸೂರ್ಯ ನಮಸ್ಕಾರ ಹಾಗೂ ವಿವಿಧ ದೈಹಿಕ ವ್ಯಾಯಾಮಗಳನ್ನು ಪ್ರದರ್ಶಿಸುವ ಮೂಲಕ “ಸಣ್ಣ ಸಣ್ಣ ಕ್ರಮಗಳಿಂದ ದೊಡ್ಡ ಬದಲಾವಣೆ ತರಬಹುದು ಹಿ ಶಾಲೆಯಲ್ಲಿ, ಮನೆಯಲ್ಲಿ ಹಾಗೂ ಸಮಾಜದಲ್ಲಿ” ಎಂಬ ಸಂದೇಶದೊಂದಿಗೆ ಯೋಗದ ಮಹತ್ವದ ಕುರಿತು ಜಾಗೃತಿ ಮೂಡಿಸಿದರು.
ವಿದ್ಯಾರ್ಥಿಗಳು ಮೂಡಿಸಿದ ಈ ಜಾಗೃತಿಯನ್ನು ಕಂಡು ಸಿದ್ಧೇಶ್ವರ ಸಂಸ್ಥೆಯ ಗೌರವಾನ್ವಿತ ಕಾರ್ಯದರ್ಶಿಗಳು ಹಾಗೂ ಎ.ಬಿ.ವಿ ಶಾಲೆಯ ನಾಮನಿರ್ದೇಶಿತ ಚೇರಮನ್ನರಾದ ಬಸವರಾಜ ಸುಗೂರ ಅವರು, ಉತ್ತಮ ಆರೋಗ್ಯ, ಸದೃಢ ದೇಹ ಹಾಗೂ ಉತ್ತಮ ರಾಷ್ಟ್ರ ನಿರ್ಮಾಣಕ್ಕಾಗಿ ಯೋಗದ ಮಹತ್ವವನ್ನು ತಿಳಿಸಿದರು. ಅಲ್ಲದೆ, ಶಾಲೆಯಲ್ಲಿ ವಾರಕ್ಕೊಮ್ಮೆ ಎಲ್ಲ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಯೋಗ ತರಗತಿಯನ್ನು ನಡೆಸುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಎಬಿವ್ಹಿ ಶಾಲೆಯ ಪ್ರಾಚಾರ್ಯರಾದ ಐಶ್ವರ್ಯ ಸಂಗಮ್ ಹಾಗೂ ಉಪ ಮುಖ್ಯಗುರುಗಳಾದ ರವಿಕಾಂತ ಮೆಂಡೆಗಾರ ಅವರು ವಿದ್ಯಾರ್ಥಿಗಳ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಸಂತೋಷ ವ್ಯಕ್ತಪಡಿಸಿದರು. ಈ ಮೇಲಿನ ವಿಷಯವನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಲು ವಿನಂತಿಸಲಾಗಿದೆ. ಬಸಯ್ಯ ಎಸ್ ಹಿರೇಮಠಚೇರಮನ್ ಸಿದ್ಧೇಶ್ವರ ಸಂಸ್ಥೆ, ವಿಜಯಪುರ.