ಇಂದಿನಿಂದ ಎರಡು ದಿನಗಳ ಕಾಳ ಯಲ್ಲಮ್ಮನಗುಡ್ಡದಲ್ಲಿ ಜಾತ್ರೆ
ಉಗರಗೋಳ 24: ಸಮೀಪದ ಯಲ್ಲಮ್ಮನಗುಡ್ಡದಲ್ಲಿ ಹೊಸ್ತಿಲ ಹುಣ್ಣಿಮೆ ಅಂಗವಾಗಿ ಡಿ.25, 26ರಂದು ಜಾತ್ರೆ ನಡೆಯಲಿದೆ. 25ರಂದು ಯಲ್ಲಮ್ಮ ದೇವಿ ಕಂಕಣ ಮಂಗಳಸೂತ್ರ ವಿಸರ್ಜನೋತ್ಸವ, 26ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಲಿದೆ.
ಭಾನುವಾರ ಬೆಳಿಗ್ಗೆಯಿಂದಲೇ ದೇಶದ ನಾನಾ ರಾಜ್ಯಗಳಿಂದ ಭಕ್ತರ ದಂಡು ಹರಿದುಬರುತ್ತಿದ್ದು, ಗುಡ್ಡದಲ್ಲಿ ಜನದಟ್ಟಣೆ ಹೆಚ್ಚಿದೆ. ಜೋಗುಳಬಾವಿಯಲ್ಲಿ ಪವಿತ್ರಸ್ನಾನ ಮಾಡುತ್ತಿರುವ ಭಕ್ತರು, ‘ಎಲ್ಲರ ಅಮ್ಮ' ಯಲ್ಲಮ್ಮನ ನಾಮಸ್ಮರಣೆ ಮಾಡುತ್ತ ಗುಡ್ಡದತ್ತ ಹೆಜ್ಜೆ ಹಾಕುತ್ತಿದ್ದಾರೆ.
ಕರ್ನಾಟಕಕ್ಕಿಂತ ಮಹಾರಾಷ್ಟ್ರದಿಂದಲೇ ಅಧಿಕ ಸಂಖ್ಯೆಯಲ್ಲಿ ಭಕ್ತರು ಗುಡ್ಡದತ್ತ ಬರುತ್ತಿದ್ದಾರೆ. ಎಲ್ಲಿ ನೋಡಿದರೂ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳು ಕಾಣಿಸುತ್ತಿವೆ. ಶಿವಸೇನೆ ಕೊಲ್ಹಾಪುರ ಘಟಕ ಹಾಗೂ ಮಹಾರಾಷ್ಟ್ರದ ವಿವಿಧ ಸಂಘಟನೆಯವರು ಭಕ್ತರಿಗಾಗಿ ಉಚಿತ ಉಪಾಹಾರ ವ್ಯವಸ್ಥೆ ಮಾಡುವ ಜತೆಗೆ, ವೈದ್ಯಕೀಯ ವ್ಯವಸ್ಥೆಯನ್ನೂ ಕಲ್ಪಿಸಿದ್ದಾರೆ.
ಹೊಸ್ತಿಲ ಹುಣ್ಣಿಮೆ ಜಾತ್ರೆಗೆ ವಿವಿಧ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಅವರಿಗೆ ಶುದ್ಧ ಕುಡಿಯುವ ನೀರು, ವಸತಿ, ಶೌಚಗೃಹ ವ್ಯವಸ್ಥೆ ಕಲ್ಪಿಸಲಾಗುವುದು. ಹೊಸದಾಗಿ ನಿರ್ಮಿಸಿದ ತಂಗುದಾಣಗಳನ್ನು ಬಳಕೆಗೆ ಮುಕ್ತಗೊಳಿಸಲಾಗುವುದು. ಸುಲಭವಾಗಿ ದೇವಿ ದರ್ಶನಕ್ಕೆ ಅನುಕೂಲ ಕಲ್ಪಿಸಲಾಗುವುದು ಎಂದು ಸವದತ್ತಿ ಯಲ್ಲಮ್ಮ ಕ್ಷೇತ್ರದ ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಹೊಸ್ತಿಲ ಹುಣ್ಣಿಮೆ ಜಾತ್ರೆಗೆ ಬರುವವರು ಆಡಳಿತ ವ್ಯವಸ್ಥೆಯೊಂದಿಗೆ ಕೈಜೋಡಿಸಬೇಕು. ಶಾಂತಿಯುತವಾಗಿ ನಡೆದುಕೊಂಡು ಜಾತ್ರೆ ಯಶಸ್ಸಿಗೆ ಸಹಕರಿಸಬೇಕು ಎಂದು ಯಲ್ಲಮ್ಮ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ ಮತ್ತು ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಎಸ್ಪಿಬಿ ಮಹೇಶ ಎಂದು ಕೋರಿದರು.
ಯಲ್ಲಮ್ಮನಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಗಳಲ್ಲಿ ವಾಹನದಟ್ಟಣೆ ಹೆಚ್ಚಿದೆ. ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.
ಸಾಮುದಾಯಿಕ ಆರೋಗ್ಯ ಕಾಪಾಡಲು ಎಲ್ಲರೂ ಸಹಕರಿಸುವುದು ಅಗತ್ಯ. ಹಾಗಾಗಿ ಯಲ್ಲಮ್ಮನಗುಡ್ಡದಲ್ಲಿ ನಡೆಯುವ ಜಾತ್ರೆಗೆ ಬರುವ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಜನಸಂದಣಿಯಲ್ಲಿ ಹೆಚ್ಚು ಸೇರಬಾರದು
- ನಿತೇಶ್ ಪಾಟೀಲ, ಜಿಲ್ಲಾಧಿಕಾರಿ