ಜನಸಂಖ್ಯಾ ನಿಯಂತ್ರಣ ಜೊತೆಗೆ ಜನಸಂಖ್ಯಾ ಸ್ಥಿರತೆಯನ್ನು ಕಾಪಾಡುವುದು ಬಹುಮುಖ್ಯ: ನ್ಯಾ. ಪವಿತ್ರಾ
ಬಳ್ಳಾರಿ 12: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಾಷ್ಟ್ರೀಯ ಕುಟುಂಬ ಕಲ್ಯಾಣ ಕಾರ್ಯಕ್ರಮ ವಿಭಾಗದ ಸಂಯುಕ್ತ ಆಶ್ರಯದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಪ್ರಯುಕ್ತ “ವಿಪತ್ತಿನಲ್ಲೂ ಕುಟುಂಬ ಯೋಜನೆ ಸೇವೆ, ಸ್ವಾವಲಂಬಿ ರಾಷ್ಟ್ರ ಮತ್ತು ಕುಟುಂಬಕ್ಕೆ ಹಾದಿ” ಎಂಬ ಘೋಷವಾಕ್ಯದಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಜಾಗೃತಿ ರಥಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಮ್.ಡಿ.ಪವಿತ್ರ್ರಾ ಅವರು ಸೋಮವಾರ ಚಾಲನೆ ನೀಡಿದರು.
ಜಾಗೃತಿ ರಥಕ್ಕೆ ಚಾಲನೆ ನೀಡಿದ ನಂತರ ಅವರು ಮಾತನಾಡಿ ಜನಸಂಖ್ಯೆ ನಿಯಂತ್ರಣದಲ್ಲಿ ಇಲ್ಲಿಯವರೆಗೆ ನಾವು ಅಲ್ಪಮಟ್ಟಿಗೆ ಸಾಧನೆ ಮಾಡಿದ್ದೇವೆ. ನಮ್ಮ ಮುಂದಿರುವ ಸಮಸ್ಯೆ ಎಂದರೆ ಜನಸಂಖ್ಯಾ ಸ್ಥಿರತೆಯನ್ನು ಕಾಯ್ದುಕೊಳ್ಳುವುದಾಗಿದೆ ಎಂದರು.
ಜನಸಂಖ್ಯಾ ಸ್ಥಿರತೆಯನ್ನು ಕಾಯ್ದುಕೊಳ್ಳುವುದು ಎಂದರೆ ಜನ್ಮ ನೀಡುವ ತಾಯಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯದಲ್ಲಿ ಬದ್ದತೆಯನ್ನು ಕಾಪಾಡುವುದಾಗಿದೆ ಎಂದು ಹೇಳಿದ ನ್ಯಾ.ಎಂ.ಡಿ.ಪವಿತ್ರ ಅವರು ಅದಕ್ಕಾಗಿ ಸರ್ಕಾರ ರಾಷ್ಟ್ರೀಯ ಆರೋಗ್ಯ ಅಭಿಯಾನದಲ್ಲಿ ಸಾರ್ವಜನಿಕರಿಗೆ ಅದರಲ್ಲೂ ಮಹಿಳೆಯರಿಗೆ ಸಾಕಷ್ಟು ಆರೋಗ್ಯ ಸೇವಾ ಸೌಲಭ್ಯಗಳನ್ನು ನೀಡುತ್ತಿದ್ದು ಇದರ ಸದುಪಯೋಗಕ್ಕೆ ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು.
ಗರ್ಭಿಣಿಯರ ಆರೈಕೆಗಾಗಿ ಪ್ರಸೂತಿ ಆರೈಕೆ, ಜನನಿ ಸುರಕ್ಷಾ ಯೋಜನೆ, ಜನನಿ ಶಿಶು ಸುರಕ್ಷಾ ಕಾರ್ಯಕ್ರಮ, ಮಡಿಲು ಯೋಜನೆ ಅನುಷ್ಠಾನಗೊಳಿಸಿದ್ದು, ಅದಕ್ಕೆ ಪೂರಕವಾಗಿ ನವಜಾತ ಶಿಶು ಆರೈಕೆ, ರಾಷ್ಟ್ರೀಯ ಬಾಲವಿಕಾಸ, ಶಾಲಾ ಆರೋಗ್ಯ, ಹದಿಹರೆಯದವರ ಆರೈಕೆ, ಅಪೌಷ್ಠಿಕ ಮಕ್ಕಳ ಆರೋಗ್ಯ ಸೇರಿದಂತೆ ಇನ್ನೂ ಅನೇಕ ಜನಪರ ಕಾರ್ಯಕ್ರಮಗಳನ್ನು ಸರ್ಕಾರ ನೀಡುತ್ತಾ ಬಂದಿದ್ದು, ಜನಸಂಖ್ಯೆ ಸ್ಥಿರತೆಯತ್ತ ಗಮನ ನೀಡುತ್ತಿದೆ. ನಾವು ಸಮಾನ ಶಿಕ್ಷಣ, ಸಮಾನ ಆರೋಗ್ಯ ಇವೆರಡು ಅಂಶಗಳನ್ನು ಪಾಲಿಸಿದ್ದಲ್ಲಿ ನಮ್ಮ ದೇಶ ಅಭಿವೃದ್ದಿ ಸ್ಥಿರತೆಯನ್ನು ಕಾಯ್ದುಕೊಳ್ಳುವುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ಹೆಣ್ಣು ಜೀವ ಉಳಿಸಿ ಸಾಮಾಜಿಕ ಜೀವನದಲ್ಲಿ ಹೆಣ್ಣಿನ ಸ್ಥಾನಮಾನವನ್ನು ಹೆಚ್ಚಿಸುವುದು ಕೂಡಾ ದೇಶದ ಅಭಿವೃದ್ದಿಗೆ ಆಸ್ತಿ ಇದ್ದಂತೆ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಡಾ.ಹೆಚ್.ಎಲ್ ಜನಾರ್ಧನ ಅವರು ಮಾತನಾಡಿ, ಜನಸಂಖ್ಯಾ ನಿಯಂತ್ರಣ ಜೊತೆಗೆ ಜನಸಂಖ್ಯಾ ಸ್ಥಿರತೆಯನ್ನು ಕಾಪಾಡುವುದೇ ಬಹುಮುಖ್ಯವಾದ ಅಂಶವಾಗಿದೆ. ಅದಕ್ಕಾಗಿ ಬಾಲ್ಯ ವಿವಾಹ ತಡೆಗಟ್ಟುವುದು, ಹೆಣ್ಣಿಗೆ 18ವರ್ಷ ಹಾಗೂ ಗಂಡಿಗೆ 21ವರ್ಷ ಮೇಲ್ಪಟ್ಟು ಮದುವೆ ಮಾಡುವುದು, ಮದುವೆ ನಂತರ ಕನಿಷ್ಠ ಮೂರು ವರ್ಷಗಳವರೆಗೆ ಮಕ್ಕಳಾಗುವುದನ್ನು ತಡೆಗಟ್ಟುವುದು, ಎರಡು ಮಕ್ಕಳಿಗೆ ಸಂತಾನ ನಿಯಂತ್ರಿಸುವುದು, ಒಂದು ಮಗುವಿನ ನಂತರ ಕನಿಷ್ಠ ಮೂರು ವರ್ಷ ಅಂತರವಿಡುವುದು. ಕುಟುಂಬ ಕಲ್ಯಾಣ ಪದ್ಧತಿ ಅಳವಡಿಸುವಂತೆ ಹೆಚ್ಚಿನ ಗಮನ ಹರಿಸುವುದರಿಂದ ಜನಸಂಖ್ಯೆ ನಿಯಂತ್ರಿಸಿ ಜನಸಂಖ್ಯೆ ಸ್ಥಿರತೆಯನ್ನು ಕಾಪಾಡಿ ದೇಶದ ಸಮಗ್ರ ಅಭಿವೃದ್ದಿಯಲ್ಲಿ ಪಾಲುದಾರರಾಗೋಣ ಎಂದು ಕರೆ ನೀಡಿದರು.
ಇಂದಿಗೆ ನಮ್ಮ ದೇಶದ ಜನಸಂಖ್ಯೆ 134 ಕೋಟಿ ದಾಟಿದ್ದು ಜಗತ್ತಿನ ಶೇ.17.86 ಜನಸಂಖ್ಯೆ ಭಾರತದಲ್ಲಿದೆ. 6.68 ಕೋಟಿ ಜನಸಂಖ್ಯೆ ಕರ್ನಾಟಕ ರಾಜ್ಯದಲ್ಲಿದೆ. ಹೆಚ್ಚುತ್ತಿರುವ ಜನಸಂಖ್ಯೆ ದೇಶದ ಸಾಮಾಜಿಕ ಆರ್ಥಿಕ ಅಭಿವೃದ್ದಿಯಲ್ಲಿ ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದೇವೆ. ಆದರೂ ಕೂಡ 10ವರ್ಷಗಳಲ್ಲಿ ಜನನ ದರದಲ್ಲಿ ಇಳಿಕೆ ಕಾಣುತ್ತಿದ್ದೇವೆ ಎಂದರು.
*27.54ಲಕ್ಷದಿಂದ 33.80ಲಕ್ಷಕ್ಕೇರಿದ ಬಳ್ಳಾರಿ ಜನಸಂಖ್ಯೆ: ಬಳ್ಳಾರಿ ಜಿಲ್ಲೆಯ ಜನಸಂಖ್ಯೆಯು 2011ರ ಜನಗಣತಿಯ ಪ್ರಕಾರ ಒಟ್ಟು ಜನಸಂಖ್ಯೆ 27,54,598 ಇದ್ದು ಅದರಲ್ಲಿ ಪುರುಷರು:13,91,243, ಮಹಿಳೆಯರು:13,63,355 ಇದ್ದರು; ಸದ್ಯ ಅಂದರೇ 2021ರಲ್ಲಿ ಒಟ್ಟು ಜನಸಂಖ್ಯೆ 33,80,240ಕ್ಕೇರಿದೆ. ಇದರಲ್ಲಿ ಪುರುಷರು: 1706387, ಮಹಿಳೆಯರು: 1673842 ಸಂಖ್ಯೆಯಲ್ಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂಕಿಸಂಖ್ಯೆಗಳು ತಿಳಿಸಿವೆ.
ಜನಸಂಖ್ಯೆ ನಿಯಂತ್ರಣಕ್ಕಾಗಿ ಪ್ರಸ್ತುತ ಪುರುಷ ಮತ್ತು ಮಹಿಳೆರಿಯಗೆ ಶಾಶ್ವತ ಶಸ್ತ್ರಚಿಕಿತ್ಸಾ ವಿಧಾನಗಳು ಲಭ್ಯವಿವೆ. ಮಹಿಳೆಯರಿಗೆ ಲ್ಯಾಪ್ರೊಸ್ಕೋಪಿಕ್ ಮತ್ತು ಟ್ಯುಬೆಕ್ಟಮಿ ಶಸ್ತ್ರಚಿಕಿತ್ಸೆ ಇದ್ದು ಇದರ ಅಡಿಯಲ್ಲಿ ಇಲ್ಲಿಯವರೆಗೆ 13158 ಮಹಿಳಾ ಫಲಾನುಭವಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಪುರುಷರಿಗೆ ನೋ ಸ್ಕಾಲ್ಪೇಲ್ ವ್ಯಾಸಕ್ಟಮಿ ಶಸ್ತ್ರಚಿಕಿತ್ಸೆ ಇದ್ದು ಇದರ ಅಡಿಯಲ್ಲಿ 04 ಜನ ಫಲಾನುಭವಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ಜನನದ ಮಧ್ಯೆ ಅಂತರವಿಡಲು ತಾತ್ಕಾಲಿಕ ವಿಧಾನಗಳು ಅಡಿಯಲ್ಲಿ ಇಲ್ಲಿಯವರೆಗೆ 8852 ಮಹಿಳೆಯರಿಗೆ ವಂಕಿ ಅಳವಡಿಸಲಾಗಿದ್ದು, 8458 ಮಹಿಳಾ ಫಲಾನುಭವಿಗಳಿಗೆ ನುಂಗುವ ಮಾತ್ರೆ ವಿತರಿಸಲಾಗಿದೆ. ಇತ್ತೀಚೆಗೆ ಬಂದ ಎಮ್.ಪಿ.ಎ (ಅಂತರ) ಗರ್ಭ ನಿರೋಧಕ ಚುಚ್ಚುಮದ್ದನ್ನು 2983 ಫಲಾನುಭವಿಗಳು ಪಡೆಯುತ್ತಿದ್ದಾರೆ. ವಿಶೇಷವಾಗಿ ಹೆರಿಗೆಯಾದ ತಕ್ಷಣ ಪಿಪಿಐಯುಸಿಡಿ(ವಂಕಿ) 48 ಗಂಟೆ ಒಳಗಡೆ 5886 ಮಹಿಳೆಯರಿಗೆ ಪಿಪಿಐಯುಸಿಡಿ ಅಳವಡಿಸುವುದರಿಂದ ಗಣನೀಯವಾಗಿ ಜನಸಂಖ್ಯೆಯನ್ನು ನಿಯಂತ್ರಿಸಲಾಗಿದೆ. ಮತ್ತು ಪುರುಷರಿಗೆ ನಿರೋಧ್ ಲಭ್ಯವಿದ್ದು 41850 ಫಲಾನುಭವಿಗಳಿಗೆ ನಿರೋಧ್ ವಿತರಿಸಿ ಜಿಲ್ಲೆಯಲ್ಲಿ ಜನಸಂಖ್ಯೆ ನಿಯಂತ್ರಿಸಲು ವ್ಯಾಪಕ ಕ್ರಮಕೈಗೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಜಿಲ್ಲಾ ತರಬೇತಿ ಸಂಸ್ಥೆ ಪ್ರಾಂಶುಪಾಲ ಡಾ.ಗುರುನಾಥ್ ಬಿ. ಚೌವ್ಹಾಣ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಪೂರ್ಣಿಮಾ ಕಟ್ಟಿಮನಿ, ಜಿಲ್ಲಾ ಕುಷ್ಠರೋಗ ನಿಯಂತ್ರಣ ಅಧಿಕಾರಿ ಡಾ. ರಾಜಶೇಖರರೆಡ್ಡಿ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಆರ್. ಅನಿಲ್ ಕುಮಾರ್, ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ. ಆರ್. ಅಬ್ದುಲ್ಲಾ, ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ. ಇಂದ್ರಾಣಿ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಮೋಹನಕುಮಾರಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್.ದಾಸಪ್ಪನವರ್, ಎ.ಎಸ್.ಒ ಡಾ ರಾಘವೇಂದ್ರ ಶಾನಬೋಗರ, ಡಿಕ್ಯೂಎಮ್ ನಾಗವೇಣಿ, ತಾಲ್ಲೂಕ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಮ್ಮ ಉಪ್ಪಾರ ಸೇರಿದಂತೆ ಸಿಬ್ಬಂದಿ ವರ್ಗದವರಿದ್ದರು.