ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ
ಇಂಡಿ: ನಮ್ಮ ದೇಶದಲ್ಲಿ ಜಗಜ್ಯೋತಿ ಬಸವಣ್ಣನವರು 12 ನೇ ಶತಮಾನದಲ್ಲಿ ಮಾನವ ಹಕ್ಕುಗಳನ್ನು ಪರಿಚಯಿಸಿದ್ದಾರೆ. ಪ್ರತಿಯೊಬ್ಬ ಮಾನವನ ಈ ಹಕ್ಕುಗಳು ಸಂರಕ್ಷಿಸಲ್ಪಡಬೇಕು. ಯಾರೂ ದಮನಿಸಬಾರದು. ಮನುಷ್ಯನ ಕನಿಷ್ಠ ಅಗತ್ಯತೆಗಳು ಸಿಗಬೇಕು ಎಂದು ರಾಜ್ಯಶಾಸ್ತ್ರ ವಿಭಾಗ ಸಹಾಯಕ ಪ್ರಾಧ್ಯಾಪಕ ಡಾ.ಆನಂದ ನಡುವಿನಮನಿ ಹೇಳಿದರು.
ಶುಕ್ರವಾರ ಪಟ್ಟಣದ ಜಿ.ಆರ್.ಗಾಂಧಿ ಕಲಾ, ವಾಯ್.ಎ.ಪಾಟೀಲ ವಾಣಿಜ್ಯ ಹಾಗೂ ಎಮ್.ಎಫ್.ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ವಿಭಾಗ ಎನ್.ಎಸ್.ಎಸ್ ಘಟಕ ಮತ್ತು ಮಹಿಳಾ ವೇದಿಕೆ ಅಡಿಯಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಾಚಾರ್ಯ ಎಸ್.ಬಿ.ಜಾಧವ ಮಾತನಾಡಿ ಸಂವಿಧಾನ ಹಾಗೂ ಕಾನೂನು ನೀಡಿರುವ ಮಾನವ ಹಕ್ಕುಗಳನ್ನು ಬೆಂಬಲಿಸಿ ಬಾಳಬೇಕಿದೆ. ಮತ್ತೊಬ್ಬನ ಸ್ವಾತಂತ್ರ್ಯವನ್ನು ಗೌರವಿಸಿ ಬದುಕುವುದೇ ಮಾನವ ಹಕ್ಕುಗಳ ಪಾಲನೆ ಮಾಡಿದಂತೆ ಎಂದರು.
ಡಾ.ವಿಶ್ವಾಸ ಕೋರವಾರ ಮಾತನಾಡಿದರು.
ಸಹಾಯಕ ಪ್ರಾಧ್ಯಾಪಕ ಶ್ರೀಕಾಂತ ರಾಠೋಡ, ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.