ವಿಜಯಪುರ

ವಿಜಯಪುರದಲ್ಲಿ ವಿಶ್ವ ಆಲ್ಝೈಮರ್ಸ್‌ ದಿನಾಚರಣೆ ಜಾಗೃತಿ ಕಾರ್ಯಕ್ರಮ

ವಿಜಯಪುರದಲ್ಲಿ ವಿಶ್ವ ಆಲ್ಝೈಮರ್ಸ್‌ ದಿನಾಚರಣೆ ಜಾಗೃತಿ ಕಾರ್ಯಕ್ರಮ

ಲೋಕದರ್ಶನ ವರದಿ 

ವಿಜಯಪುರ, 23: ಡಿಮೆನ್ಷಿಯಾ (ಆಲ್ಝೈಮರ್ಸ್‌) ಕಾಯಿಲೆಯನ್ನು ನಿಯಂತ್ರಿಸುವುದು ಮತ್ತು ತಡೆಯುವುದು ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಮಲ್ಲನಗೌಡ ಬಿರಾದಾರ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ವಾರ್ತಾ ಮತ್ತು ಸಂಪರ್ಕ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮದ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಆಲ್ಝೈಮರ್ಸ್‌ ದಿನಾಚರಣೆ ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಈ ನಿಟ್ಟಿನಲ್ಲಿ ಎಷ್ತು ಬೇಗ ತಿಳಿಯುತ್ತದೆಯೋ, ಅಷ್ಟು ಆರೈಕೆ ಸಾಧ್ಯ ಎಂಬ ಘೋಷವಾಕ್ಯದೊಂದಿಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಅತ್ಯಗತ್ಯ ಎಂದರು. 

ಜಿಲ್ಲಾ ಕುಷ್ಟರೋಗ ನಿರ್ಮೂಲನಾ ಅಧಿಕಾರಿ ಡಾ. ಅರ್ಚನಾ ಕುಲಕರ್ಣಿ ಸಾರ್ವಜನಿಕರು ಮೆದುಳಿನ ಆರೋಗ್ಯದ ಬಗ್ಗೆ ಭಯಪಡುವ ಅಗತ್ಯವಿಲ್ಲ.  ಜಿಲ್ಲಾ ಆಸ್ಪತ್ರೆಯಲ್ಲಿ ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮದಡಿ ಉಚಿತ ಚಿಕಿತ್ಸೆ ಹಾಗೂ ಆಪ್ತಸಮಾಲೋಚನೆ ಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಡಿಮೆನ್ಷಿಯಾ ಮೆದುಳಿಗೆ ಸಂಬಂಧಿಸಿದ ಕಾಯಿಲೆಯಾಗಿದ್ದು, ನರತಂತು ರಾಸಾಯನಿಕ ದ್ರವದಲ್ಲಿ ಉಂಟಾಗುವ ವ್ಯತ್ಯಾಸಗಳಿಂದ ಬರುತ್ತದೆ. ವಯೋಸಹಜ ಕಾರಣಗಳಲ್ಲದೆ ತಲೆಗೆ ಪೆಟ್ಟು ಬೀಳುವುದು, ಧೂಮಪಾನ, ಮದ್ಯಪಾನ ಹಾಗೂ ದೀರ್ಘಕಾಲದ ಅನಾರೋಗ್ಯದಿಂದಲೂ ಇದು ಬರಬಹುದು.

ಆರಂಭಿಕ ಹಂತದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ ಪಡೆದರೆ ಗುಣಮುಖರಾಗಲು ಸಾಧ್ಯ ಎಂದರು. ಮನೋರೋಗ ತಜ್ಞ ಡಾ. ಮಂಜುನಾಥ ಮಸಳಿ ಮಾತನಾಡಿ, ಆಲ್ಝೈಮರ್ಸ್‌ ಹಾಗೂ ವಿವಿಧ ಮೆದುಳು ಆರೋಗ್ಯ ಸಮಸ್ಯೆಗಳಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಪರಿಹಾರ ಪಡೆದುಕೊಳ್ಳಬಹುದು ಎಂದರು. ಕಾರ್ಯಕ್ರಮದಲ್ಲಿ ಡಾ. ಯಶವಂತಗೌಡ ಪಾಟೀಲ, ಡಾ. ವಿ. ಜಿ. ಸತ್ತಿಕರ್, ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮದ ಜಿಲ್ಲಾ ಸಂಯೋಜಕ ಎನ್‌. ಆರ್‌. ರಾಠೋಡ, ಆನಂದ್‌. ಜಿ ತಾಲೂಕು ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಬಾಗವಾನ, ಐ.ಇ.ಸಿ ವಿಭಾಗದ  ಹಾಗೂ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು. 


ಸುದ್ದಿ ಓದಿ