ಹಿರಿಯ ನಾಗರಿಕರ ಅನುಭವ ಸಮಾಜ ನಿರ್ಮಾಣಕ್ಕೆ ದಾರೀದೀಪ: ಅರವಿಂದ ಹಾಗರಗಿ
ಲೋಕದರ್ಶನ ವರದಿ
ವಿಜಯಪುರ, ಅ.1 : ಜೀವನದ ಮುಸ್ಸಂಜೆಯಲ್ಲಿರುವ ಹಿರಿಯ ನಾಗರಿಕರು ಸಮಾಜದ ಅಮೂಲ್ಯ ಆಸ್ತಿ. ಅವರ ಜೀವನಾನುಭವ, ಜ್ಞಾನ ಮತ್ತು ಮಾರ್ಗದರ್ಶನ ಸದೃಢ ಸಮಾಜ ನಿರ್ಮಾಣಕ್ಕೆ ಅಗತ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅರವಿಂದ ಹಾಗರಗಿ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಗುರುವಾರ ‘ದೀರ್ಘಾಯುಷ್ಯದ ಯುಗ, ಸುದೀರ್ಘ ಜೀವನಕ್ಕಾಗಿ ಜೀವನ ಕ್ರಮಗಳ ಮರುಚಿಂತನೆ’ ಧ್ಯೇಯವಾಕ್ಯದಡಿ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯುವಜನರು ಹಿರಿಯ ನಾಗರಿಕರ ಅನುಭವ ಹಾಗೂ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಅವರನ್ನು ಗೌರವದಿಂದ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು. ಹಿರಿಯರ ಬೇಡಿಕೆಗಳು ಹಾಗೂ ಸಮಸ್ಯೆಗಳಿಗೆ ಕಾನೂನು ಸೇವೆಗಳ ಪ್ರಾಧಿಕಾರ ಸದಾ ಸ್ಪಂದಿಸಲಿದೆ ಎಂದು ಭರವಸೆ ನೀಡಿದರು.