ವಿಜಯಪುರ

ಹಿಂದಿ ಸಾಹಿತ್ಯ ಓದಿಗೆ ಕರೆ

ಹಿಂದಿ ಸಾಹಿತ್ಯ ಓದಿಗೆ ಕರೆ

ಲೋಕದರ್ಶನ ವರದಿ 

  ವಿಜಯಪುರ 1: ಹಿಂದಿ ಸಾಹಿತ್ಯದ ಉತ್ತಮ ಕೃತಿಗಳನ್ನು ಓದುವ ಮೂಲಕ ಜ್ಞಾನ ವಿಸ್ತರಿಸಿಕೊಳ್ಳಬೇಕು. ಯುವಜನರು ಭಾಷಾ ಅಧ್ಯಯನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿಜಯಾ ಬಿ. ಕೋರಿಶೆಟ್ಟಿ ಹೇಳಿದರು. ವಿಶ್ವವಿದ್ಯಾಲಯದ ಹಿಂದಿ ಅಧ್ಯಯನ ವಿಭಾಗದಿಂದ ಆಯೋಜಿಸಿದ್ದ ಹಿಂದಿ ದಿನಾಚರಣೆ ಹಾಗೂ ‘ಹಿಂದಿ ಭಾಷೆ ಸಾಹಿತ್ಯದ ವಿವಿಧ ಆಯಾಮಗಳು’ ವಿಷಯದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.  

ಹಿಂದಿ ಪ್ರಮುಖ ಸಂಪರ್ಕ ಭಾಷೆಯಾಗಿದ್ದು, ಅದರ ಬೆಳವಣಿಗೆಗೆ ಶ್ರಮಿಸುತ್ತಿರುವವರನ್ನು ಅಭಿನಂದಿಸಬೇಕು. ಹಿಂದಿ ಸಾಹಿತ್ಯವನ್ನು ಓದಿ, ಅರ್ಥೈಸಿಕೊಳ್ಳುವ ಮೂಲಕ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಸಹಕರಿಸಬೇಕು ಎಂದರು.

ಕುಲಸಚಿವ ಡಾ. ವಿಜಯಕುಮಾರ್ ಅಜೂರ್ ಮಾತನಾಡಿ, ಹಿಂದಿ ಭಾಷೆಯ ಹುಟ್ಟು, ಬೆಳವಣಿಗೆ ಹಾಗೂ ಮಹತ್ವವನ್ನು ವಿವರಿಸಿದರು. ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಹಲವು ಭಾಷೆಗಳನ್ನು ಕಲಿಯಬೇಕು. ಹಿಂದಿಯೊಂದಿಗೆ ಎಲ್ಲ ಭಾಷೆಗಳಿಗೂ ಗೌರವ ನೀಡಬೇಕು ಎಂದು ಹೇಳಿದರು.  

ಮುಖ್ಯ ಭಾಷಣಕಾರ ನಲದುರ್ಗ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಹಾಶಿಂ ಬೇಗ್ ಮಿರ್ಜಾ, ಹಿಂದಿ ಸಾಹಿತ್ಯದ ವೈವಿಧ್ಯತೆ, ಸಾಮಾಜಿಕ ಬದ್ಧತೆ ಹಾಗೂ ಸಮಕಾಲೀನ ಪ್ರಸ್ತುತತೆಯ ಕುರಿತು ಮಾತನಾಡಿದರು.  

ಡಾ. ಗುಲಾಬ ರಾಠೋಡ ನೇತೃತ್ವದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ರಾಜ್ಯದ ವಿವಿಧ ಕಾಲೇಜುಗಳ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ವಿಚಾರ ಮಂಡಿಸಿದರು. ಡೀನ್ ಪ್ರೊ. ರಾಜು ಬಾಗಲಕೋಟ, ಐಕ್ಯೂಎಸಿ ನಿರ್ದೇಶಕಿ ಪ್ರೊ. ಶಾಂತಾದೇವಿ ಟಿ. ಉಪಸ್ಥಿತರಿದ್ದರು. ಡಾ. ಅಮರನಾಥ ಪ್ರಜಾಪತಿ ವಂದಿಸಿದರು. ಪದ್ಮಶ್ರೀ ಚೌಗಲೆ ನಿರೂಪಿಸಿದರು. 


ಸುದ್ದಿ ಓದಿ