ಆರ್ಥಿಕವಾಗಿ ದಿವಾಳಿಯಾದ ಸರ್ಕಾರಕ್ಕೆ ದೇಣಿಕ ಸಂಗ್ರಹ ಮೂಲಕ ಆರ್ಥಿಕ ನೆರವು
ಲೋಕದರ್ಶನ ವರದಿ
ವಿಜಯಪುರ 01: ಸರ್ಕಾರದಲ್ಲಿ ಹಣ ಇರದಿದ್ದರೆ ಪರಿಹಾರ ಕೊಡುವುದು ಬಿಡಲಿ ಆದರೆ ಭಿಕ್ಷುಕರಂತೆ 2500 ರೂಗಳನ್ನು ಇನ್ಪುಟ್ ಸಬ್ಸಿಡಿಯಲ್ಲಿ ಅತಿ ಕಡಿಮೆ ಪರಿಹಾರ ನೀಡಲು ಮುಂದಾದ ಸರ್ಕಾರ ರಾಜ್ಯದ ರೈತರನ್ನು ಬಿಕ್ಷುಕರಂತೆ ಹೀನಾಯವಾಗಿ ನೋಡುತ್ತಿದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ್ ಕುಲಕರ್ಣಿ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ವಿಠ್ಠಲ್ ಬಿರಾದರ್, ತಾಳಿಕೋಟಿ ತಾಲ್ಲೂಕು ಉಪಾಧ್ಯಕ್ಷ ರಾಮನಗೌಡ ಹಾದಿಮನಿ ರಾಜ್ಯ ಸರ್ಕಾರದ ವಿರುದ್ಧ ಅಕ್ರೋಶ ಹೊರಹಾಕಿದ್ದಾರೆ. ಆರ್ಥಿಕವಾಗಿ ಸಂಪೂರ್ಣ ದಿವಾಳಿಯಾಗಿದೆ. ರೈತರಿಗೆ ಕನಿಷ್ಠ 25000 ರೂಗಳವರೆಗೆ ಪ್ರತಿ ಎಕರೆಯಂತೆ ಪರಿಹಾರ ನೀಡಲು ರಾಜ್ಯ ಸರ್ಕಾರಕ್ಕೆ ಯೋಗ್ಯತೆ ಇಲ್ಲದಂತಾಗಿದೆ. ಆದ್ದರಿಂದ ಹಣಕಾಸಿನಿಂದ ಕಂಗೆಟ್ಟಿರುವ ರಾಜ್ಯ ಸರ್ಕಾರಕ್ಕೆ ಆರ್ಥಿಕ ಬಲ ತುಂಬಲು ಅಖಂಡ ಕರ್ನಾಟಕ ರೈತ ಸಂಘದಿಂದ ದೇಣಿಗೆ ಸಂಗ್ರಹಿಸಿ ರವಾನಿಸಲು ಮುಂದಾಗಿದ್ದೇವೆ ಎಂದರು.
ಗುರುವಾರ ಬೆಳಿಗ್ಗೆ 11:30ಕ್ಕೆ ಸ್ಥಳೀಯ ಸಿದ್ದೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ದೇಣಿಗೆ ಸಂಗ್ರಹಿಸುವ ಕಾರ್ಯಕ್ಕೆ ಚಾಲನೆ ನೀಡಿದ ಸಂಘಟನೆಯ ಪದಾಧಿಕಾರಿಗಳು ಲಾಲ್ ಬಹದ್ದೂರ್ ಶಾಸ್ತ್ರೀ ಮಾರುಕಟ್ಟೆಯ ಮುಖಾಂತರ ಗಾಂಧಿ ವೃತ್ತ, ಬಸವೇಶ್ವರ ವೃತ್ತ ಹಾಗೂ ಅಂಬೇಡ್ಕರ್ ವೃತ್ತದ ಮೂಲಕ ವಿವಿಧ ಅಂಗಡಿಗಳಿಗೆ ಹಾಗೂ ತರಕಾರಿ ಮಾರುವ ರೈತರು ಹಾಗೂ ರೈತ ಮಹಿಳೆಯರಿಂದ ದೇಣಿಗೆ ಪಡೆದುಕೊಂಡು ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿ ಅಪರ ಜಿಲ್ಲಾದಿಕಾರಿ ಡಾ ಓದ್ರಾಮ ಇವರಿಗೆ ಮನವಿ ಹಾಗೂ 4025 ರೂಗಳ ಡಿಡಿಯನ್ನು ಸರ್ಕಾರಕ್ಕೆ ರವಾನಿಸಲು ಸಲ್ಲಿಸಲಾಯಿತು. ನಂತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ್ ಕುಲಕರ್ಣಿ ಮಾತನಾಡಿ ಆರ್ಥಿಕವಾಗಿ ಇಂತಹ ಹೀನಾಯ ಪರಿಸ್ಥಿತಿ ಯಾವ ಸರ್ಕಾರಕ್ಕೂ ಬರಬಾರದೆಂದು ಲೇವಡಿ ಮಾಡಿದರು.