ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು: ಶಾಸಕ ಹೆಬ್ಬಾರ
ಮುಂಡಗೋಡ 30:ಯೋಜನೆಗಳು ಶಾಶ್ವತವಾಗಿ ಉಳಿಯಲು ಗುತ್ತಿಗೆದಾರರಿಂದ ಜವಾಬ್ದಾರಿಯ ಗುಣಮಟ್ಟದ ಕಾಮಗಾರಿಯಾಗಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ-ವಿಭಾಗದ 2022-23ನೇ ಸಾಲಿನ ಜಲ ಜೀವನ್ ಮಿಷನ್ ಯೋಜನೆಯಡಿಯಲ್ಲಿ ಮಂಜೂರಾದ ತಾಲೂಕಿನ ಬಾಚಣಕಿ ಗ್ರಾಮ ಹಾಗೂ ಇತರೆ 7ಜನ ವಸತಿಗಳಿಗೆ ಬಹುಗ್ರಾಮ ಶುದ್ಧ ಕುಡಿಯುವ ನೀರಿನ ಯೋಜನೆ ಕಾಮಗಾರಿಯ ಭೂಮಿ ಪೂಜೆಯನ್ನು ಬಾಚಣಕಿ ಜಲಾಶಯದ ಬಳಿ ರವಿವಾರ ನೆರವೇರಿಸಿ ಅವರು ಮಾತನಾಡಿದರು. ಸಚಿವ ಸಂಪುಟದಲ್ಲಿ ಇದ್ದಾಗಲೇ ನಿರ್ಣಯ ಮಾಡಿದ 18ಕೋಟಿ ರೂ. ಯೋಜನೆ ಇದಾಗಿದ್ದು ಒಂದು ವರ್ಷದಲ್ಲಿ ಕಾಮಗಾರಿ ಅಚ್ಚುಕಟ್ಟಾಗಿ ಮಾಡಿ ಮುಗಿಸಬೇಕು. ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಕೇವಲ ಗುತ್ತಿಗೆದಾರರಿಗೆ ಮತ್ತು ಅಧಿಕಾರಿಗಳಿಗೆ ಮಾತ್ರ ಗೊತ್ತಿದ್ದರೆ ಸಾಲದು, ಜನರಿಗೂ ಗೊತ್ತಾಗಬೇಕು. ಇಂದೂರ, ಕೊಪ್ಪ ಸೇರಿದಂತೆ ಬಾಚಣಕಿ ಗ್ರಾಮದ ಎಲ್ಲ ಭಾಗಗಳಿಗೂ ನೀರು ಪೂರೈಕೆಯಾಗುತ್ತದೆ. ಭವಿಷ್ಯದ ಸಲುವಾಗಿ ಶಾಶ್ವತ ಯೋಜನೆ ಆಗಬೇಕು. ಶತಮಾನದ ನಂತರ ಇಂತಹ ಯೋಜನೆ ತರಲಾಗಿದ್ದು ಸಾರ್ವಜನಿಕರ ಸಹಕಾರವೂ ಮುಖ್ಯ ಎಂದರು.
ಪಂಚಾಯತ್ರಾಜ್ ಇಂಜಿನಿಯರಿಂಗ್ ಉಪವಿಭಾಗದ ಕಿರಿಯ ಇಂಜಿನಿಯರ ಪ್ರದೀಪ ಭಟ್ ಪ್ರಾಸ್ತಾವಿಕ ಮಾತನಾಡಿ ಈಗಾಗಲೆ ಜಲ ಜೀವನ್ ಮಷಿನ್ ಯೋಜನೆಯನ್ನು ಎಲ್ಲ ಹಳ್ಳಿಗಳಲ್ಲಿ ಅನಿಷ್ಠಾನಗೊಳಿಸಲಾಗುತ್ತಿದೆ. ಮುಂಡಗೋಡ ಭಾಗದಲ್ಲಿ ನೀರಿನ ಸಮಸ್ಯೆ ತಲೆದೋರಿದ್ದು ಬೋರ್ವೆಲ್ಗಳಲ್ಲಿ ಕೂಡ ನೀರು ಸಿಗುತ್ತಿಲ್ಲ. ಹಾಗಾಗಿ ಬಾಚಣಕಿ ಜಲಾಶಯದ ನೀರು ಬಳಸಿಕೊಂಡು ಶುದ್ಧಿಕರಣ ಮಾಡಿ 7 ಹಳ್ಳಿಗಳಿಗೆ ನೀರು ಪೂರೈಸುವ ಯೋಜನೆಯನ್ನು ಸರ್ಕಾರದ ಮಟ್ಟದಲ್ಲಿ ಶಾಸಕರು ಅನುಮೋದನೆ ಮಾಡಿಕೊಂಡು ಬಂದಿರುವುದರಿಂದ 7 ಹಳ್ಳಿಗಳಿಗೆ ನೀರಿನ ಶಾಶ್ವತ ಪರಿಹಾರ ಸಿಗುವಂತಾಗಿದೆ. ಯೋಜನೆಯ ಅನುಷ್ಠಾನಕ್ಕೆ ಜನಸಾಮಾನ್ಯರ ಸಹಕಾರ ಕೂಡ ಅಗತ್ಯ ಎಂದರು.
ಇದಕ್ಕೂ ಮುನ್ನ ಯೋಜನೆಗೆ ಸಂಬಂಧಪಟ್ಟಂತೆ ನೀರು ಪೂರೈಕೆಯಾಗುವ ಕುರಿತು ನಕಾಶೆ ಮೂಲಕ ಶಾಸಕರಿಗೆ ಮತ್ತು ಗ್ರಾ.ಪಂ.ಸದಸ್ಯರಿಗೆ ಪ್ರದೀಪ ಭಟ್ ತಿಳಿಸಿದರು.
ಈ ವೇಳೆ ಎಇಇ ರಾಜೇಶ್ವರಿ ಕದಂ, ಬಾಚಣಕಿ ಗ್ರಾ.ಪಂ.ಅಧ್ಯಕ್ಷೆ ಫಕ್ಕೀರವ್ವ ಪಾಟೀಲ, ಇಂದೂರ ಗ್ರಾ.ಪಂ.ಅಧ್ಯಕ್ಷ ಶಶಿಧರ ಪರವಾಪುರ, ವೈ.ಪಿ.ಪಾಟೀಲ, ಡಿ.ಎಫ್.ಮಡ್ಲಿ, ನಾಗಭೂಷಣ ಹಾವಣಗಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.