ಮಹಿಳೆಯರ ಧ್ವನಿಯನ್ನು ನಿರ್ಲಕ್ಷಿಸದೆ ಸಮಾಜದ ಗಮನಕ್ಕೆ ತರಬೇಕು: ಪ್ರೊ. ವಿಜಯಾ ಬಿ. ಕೋರಿಶೆಟ್ಟಿ
ಲೋಕದರ್ಶನ ವರದಿ
ವಿಜಯಪುರ, ಸೆ. 24: ಮಹಿಳೆಯರ ಧ್ವನಿಯನ್ನು ನಿರ್ಲಕ್ಷಿಸಿದಾಗ ಅದನ್ನು ಸಮಾಜದ ಗಮನಕ್ಕೆ ತರುವುದು ನಮ್ಮ ಕರ್ತವ್ಯ. ಸಮಾನತೆ ಕೇವಲ ಮಾತಿಗೆ ಸೀಮಿತವಾಗದೆ, ಜೀವನದಲ್ಲಿ ಪಾಲಿಸುವ ಮೌಲ್ಯವಾಗಬೇಕು ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿಜಯಾ ಬಿ. ಕೋರಿಶೆಟ್ಟಿ ಹೇಳಿದರು.
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ, ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗ, ಸ್ನಾತಕ ವಿಭಾಗ ಹಾಗೂ ಬೆಂಗಳೂರಿನ ಗುಬ್ಬಿವಾಣಿ ಟ್ರಸ್ಟ್ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ‘ಅವಳ ಹೆಜ್ಜೆ ಕಿರುನಾಟಕ 2026’ ಮಹಿಳಾ ನಿರ್ದೇಶಿತ ಕನ್ನಡ ಕಿರುನಾಟಕಗಳ ಮರುಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಲಿಂಗ ಸಂವೇದನೆ ಹಾಗೂ ಮಹಿಳಾ ಸಬಲೀಕರಣದ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ. ಮಹಿಳೆಯರನ್ನು ಪುರುಷರಷ್ಟೇ ಸಮರ್ಥವಾಗಿ ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಉನ್ನತ ಶಿಕ್ಷಣದ ಮೂಲಕ ಪಡೆದ ಜ್ಞಾನವನ್ನು ಕೇವಲ ತಲೆಯಲ್ಲಿ ಇಟ್ಟುಕೊಳ್ಳದೆ, ಜೀವನದಲ್ಲಿ ಅಳವಡಿಸಿಕೊಂಡು ತಮ್ಮ ನಿಲುವನ್ನು ಗಟ್ಟಿಯಾಗಿ ಪ್ರತಿಪಾದಿಸಬೇಕು ಎಂದು ಹೇಳಿದರು.
ಸಾಮಾಜಿಕ ಸಮಸ್ಯೆಗಳನ್ನು ಆಧರಿಸಿದ ಕಿರುನಾಟಕಗಳ ಮೂಲಕ ವಿವಿಧ ವಿಚಾರಗಳನ್ನು ಅರ್ಥಮಾಡಿಕೊಂಡು, ಅವುಗಳಿಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಬೇಕು. ಕಲೆಯ ಮೂಲಕ ಸಮಾಜದಲ್ಲಿನ ಸಮಸ್ಯೆಗಳ ಕುರಿತು ಚರ್ಚೆ ನಡೆಸುವುದು ಹಾಗೂ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಂಡ್ಯದ ಗುಬ್ಬಿವಾಣಿ ಟ್ರಸ್ಟ್ನ ‘ಅವಳ ಹೆಜ್ಜೆ’ ಕಾರ್ಯಕ್ರಮದ ನಿರ್ದೇಶಕಿ ಶಾಂತಲಾ ದಾಮ್ಲೆ ಮಾತನಾಡಿ, ಮಹಿಳಾ ಸಬಲೀಕರಣ ಎಂದರೆ ಮಾನಸಿಕ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಮಹಿಳೆಯರು ಸಬಲರಾಗುವುದು. ಮಹಿಳೆಯರು ತಮ್ಮ ಅನುಭವ ಹಾಗೂ ವಿಚಾರಗಳನ್ನು ತಾವೇ ಹೇಳಿಕೊಳ್ಳಲು ಅವಕಾಶ ಕಲ್ಪಿಸುವುದು ಅಗತ್ಯ ಎಂದು ಹೇಳಿದರು.
ಚಿತ್ರರಂಗದಲ್ಲಿ ಮಹಿಳಾ ನಿರ್ದೇಶಕರ ಸಂಖ್ಯೆ ಹೆಚ್ಚಾಗಬೇಕು. ಮಹಿಳೆಯರ ದೃಷ್ಟಿಕೋನದಿಂದ ಮೂಡಿಬರುವ ಕಥೆಗಳು ಹಾಗೂ ಕೃತಿಗಳಿಗೆ ಹೆಚ್ಚಿನ ಅವಕಾಶ ದೊರೆಯಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಿ, ತಾವು ಸಂಪಾದಿಸಿದ ಹಣವನ್ನು ತಮ್ಮ ನಿರ್ಧಾರದಂತೆ ಬಳಸುವ ಸ್ವಾತಂತ್ರ್ಯ ಹೊಂದಬೇಕು. ರಾಜಕೀಯ ಹಕ್ಕುಗಳು, ನೀತಿಗಳು ಹಾಗೂ ನಿರ್ಧಾರಗಳ ಕುರಿತು ಮಹಿಳೆಯರಲ್ಲಿ ರಾಜಕೀಯ ಪ್ರಜ್ಞೆ ಬೆಳೆಸಬೇಕು.
ಮಾನಸಿಕ ಧೈರ್ಯದ ಜೊತೆಗೆ ದೈಹಿಕ ಆರೋಗ್ಯ ಮತ್ತು ಸಾಮರ್ಥ್ಯಕ್ಕೂ ಹೆಚ್ಚಿನ ಆದ್ಯತೆ ನೀಡಬೇಕು. ಮುಂದಿನ ಪೀಳಿಗೆಯ ಹೆಣ್ಣುಮಕ್ಕಳು ಇಂದಿನ ಸವಾಲುಗಳನ್ನು ಎದುರಿಸುವಂತೆ ಮಹಿಳೆಯರು ಸಕ್ರಿಯವಾಗಿ ಸಬಲರಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗುಬ್ಬಿವಾಣಿ ಟ್ರಸ್ಟ್ನ ಓಟ್ರೀಚ್ ಸಂಯೋಜಕ ಉಷಾ ಸಂಪತ್ ಕುಮಾರ್, ಸ್ನಾತಕ ವಿಭಾಗದ ವಿಶೇಷಾಧಿಕಾರಿ ಪ್ರೊ. ಡಿ.ಎಂ. ಮದರಿ, ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದ ಮುಖ್ಯಸ್ಥ ಪ್ರೊ. ಓಂಕಾರ್ ಕಾಕಡೆ, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು, ಮುಖ್ಯಸ್ಥರು, ಸಂಶೋಧನಾ ವಿದ್ಯಾರ್ಥಿನಿಯರು, ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿನಿಯರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ. ಲಕ್ಷ್ಮೀದೇವಿ ವೈ. ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ. ಭಾಗ್ಯಶ್ರೀ ದೊಡ್ಡಮನಿ ಹಾಗೂ ಡಾ. ಸರೋಜಾ ಸಂತೆ ಅತಿಥಿಗಳನ್ನು ಪರಿಚಯಿಸಿದರು. ಪ್ರದರ್ಶನ ಕಲೆಗಳ ವಿಭಾಗದ ವಿದ್ಯಾರ್ಥಿನಿ ಪ್ರಾರ್ಥಿಸಿದರು. ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸಂದೀಪ್ ನಿರೂಪಿಸಿ ವಂದಿಸಿದರು.