ಹಗರಿಬೊಮ್ಮನಹಳ್ಳಿ

ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ಮಹಿಳೆ ಸಾವು: ಪ್ರತಿಭಟನೆ

ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ಮಹಿಳೆ ಸಾವು: ಪ್ರತಿಭಟನೆ

ಹಗರಿಬೊಮ್ಮನಹಳ್ಳಿ 01: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೈಕೈ ಸುಸ್ತು ಎಂದು ಚಿಕಿತ್ಸೆಗೆ ಬಂದ ಮಹಿಳೆಗೆ ಸರಿಯಾಗಿ ಚಿಕಿತ್ಸೆ ನೀಡದೆ ಚುಚ್ಚು ಮದ್ದು ನೀಡಿದ ಕಾರಣ ಸಾವನ್ನಪ್ಪಿದ್ದಾರೆಂದು ಕುಟುಂಬದವರು ಶವವನ್ನು ಆಸ್ಪತ್ರೆ ಮುಂದೆ ಇಟ್ಟು ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಶುಕ್ರವಾರ ನಡೆದಿದೆ. 

ಘಟನೆಯ ವಿವರ: ನಗರದ ಕುರುದಗಡ್ಡಿ ಏರಿಯಾದ ನಿವಾಸಿ ಶಾಂತಮ್ಮ ಎಂಬ ಮಹಿಳೆಯನ್ನು ಮೈಕೈ ಸುಸ್ತು ಎಂದು ಅವರ ಪತಿ ಬೆಳಗ್ಗೆ 11ರ ಸುಮಾರಿಗೆ ಆಸ್ಪತ್ರೆಗೆ ಕರೆತಂದಿದ್ದು ಸಿಬ್ಬಂದಿಯ ಚಿಕಿತ್ಸೆ ನೀಡಿ ರಕ್ತ ಪರೀಕ್ಷೆ ಮಾಡಿಸುವಂತೆ ತಿಳಿಸಿ ಚುಚ್ಚು ಮದ್ದು ನೀಡಿದ್ದು 5ರಿಂದ10 ನಿಮಿಷದಲ್ಲಿ ರೋಗಿಯು ತನ್ನ ನಾಲಿಗೆಯನ್ನು ಕಡಿದುಕೊಂಡು ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಮೃತ ಮಹಿಳೆಯ ಮಗ ಶ್ರೀಕಾಂತ ಪತ್ರಿಕೆಗೆ ತಿಳಿಸಿದ್ದಾರೆ. 

ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ದೊರೆಯದ ಕಾರಣ ಇಂತಹ ಘಟನೆ ಜರುಗಿದೆ ಎಂದು ಮೃತ ಮಹಿಳೆಯ ಪೋಷಕರು ವೈದ್ಯರ ಹಾಗೂ ಸಿಬ್ಬಂದಿಗಳ ಮೇಲೆ ಆಕ್ರೋಶ ವ್ಯೆಕ್ತಪಡಿಸಿದರು, ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಪಿಎಸೈ ಮಾರುತಿ ಭೇಟಿ ನೀಡಿದರು. ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ. 


ಸುದ್ದಿ ಓದಿ