ಆತುರವೇಕೆ ಓ ಮನವೇ?
ಎಷ್ಟೊಂದು ಅನಾಹುತಗಳು ವಿಪರ್ಯಾಸಗಳು, ಈ ಜಗದ ತುಂಬೆಲ್ಲ ಅರ್ಥವಿರದ ಭಾಷೆಗಳು ಮಾತು ಸತ್ತ ಮೌನಗಳು ದುಗುಡ ತುಂಬಿದ ಮನಸ್ಸುಗಳ ನಡುವೆ ಪ್ರೀತಿ ಅರಸಿ ಹೊರಟ ಮನಸ್ಸುಗಳಿಗೆ ಸಿಗುವುದು ಮಾತ್ರ ದುಃಖದ ಕಡಲು. ಈ ದುಃಖದ ಸಾಗರವನ್ನು ದಾಟುವ ಮೊದಲೇ ಹತಾಶೆಗೊಂಡು ಮಧ್ಯದಲ್ಲಿಯೇ ಪಯಣ ಮುಗಿಸುವ ಮನಗಳಿಗೆ ಕೊಂಚ ಆತ್ಮಾವಲೋಕನ ಮಾಡಿಕೊಳ್ಳುವ ಅವಶ್ಯಕತೆ ಖಂಡಿತ ಇದೆ.
ಬರೆದಿಟ್ಟಂತೆ ಬದುಕಲು ಯಾವ ಮನುಷ್ಯನ ಕೈಯಿಂದಲೂ ಸಾಧ್ಯವಾಗದು ಹಾಗಂತ ಇಟ್ಟಂತೆ ಇರಬೇಕು ಎಂದು ಹೇಳುವ ಬದಲು ನಾವು ಅಂದುಕೊಂಡಂತೆ ಬದುಕಲು ಪ್ರಯತ್ನಿಸುವುದರಲ್ಲಿ ಅರ್ಥವಿದೆ. ಅರ್ಥವಿರದ ಕವಲುದಾರಿಯಲ್ಲಿ ಈ ಜಗತ್ತೆ ಒಂದು ನಾಟಕ ರಂಗದಂತೆ ಭಾಸವಾಗಿ ಆಟ ಸಾಗುತ್ತಿರುವಾಗ ಬಾಳಿಗೊಂದು ಅರ್ಥ ಗುರಿ ಸದ್ಭಾವನೆಗಳ ಸ್ಪಷ್ಟ ಚಿಂತನೆ ಇರಿಸಿ ನಡೆಯಲು ಹಲವು ದಾರಿಗಳು ನಮ್ಮ ಕಣ್ಣಿನ ಮುಂದೆಯೇ ಇರುತ್ತವೆ. ನಮ್ಮ ಪ್ರತಿಯೊಂದು ನಡೆ-ನುಡಿಯ ನಡುವೆ ಒಂದು ಕಾರ್ಯಕಾರಣೀ ಸಂಬಂಧ ಏರ್ಪಟಟಿರುತ್ತದೆ. ಸಂಬಂಧದ ನಡುವೆ ಇರುವ ಸೂಕ್ಷ್ಮಾತಿಸೂಕ್ಷ್ಮ ಎಳೆಯನ್ನು ಅವಲೋಕಿಸಿದಾಗ ಇಂದಿನ ದಿನಮಾನಗಳಲ್ಲಿ ಆತ್ಮವನ್ನು ಹತ್ಯೆ ಮಾಡಿಕೊಳ್ಳುತ್ತಿರುವ ಮನುಷ್ಯರ ಚಿಂತೆ ಸಮಸ್ಯೆಗಳಿಗೆ ಉತ್ತಮವಾದ ಮಾರ್ಗೋಪಾಯ ದೊರೆಯುತ್ತದೆ.
ಪ್ರಪಂಚವೆ ತಲೆಯಮೇಲೆ ಬಿದ್ದವರ ತರ ಆಡುವವರನ್ನು ಕಂಡಿದ್ದೇನೆ ನಾನು.ಇಲ್ಲಸಲ್ಲದ ವಿಚಾರಗಳಿಗೆ ಮೈಕೈ ಪರಚಿಕೊಂಡು ದುಃಖ ಪಡುವವರಿಗೇನು ಕಡಿಮೆ ಇಲ್ಲ ಸಮಸ್ಯೆಗಳೆ ಇಲ್ಲದಿರುವಾಗ ಸಮಸ್ಯೆಗಳನ್ನು ಬರಮಾಡಿಕೊಂಡು ಪೇಚಾಡುವ ಮೂರ್ಖರು ಸಹ ಇದ್ದಾರೆ ನಮ್ಮ ನಡುವೆ.
ನೋವು ದುಃಖ ದುಮ್ಮಾನಗಳಿಗೆ ಕತ್ತಲೆಯ ಬದುಕಿಗೆ ಸಣ್ಣದಾದ ಒಂದು ಬೆಳಕಿನ ಕಿಂಡಿಯನ್ನು ಭಗವಂತ ಖಂಡಿತವಾಗಿ ಇಟ್ಟಿರುತ್ತಾನೆ. ಹುಡುಕುವ ತಾಳ್ಮೆ ಮನುಷ್ಯನಿರಬೇಕಷ್ಟೆ.ಸಮಸ್ಯೆಗಳಿಗೆ ಸಾವೇ ಪರಿಹಾರವಾದರೆ ನಮ್ಮ ಪೂರ್ವಜರು ಅದೆಷ್ಟು ನೋವುಗಳೂ ಇದ್ದರೂ ಕೂಡ ಅಂಜದೆ ಆಲದ ಮರದಂತೆ ನೆರಳಾಗಿ ಇದ್ದರು.ಅವರ ದೃಷ್ಟಿಕೋನ ಸರಿಯಿತ್ತು.ಅವರು ಸಮಸ್ಯೆಗಳನ್ನು ಎದುರಿಸುವ ರೀತಿ ಮತ್ತು ಅವರ ಮನೋಬಲ ತುಂಬಾ ಆಕರ್ಷಕ ಅತ್ಯುತ್ತಮವಾಗಿತ್ತು. ಸಮಸ್ಯೆಗಳನ್ನು ನಾವು ನೋಡುವ ದೃಷ್ಟಿಕೋನ ಬದಲಾಯಿಸಿಕೊಳ್ಳುವ ಮೂಲಕ ಸಮಸ್ಯೆಯ ಕೇಂದ್ರಬಿಂದುವಿನತ್ತ ನಮ್ಮ ಚಿತ್ತವನ್ನು ಹರಿಸಬೇಕು. ಇತ್ತೀಚಿನ ಸಮಾಜದಲ್ಲಿ ಚಿಂದಿ ಆಯುವವರಿಂದ ಹಿಡಿದು ಪೇಪರ್ ಮಾರುತ ಇತರರ ಮನೆಯ ಕಸ ಮುಸುರೆ ತೊಳೆದು ಜೀವನ ಜೀವಿಸುವ ಜನರಿಗೆ ಬದುಕುವ ಕಲೆ ಗೊತ್ತು.ಆದರೆ ಕೆಲವು ಹತಾಶ ಮನಸ್ಸುಗಳಿಗೆ ಧೈರ್ಯವಾಗಿ ಕಷ್ಟವನ್ನು ಎದುರಿಸಿ ನಿಂತು ಹೋರಾಡಿ ಜೈಸಬೇಕು ಎಂಬ ಮನೋಭಾವನೆ ಸತ್ತು ಹೋಗಿದೆ.ಕಾರಣ ಅತಿಯಾಸೆ ಹಾಗೂ ನಮ್ಮಲ್ಲಿ ಆತ್ಮವಿಶ್ವಾಸದ ಕೊರತೆ ಒಂದು ಗುಡ್ಡಕ್ಕಿಂತ ಇನ್ನೊಂದು ಬೆಟ್ಟ ದೊಡ್ಡದಿದೆ ಎಂಬ ಕಲ್ಪನೆ ನಮ್ಮಲ್ಲಿ ಇಲ್ಲದಿರುವುದು. ನಮ್ಮದೇ ಸಮಸ್ಯೆಗಳು ಅಧಿಕ ಎಂಬ ಮನೋಭಾವನೆ ಬೆಳೆಸಿಕೊಂಡು ವೃಥಾ ಚಿಂತಿಸಿ ಕೊರಗುವುದು. ನಮ್ಮ ಕೊರಗುವಿಕೆ ಕ್ರಮೇಣ ಮನೋರೋಗವಾಗಿ ಮಾರು್ಡ ಹೊಂದಿ ಮನಸಿನ ಮೇಲೆ ಪರಿಣಾಮ ಬೀರುತ್ತದೆ. ಸಣ್ಣಪುಟ್ಟ ಕಷ್ಟ ಸಮಸ್ಯೆ ಖಾಯಿಲೆ ಬಂದಂತವರು ಸಹ ತಮ್ಮ ಜೀವನವನ್ನೇ ಕೊನೆಗಾಣಿಸಿಕೊಳ್ಳುತ್ತಿರುವುದು ದುರಂತ. ಸಮಾಜದಲ್ಲಿ ಎಲ್ಲಾ ತರದ ಜನರು ಇದ್ದಾರೆ ಕೆಲವರು ಅದೆಷ್ಟೇ ಕಷ್ಟ ಬಂದರೂ “ಧೈರ್ಯಂ ಸರ್ವತ್ರ ಸಾಧನಂ” ಎಂಬ ದಿವ್ಯ ಮಂತ್ರದೊಂದಿಗೆ ಬದುಕಿಗೆ ಆತ್ಮವಿಶ್ವಾಸ ತುಂಬುತ್ತಾರೆ. ಇನ್ನು ಕೆಲವರು ಮನೆಯಲ್ಲಿ ಸ್ವಲ್ಪ ಯಾರಾದರೂ ಬೈದರು ಸಹ ತಮ್ಮ ಜೀವವನ್ನೇ ಕೊನೆಗಾಣಿಸಿಕೊಳ್ಳುತ್ತಾರೆ.
ನಮ್ಮ ಬಾಳನ್ನು ಹತ್ಯೆ ಮಾಡಿಕೊಳ್ಳುವುದೇ ಜೀವನದ ಸಾಧನೆಯಾದರೆ ಇದ್ದು ಜಯಸಿ ಸಾಧಿಸುವುದರ ಹಿಂದಿನ ಅರ್ಥ ಧ್ಯೇಯ ಏನು ಎಂಬ ಪ್ರಶ್ನೆಯನ್ನು ನಾವು ಹಾಕಿಕೊಳ್ಳಬೇಕಾಗುತ್ತದೆ. ಅಂತಹ ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಎಲ್ಲಿತನಕ ಮೂಡುವುದಿಲ್ಲವೊ ಅಲ್ಲಿಯತನಕ ಸೋಲು ನೋವು ಶತಸಿದ್ಧ. ನೋವನ್ನು ಸೋಲನ್ನು ಮೆಟ್ಟಿಲಾಗಿ ಇರಿಸಿ ಹತ್ತುವ ವ್ಯಕ್ತಿಗಳು ಜೀವನದಲ್ಲಿ ಸುಂದರತೆ ಮತ್ತು ಸಮೃದ್ಧತೆಯನ್ನು ಕಾಣುತ್ತಾರೆ. ಸಮಚಿತ್ತ ಕಠಿಣ ಶ್ರಮ ನಮ್ಮನ್ನು ಗೆಲುವಿನ ದಿಗಂತದತ್ತ ಕೊಂಡೊಯ್ಯಬಲ್ಲದು ಎಂಬುದನ್ನು ನಾವು ಬಹಳ ಸಹನೆಯಿಂದ ಜರೂರಾಗಿ ತಿಳಿಯಬೇಕಾಗಿದೆ. ನೂರು ಸರಿ ಸೋತವರಿಗೆ ನೂರೊಂದನೇ ಸರಿ ತನ್ನ ಸರದಿಯನ್ನು ಪಣಕ್ಕಿಟ್ಟು ಮುನ್ನುಗ್ಗುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ.
ಇಂದು ಜಗತ್ತು ಬೆರಗಾಗಿ ನೋಡಿದ ಅಬ್ದುಲ್ ಕಲಾಂ ಅಂತಹ ಅದೆಷ್ಟೋ ಮಹನೀಯರು ಕೂಡ ಸಾಮಾನ್ಯ ಕುಟುಂಬದಲ್ಲಿ ಜನಿಸಿ ನೋವು ಹತಾಶೆ ಕಷ್ಟ-ಕೋಟಲೆ ಅವಮಾನಗಳನ್ನು ಕಂಡು ಎಲ್ಲವನ್ನು ಮೆಟ್ಟಿ ನಿಂತು ತಮ್ಮ ಕಾರ್ಯ ಕ್ಷೇತ್ರವನ್ನು ವಿಸ್ತರಿಸಿಕೊಂಡಿರುತ್ತಾರೆ. ಆಗ ಅವರು ಹತಾಶರಾಗಿ ಕೈಚೆಲ್ಲಿ ಕೂತಿದ್ದರೆ ಇಂದೆಲ್ಲೆ ಈ ಸಮಾಜದ ಪುಟದ ನೆನಪಿನಾಳದಲ್ಲಿ ತಮ್ಮ ತಮ್ಮ ಸಾಧನೆಯನ್ನು ಅಚ್ಚೊತ್ತಲು ಸಾಧ್ಯವಾಗುತ್ತಿತ್ತು.? ಇಂತಹ ಬಹಳಷ್ಟು ಮಹನೀಯರು ನಮ್ಮ ಕಣ್ಣ ಮುಂದೆ ಹಾದು ಹೋಗುತ್ತಾರೆ. “ಸಾಧನೆಗೆ ಸಾವಿಲ್ಲ” ಎಂಬ ಬೀಜ ಮಂತ್ರವನ್ನು ಮನಸ್ಸಿನಲ್ಲಿ ಬಲವಾಗಿ ಹಿಡಿದುಕೊಂಡರೆ ನಮ್ಮ ಆತ್ಮವನ್ನು ಹತ್ಯೆ ಮಾಡಿಕೊಳ್ಳತಕ್ಕಂತಹ ಕ್ರೂರತ್ವಕ್ಕೆ ನಾವು ಇಳಿಯುತ್ತಿರಲಿಲ್ಲ. ಇತರರನ್ನು ಕೊಲೆ ಮಾಡುವುದು ಒಂದೇ ಹಾಗೂ ನಮ್ಮನ್ನು ನಾವು ಸಾಯಿಸಿಕೊಳ್ಳುವುದು ಒಂದೇ. ಅಲ್ಲಿ ಬೇರೆ ಜೀವದ ಕೊಲೆಯಾದರೆ ಇಲ್ಲಿ ನಮ್ಮದೇ ಜೀವ ಅಸುನೀಗಿರುತ್ತದೆ. ಆದರೆ ಜೀವಾತ್ಮ ಮಾತ್ರ ಒಂದೇ ತೆರನಾಗಿದ್ದು ಅಲ್ಲವೇ?. ನಮಗೆ ನಾವೇ ಹಿಂಸೆ ಮಾಡಿಕೊಳ್ಳುವುದು ಒಂದು ದೃಷ್ಟಿಯಲ್ಲಿ ಅತ್ಯಂತ ಕ್ರೂರವಾದ ಕ್ರಮ.
ನಾಳೆಗಳ ಕನಸುಗಳನ್ನು ಬಲವಾಗಿ ಮನದಲ್ಲಿ ಮೂಡಿಸಿ ಕೊಂಡಾಗಷ್ಟೇ ಮನದ ಸ್ಮೃತಿಪಟಲದಲ್ಲಿ ಹೊಂಗನಸು ಮೂಡಲು ಸಾಧ್ಯ. ಕೋಪದ ಮನಸ್ಸಿಗೆ ನಮ್ಮ ಬುದ್ಧಿಯನ್ನು ನೀಡಿದರೆ ನಮಗೆ ಸಿಗುವ ಲಾಭವಾದರೂ ಏನು?. ಅದೇ ಸಮಾಧಾನಚಿತ್ತದಿಂದ ಬುದ್ಧಿಯನ್ನು ಒರೆಗೆ ಹಚ್ಚಿದಾಗ ಬೆಳೆಯುವ ಸಿರಿಗಳು ಕಮರುವುದು ನಿಲ್ಲತ್ತವೆ. “ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ” ಎಂಬ ಆತ್ಮವಿಶ್ವಾಸ ಛಲ ತಾಳ್ಮೆ ಮನುಷ್ಯನನ್ನು ಸದೃಢರನ್ನಾಗಿ ಯಶಸ್ವಿ ವ್ಯಕ್ತಿಗಳನ್ನಾಗಿ ಮಾಡುತ್ತದೆ. “ತಾಳಿದವನು ಬಾಳಿಯಾನು” ಎಂಬ ಮೂಲಮಂತ್ರ ಸದಾ ನಮ್ಮ ಜೊತೆಗಿರಲಿ.
- ವಾಣಿ ಭಂಡಾರಿ
ಶಿವಮೊಗ್ಗ
- * * * -