ಬೇರೆಯವರ ತಟ್ಟೆಯಲ್ಲೇ ತುಪ್ಪ ಜಾಸ್ತಿ ಕಾಣುವುದೇಕೆ?
"ಸಾಮಾನ್ಯವಾಗಿ ನಮಗೆ ನಮ್ಮ ತಟ್ಟೆಯಲ್ಲಿರುವುದಕ್ಕಿಂತ ಬೇರೆಯವರ ತಟ್ಟೆಯಲ್ಲಿ ಜಾಸ್ತಿ ತುಪ್ಪ ಕಾಣುತ್ತದೆ. ಯಾರದೋ ಆತ್ಮೀಯರ ಮನೆಯ ಬಿನ್ನಾಯಕ್ಕೆ (ವಿಶೇಷ ಶುಭಕಾರ್ಯದ ಊ) ಹೋದಾಗ ಮಗ್ಗುಲಲ್ಲಿ ಕೂತವರ ತಟ್ಟೆ ನೋಡಿ ತಮಗೂ ಹಾಗೆ ಅನಿಸಿರುತ್ತದೆ. ನಮ್ಮ ತಟ್ಟೆಯಲ್ಲಿಯೂ ಅದೇ ಪ್ರಮಾಣದ ತುಪ್ಪ ಇದ್ದರೂ ಸಹಿತ ನಮಗೆ ಅದು ಕಡಿಮೆಯೇ ಎಂದೆಣಿಸುವುದು. ಇಂತಹ ಗುಣ ಎಲ್ಲ ಮನುಷ್ಯರಲ್ಲೂ ಸಾಮಾನ್ಯವಾಗಿ ಕಾಣುವುದು.ಸ್ವಭಾವಕ್ಕೆ ಓಷಧಿ ಉಂಟೇ? ಖಂಡಿತ ಇಲ್ಲ. ನಮ್ಮ ಮನೆಯಲ್ಲಿ ಕಾರು ಇದ್ದರೂ, ನೆರೆಮನೆಯವರ ಹತ್ತಿರ ಇರುವ ಹೊಸ ಬೈಕ್ ನಮ್ಮ ಕಣ್ಣು ಕುಕ್ಕುವುದು. ನೆರೆಮನೆಯವರು ತಂದ ಆ ಬೈಕು ನನ್ನ ಕಾರಿಗಿಂತ ನಿಜಕ್ಕೂ ಮೌಲ್ಯಯುತವೇ? ನಮ್ಮ ಮನೆಯಲ್ಲಿರುವ ಆ ಸಿಟಿ ಹೋಂಡಾ ಕಾರು, ನೆರೆಮನೆಯವರ ಆ ಬೈಕಿಗಿಂತ ಎಷ್ಟೋ ಪಾಲು ಕಾಸ್ಟ್ಲಿ ಇದ್ದರೂ ಆ ಕಾರ್ ಮೇಲೆ ಅದೇಕೋ ನಮಗೆ ಬೇಸರ. ಒಂದೇ ವಸ್ತುವನ್ನು ಬಹಳ ದಿನ ಪದೇ ಪದೇ ಅದನ್ನೇ ಉಪಯೋಗಿಸಿರುವುದರಿಂದ ಅದು ಹಳತು ಎಂಬ ಭಾವ ಬಂದಿರುತ್ತದೆ. ಮೇಲಾಗಿ ನಮ್ಮ ಮನಸ್ಸು ಸದಾಕಾಲ ಹೊಸತು ಮತ್ತು ಬದಲಾವಣೆಗೆ ತೀವ್ರಗತಿಯಲ್ಲಿ ಸ್ಪಂದಿಸುವುದರಿಂದ ಹಾಗೆನಿಸುವುದರಲ್ಲಿ ತಪ್ಪೇನೂ ಇಲ್ಲ. ನಾನು ತೊಟ್ಟ ಸೀರೆ ರೇಶಿಮೆಯದಾಗಿದ್ದರೂ, ಬೇರೆಯವರು ತೊಟ್ಟ ಕಡಿಮೆ ಬೆಲೆಯ ಕಾಟನ್ ಸೀರೆ ನಮ್ಮನ್ನು ಆಕರ್ಷಿಸುವುದು. ನಾನುಟ್ಟ ರೇಶಿಮೆ ಸೀರೆ ನೆರೆಮನೆಯಾಕೆಯ ಕಾಟನ್ ಸೀರೆಗಿಂತ ಕಡಿಮೆಯೇ? ಉಟ್ಟ ರೇಶಿಮೆಯ ಸೀರೆಯ ಕಥೆಯೂ ಅಷ್ಟೇ. ಮದುವೆಯಾದ ಹೊಸತರಲ್ಲಿ ಪ್ರೀತಿಯಿಂದ ಗಂಡ ಕೊಡಿಸಿದ ಸೀರೆ ಅದು. ಆಗಲೇ ಹತ್ತಾರು ವರ್ಷ ಬಹುತೇಕ ಎಲ್ಲ ಮಾದರಿಯ ಸಭೆ ಸಮಾರಂಭ, ಶುಭಕಾರ್ಯಗಳಲ್ಲಿ ಅದನ್ನು ಉಟ್ಟುಕೊಂಡಿರುತ್ತೀರಿ. ತಮ್ಮ ಬಂಧು ಬಳಗ, ಮಿತ್ರ ವರ್ಗದವರಿಗೆ ಆ ರೇಶಿಮೆ ಸೀರೆ ಅತ್ಯಂತ ಪರಿಚಿತವಾಗಿರುತ್ತದೆ. ಹಾಗಾಗಿ ಅದು ಎಷ್ಟೇ ಕಾಸ್ಟ್ಲಿ ಆಗಿದ್ದರೂ ಸಹಜವಾಗಿ ಅದು ಬೇಡ ಎಂದೆಣಿಸುತ್ತದೆ. ಇದೇ ಕಾರಣದಿಂದ ನೆರೆಮನೆಯಾಕೆಯ ಹೊಸ ಮಾದರಿಯ ಚೀಪ್ ಆ್ಯಂಡ್ ಬೆಸ್ಟ ಕಾಟನ್ ಸೀರೆ ಮೇಲೆ ನಮ್ಮ ಕಣ್ಣು ಬೀಳುತ್ತದೆ.
ನನ್ನ ಕೈಯಲ್ಲಿರುವ ಕಾಸ್ಟ್ಲಿ ಆ್ಯಪಲ್ ಮೊಬೈಲ್ಗಿಂತ ಅನ್ಯರ ಕೈಯಲ್ಲಿರುವ 2 ಜಿಬಿ ರ್ಯಾಮ್ ನ ಹಳೆಯ ನೋಕಿಯಾ ಸೆಟ್ ಚೆಂದ ಕಾಣುತ್ತದೆ. ಅವರ 2 ಜಿಬಿ ರ್ಯಾಮ್ ನ ಓಲ್ಡ ನೋಕಿಯಾ ಸೆಟ್ ಗಿಂತ ನನ್ನ 8 ಜಿಬಿ 5 ಜಿ ಆ್ಯಪಲ್ ಮೊಬೈಲ್ ಶ್ರೇಷ್ಟವಲ್ಲವೇ?ಓದುಗರೇ ತಮ್ಮ ಹತ್ತಿರ ಎಷ್ಠೇ ಬೆಲೆಬಾಳುವ ಮೊಬೈಲ್ ಇರಲಿ, ಅದರ ಬಳಕೆ ಹಚ್ಚೆಂದರೆ ಎರಡರಿಂದ ಮೂರು ವರ್ಷ ಅಷ್ಟೇ. ಅದರಲ್ಲಿನ ಎಲ್ಲ ಸಾಪ್ಟವೇರ್ ನ್ನು ಆಪರೇಟ್ ಮಾಡಿರುತ್ತೀರಿ. ಎಲ್ಲವೂ ಮುಗಿದ ಮೇಲೆ ಇಷ್ಟೇನಾ ಅಂತ ಅನಿಸುವುದು ಸಹಜ. ಮೇಲಾಗಿ ಎಷ್ಟೆಷ್ಟು ಅಲ್ಟ್ರ ಟೆಕ್ನಾಲಾಜಿಯ ಮೊಬೈಲ್ ನಮ್ಮ ಕೈಗೆ ಬರುತ್ತದೆಯೋ ಅದು ನಮ್ಮನ್ನು ಅಷ್ಟು ವ್ಯಸನಿಯನ್ನಾಗಿ ಮಾಡಿಕೊಂಡು ಬಿಡುತ್ತದೆ.ಇದಕ್ಕಿಂತ ಹೆಚ್ಚಾಗಿ ಈ ವ್ಯಸನವು ಮನಸ್ಸಿನ ಮೇಲೆ ಇನ್ನಿಲ್ಲದ ಒತ್ತಡವನ್ನು ಹೇರುತ್ತದೆ.ಇದುವೇ ಮುಂದೆ ಜಿಗುಪ್ಸೆ ಸೃಷ್ಟಿಸುತ್ತದೆ.ಇದೆಲ್ಲದರ ಪರಿಣಾಮವೇ ನೋಕಿಯಾದ 2 ಜಿಬಿ ರ್ಯಾಮ್ ನ 4 ಜಿ ಇಷ್ಟವಾಗುತ್ತದೆ.
ನಾನಿರುವ ಶಿಕ್ಷಣ ಇಲಾಖೆಯ ಈ ವೃತ್ತಿಗಿಂತ, ಕಂದಾಯ ಇಲಾಖೆಯಲ್ಲಿ ಎಸ್ ಡಿ ಸಿ ಅಗಿದ್ರೆ ಚೆನ್ನಾಗಿರ್ತಿತ್ತು ಎಂದೆನಿಸುವುದು. ಯಾವುದೇ ಒತ್ತಡಗಳಿರದ, ಸದಾ ಚಟುವಟಿಕೆಯೊಂದಿಗೆ ಮುಕ್ತವಾಗಿ ಹೃದಯಗಳ ಜೊತೆ ಬೆರೆತುಕೊಳ್ಳಲು ಅವಕಾಶವಿರುವ ಆತ್ಮತೃಪ್ತಿಯ ಶಿಕ್ಷಕ ವೃತ್ತಿಗಿಂತ, ಜೀವವಿಲ್ಲದ ಮತ್ತು ಅರ್ಥವಿಲ್ಲದ ಆ ಪೈಲುಗಳ ಜೊತೆಗಿನ ಆ ಕಂದಾಯ ಇಲಾಖೆಯ ಎಸ.ಡಿ.ಸಿ. ಹುದ್ದೆಯೇ ಶ್ರೇಷ್ಟವೇ ?ನಮ್ಮ ಮಡದಿಗೆ ಐಶ್ವರ್ಯಾ ರೈ ನನ್ನು ಮೀರಿಸುವ ಚೆಲುವಿಕೆ ಇದ್ದರೂ, ಇತರರ ಮಡದಿಯ ಮೇಲೆ ನಮ್ಮ ಮೋಹ ಹೆಚ್ಚಾಗಿರುತ್ತದೆ. ಅವಳು ನನ್ನವಳಾಗಿದ್ದರೆ ಎಷ್ಟು ಚೆನ್ನಾಗಿರ್ತಿತ್ತು ಅಂತ ಗಂಡಂದಿರಿಗೆ ಎನಿಸಿದರೆ, ಅವನು ಎಷ್ಟು ಸ್ಮಾರ್ಟ ಮತ್ತು ಸಾಪ್ಟ ಇದಾನಲ್ಲಾ ಅವನಂತ ಬಾಳಸಂಗಾತಿ ನನಗೆ ಸಿಕ್ಕಿದ್ದರೆ ಬಂಗಾರದಂತ ಜೀವನ ನನ್ನದಾಗಿರುತ್ತಿತ್ತು ಎಂದು ಹೆಂಡತಿಯರಿಗೂ ಅನಿಸಿರುತ್ತದೆ. ನಮ್ಮ ಮನೆಯಲ್ಲಿ ಇರುವಂತೆ ಇತರರ ಮನೆಯಲ್ಲೂ ಗಂಡ ಹೆಂಡಿರಲ್ಲಿ ಏನೇನೋ ಗುದುಮುರಿಗೆಗಳು ಇದ್ದೇ ಇರುತ್ತವೆ.ಅವಳನ್ನು ಕಂಡರೆ ಅವನಿಗೆ ಆಗಲ್ಲ, ಅವನನ್ನು ಕಂಡರೆ ಅವಳಿಗಾಗಲ್ಲ. ಮಾತು ಮಾತಿಗೂ ಸಿಡುಕು, ಕೋಪ, ಸೆಟಗೊಂಡು ಮೂಲೆಯಲ್ಲಿ ಕೂಡ್ರುವುದು.ಇವು ಎಲ್ಲರ ಮನೆಯಲ್ಲೂ ಇದ್ದೇ ಇರುತ್ತವೆ. ಈ ಶೀತಲ ಸಮರ ಮದುವೆ ಆದ ಕೆಲ ದಿನಗಳ ನಂತರವಷ್ಟೇ ಆರಂಬವಾಗಿ ಕೊನೆಯವರೆಗೂ ನಿಲ್ಲುವುದಿಲ್ಲ. ಇದು ಎಲ್ಲರ ಮನೆಯಲ್ಲೂ ಅತೀ ಸಾಮಾನ್ಯ. ಆದರೆ ಇದ್ಯಾವುದು ನಮಗೆ ಗೊತ್ತೇ ಆಗಲ್ಲ. ಮನೆಯೊಳಗಿನ ಆ ಸಮರ ವಾತಾವರಣದಿಂದ ಹೊರಬರಲು ಒಂದು ಆತ್ಮೀಯ ಸಂಬಂಧವನ್ನು ಹೊರಗಡೆ ಕಟ್ಟಿಕೊಳ್ಳುತ್ತೇವೆ. ಇದು ತಪ್ಪೋ, ಸರಿಯೋ ಗೊತ್ತಿಲ್ಲ. ಆದರೆ ಇಬ್ಬರೂ ಅದೇ ಹಿನ್ನೆಲೆಯಿಂದ ಬಂದವರಾದುದರಿಂದ ಪರಸ್ಪರ ಒಪ್ಪಂದದ ಮೂಲಕ ಖುಷಿಯಾಗಿರಲು ಬಯಸುತ್ತೇವೆ. ಈ ಸಮಾನ ಹಿನ್ನೆಲೆಯ ಪರಿಣಾಮವು ಪರಸ್ಪರರನ್ನು ಆಕರ್ಷಿಸುತ್ತದೆ..ಹಾಗಾದರೆ ಅವರು ನಮ್ಮ ಮನೆಯವರಿಗಿಂತ ನಿಜಕ್ಕೂ ಒಳ್ಳೆಯವರಾ? ಮಾನವನ ಸ್ವಭಾವ ಹೀಗೇಕೆ ಎನ್ನುವುದು ಎಷ್ಟು ಯೋಚಿಸಿದರೂ ಅರ್ಥವಾಗುತ್ತಿಲ್ಲ.ಒಮ್ಮೆ ತಿಳಿದು ನೋಡಿ. ನಮ್ಮ ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಶಾಲೆಗೆ ಹೋದೆಯಾ ಬಂದೆಯಾ, ಏನು ಕಲಿತರೆ ಏನಾಗುವೆ ಎಂದು ನಮಗ್ಯಾರೂ ಹೇಳುವವರೇ ಇರಲಿಲ್ಲ. ಒಂದು ವೇಳೆ ನಾನು ಆ ಗೌಡನಷ್ಟು ಆಸ್ತಿ ಹೊಂದಿರುವ ಮನೆಯಲ್ಲಿ ಹುಟ್ಟಿದ್ದರೆ, ಮನೆಯಲ್ಲಿ ನಮಗೆ ಅವರಂತೆ ಯಾರಾದರೂ ಮಾರ್ಗದರ್ಶನ ಮಾಡುವವರಿದ್ದರೆ, ಏನೇನೋ ಸಾಧಿಸಬಹುದಿತ್ತು ಎಂದುಕೊಳ್ಳುತ್ತೇವೆ. ನಾವು ಬಯಸಿದಂತೆ ಎಲ್ಲವೂ ಸರಿಯಿರುವ ಯಾರಾದರೂ ಇದ್ದಾರೆಯೇ? ಅದು ಹೋಗಲಿ, ಅದನ್ನು ಆಚೆ ಸರಿಸಿಟ್ಟು ಒಂದು ಕ್ಷಣ ಯಾರಲ್ಲಿ ನೀವು ಅಂದುಕೊಂಡಿದ್ದು ಎಲ್ಲವೂ ಇದೆಯೆಂದು ಅಂದುಕೊಂಡಿರಲ್ಲವೇ ಅವರ ಸಮೀಪವರ್ತಿಯಾಗಿ ನಿಂತು ಸೂಕ್ಷ್ಮವಾಗಿ ಅವಲೋಕಿಸಿ. ಅವರಿಗೆ ಅದರ ಬಗ್ಗೆ ತೃಪ್ತಿ ಇದೆಯೇ? ಖಂಡಿತ ಇಲ್ಲ. ಅದು ಹಾಗಿರಬೇಕಿತ್ತು ಹೀಗಿರಬೇಕಿತ್ತು ಎಂದುಕೊಳ್ಳುವುದು ಒಂದು ತರಹದ ಗಂಭೀರ ಮನೋ ಕಾಯಿಲೆ ಅಷ್ಟೇ ಮನಮಾತು: ಇರುವುದೆಲ್ಲವ ಬಿಟ್ಟು ಇರದುದರ ಕಡೆಗೆ ತುಡಿಯುವುದೇ ಜೀವನ ಎಂಬ ಮಾತು ನಿಜ. ಆದರೆ ಇದಕ್ಕೆ ಷರತ್ತುಗಳು ಅನ್ವಯಿಸುತ್ತವೆ, ತುಡಿತ ರಚನಾತ್ಮಕವಾಗಿದ್ದರೆ ಇದಕ್ಕೆ ಯಾವುದೇ ಆಕ್ಷೇಪಣೆಗಳಿಲ್ಲ. ಒಂದುವೇಳೆ ತಮ್ಮ ಮನಸ್ಸಿನಲ್ಲಿ ವಿನಾಶಕಾರಿ ವಿಚಾರಗಳಿದ್ದರೆ ಆ ಮಾತು ಖಂಡಿತ ತಪ್ಪು. ಇದು ನನ್ನ ವೈಯಕ್ತಿಕ ವಿಚಾರವಷ್ಟೇ. ಇದನ್ನು ಒತ್ತಾಯಪೂರ್ವಕವಾಗಿ ನಾನು ಯಾರ ಮೇಲೆಯೂ ಹೇರಲಾರೆ. ಇದಕ್ಕೆ ತಾವೇನಂತಿರಿ?
- ಬಿ. ಎಸ್. ಪಾಟೀಲ
ಸಾಲಹಳ್ಳಿ
ಬೆಳಗಾವಿ ಜಿಲ್ಲೆ