ರೈತರ ನಾಲ್ಕು ದಶಕಗಳ ಕನಸು ನನಸು
ಸಚಿವೆ ಶಶಿಕಲಾ ಜೊಲ್ಲೆ ಹರ್ಷ: ಸುಮಾರು 3 ಸಾವಿರ ಎಕರೆ ಜಮೀನಿಗೆ ನೀರು ಪೂರೈಸುವ ಬೂಧಿಹಾಳ ಬಾಂದಾರಗೆ ಗಂಗಾಪೂಜೆ
ಚಿಕ್ಕೋಡಿ: ನಿಪ್ಪಾಣಿ ತಾಲೂಕಿನ ಬೂಧಿಹಾಳದಲ್ಲಿ ನಿರ್ಮಿಸಿರುವ ಬಾಂದಾರದಿಂದ ಸುಮಾರು 3 ಸಾವಿರ ಎಕರೆಗಳಸ್ಟು ಜಮೀನು ನೀರಾವರಿಯಾಗಿ ಒಳಪಡಲಿದೆ. ಸುಮಾರು ನಾಲ್ಕು ದಶಕಗಳಿಂದ ರೈತರ ಕನಸು ಇದೀಗ ನನಸಾಗಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹರ್ಷ ವ್ಯಕ್ತಪಡಿಸಿದರು.
ನಿಪ್ಪಾಣಿ ತಾಲೂಕಿನ ಬೂಧಿಹಾಳ ಗ್ರಾಮದಲ್ಲಿ ವೇದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ಯಾರೇಜಕ್ಕೆ ಗಂಗಾಪೂಜೆ ಸಲ್ಲಿಸಿ ಅವರು ಮಾತನಾಡಿದರು. ಕೋವಿಡ್-19 ಹತೋಟಿಗೆ ಬಂದ ನಂತರ ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಮತ್ತು ಕಣೇರಿಮಠದ ಕಾಡಸಿದ್ಧೇಶ್ವರ ಸ್ವಾಮೀಜಿಯವರನ್ನು ಕರೆಯಿಸಿ ಈ ಬಾಂದಾರದ ಉದ್ಘಾಟನೆ ನೆರವೇರಿಸಲಾಗುವುದು. ಕೋಡ್ನಿಯಲ್ಲಿ ನಿರ್ಮಿಸಿದ ಬಾಂದಾರದಲ್ಲಿ ಮೂರ್ನಾಲ್ಕು ದಿನಗಳಲ್ಲಿ ಗಂಗಾಪೂಜೆ ನೆರವೇರಿಸಲಾಗುವುದು. ಈ ಬಾಂದಾರಗಳ ಬ್ಯಾಕ್ ವಾಟರದಿಂದ ಕೇವಲ ನನ್ನ ತಾಲೂಕುಗಳ ರೈತರಿಗೆ ಅಷ್ಟೇ ಅಲ್ಲದೆ ಪಕ್ಕದ ಮಹಾರಾಷ್ಟ್ರದ ಕೆಲ ಗ್ರಾಮಗಳ ರೈತರಿಗೂ ನೆರವಾಗುತ್ತಿದೆ. ಈ ಕುರಿತು ಅಲ್ಲಿಯ ರೈತರು ಕರೆ ಮಾಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಸಂಜಯ ಸಂಕಪಾಳ ಮಾತನಾಡಿ ಬೇಸಿಗೆಕಾಲದಲ್ಲಿ ಕಾಳಮ್ಮವಾಡಿ ಡ್ಯಾಂದಿಂದ ನೀರು ಬಿಟ್ಟಾಗ ಕೇವಲ ಮೂರ್ನಾಲ್ಕು ದಿನಗಳವರೆಗೆ ಮಾತ್ರ ಇಲ್ಲಿ ನೀರು ಸಿಗುತ್ತಿದ್ದವು, ನಂತರ ನದಿ ಮತ್ತೆ ಖಾಲಿಯಾಗುತ್ತಿತ್ತು. ಆದರೆ ಒಂದು ದಿನ ಸಂಸದ ಅಣ್ಣಾಸಾಹೇಬ ಜೊಲ್ಲೆಯವರು ಖುದ್ದಾಗಿ ಬಂದು ಪರಿಶೀಲನೆ ನಡೆಸಿ ಗ್ರಾಮಸ್ಥರ, ರೈತರ ಅಳಲನ್ನು ಕೇಳಿ, ಅವರೊಂದಿಗೆ ಚರ್ಚಿಸಿ ಈ ಬಾಂದಾರ ನಿರ್ಮಾಣ ಮಾಡಿದ್ದರಿಂದ ಕೋಡ್ನಿ ಗ್ರಾಮದವರೆಗೆ ಬ್ಯಾಕ್ ವಾಟರ್ ಹೋಗಿ ಪರಿಸರದ ರೈತರಿಗೆ ಬಹಳ ಅನುಕೂಲವಾಗಿದೆ. ಅಲ್ಲದೆ ಬೂಧಿಹಾಳ, ಕೋಡ್ನಿ, ಯಮಗರ್ಣಿ ಹಾಗೂ ನಾಗನೂರ ಗ್ರಾಮಸ್ಥರಿಗೆ ವಿಶೇಷವಾಗಿ ರೈತರಿಗೆ ಈ ಬಾಂದಾರ ವರದಾನವಾಗಿ ಪರಿಣಮಿಸಲಿದೆ ಎಂದರು.
ಹಿರಿಯ ಗ್ರಾಮಸ್ಥ ಮಹಾದೇವ ಜಾಧವ, ರಾಜು ಕಾನಡೆ ಮಾತನಾಡಿದರು.
ಸಂಸದ ಅಣ್ಣಾಸಾಹೇಬ ಜೊಲ್ಲೆ ಬಾಗಿನ ಅರ್ಪಿಸಿದರು. ಸ್ಥಳೀಯ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಚೇರಮನ್ ಚಂದ್ರಕಾಂತ ಕೋಠಿವಾಲೆ, ಸಂಚಾಲಕ ಅವಿನಾಶ ಪಾಟೀಲ, ಸಮಿತ ಸಾಸನೆ, ಕಲ್ಲಪ್ಪಾ ನಾಯಿಕ, ಮ್ಹಾಳಪ್ಪಾ ಪಿಸೂತ್ರೆ, ಜೋತಿಪ್ರಸಾದ ಜೊಲ್ಲೆ, ಬಿಜೆಪಿ ನಗರ ಘಟಕ ಅಧ್ಯಕ್ಷ ಪ್ರಣವ ಮಾನವಿ, ಗ್ರಾಮೀಣ ಘಟಕ ಅಧ್ಯಕ್ಷ ಪವನ ಪಾಟೀಲ, ತಾಲ್ಲೂಕಾ ಪಂಚಾಯಿತಿ ಉಪಾಧ್ಯಕ್ಷೆ ಅನೀತಾ ದೇಸಾಯಿ, ಗ್ರಾ.ಪಂ. ಅಧ್ಯಕ್ಷೆ ರಾಜಶ್ರೀ ಪವಾರ, ತಾತ್ಯಾ ನಾಯಿಕ, ಪ್ರಕಾಶ ಶಿಂಧೆ, ವೈಭವ ರಾಂಗೋಳೆ, ನೀತಾ ಬಾಗಡೆ, ಮತ್ತಿತರರು ಉಪಸ್ಥಿತರಿದ್ದರು