ನೀರಾವರಿ ಕಾಲುವೆಯಿಂದ ರೈತರ ಜಮೀನಿಗೆ ನೀರು
ಸಮಸ್ಯೆ ತಿಳಿದ ಅರ್ಧಗಂಟೆಯಲ್ಲಿ ರೈತರ ನೆರವಿಗೆ ಬಂದ ಬೈಲಹೊಂಗಲ ತಹಶೀಲ್ದಾರ್ ಬಸವರಾಜ ನಾಗರಾಳ
ಬೈಲಹೊಂಗಲ 18: ತಿಗಡಿ ಹರಿನಾಲೆಯಿಂದ ರೈತರ ಜಮೀನುಗಳಿಗೆ ನೀರು ಹರಿದು ಹೋಗುವಂತೆ ಮಾಡಲು ಕಾಲುವೆ ನಿರ್ಮಿಸಿದರೂ ಸಮರ್ಕವಾಗಿ ನಿರ್ವಹಣೆ ಇಲ್ಲದೆ ತೊಂದರೆ ಅನುಭವಿಸುತ್ತಿರುವ ತಾಲೂಕಿನ ನೇಗಿನಹಾಳ ಮತ್ತು ಪಟ್ಟಿಹಾಳ ಕೆ.ಎಸ್ ಗ್ರಾಮದ ಸರಹದ್ದಿಯಲ್ಲಿ ನೀರಾವರಿ ಕಾಲುವೆ ಪ್ರದೇಶಕ್ಕೆ ಬೈಲಹೊಂಗಲ ತಹಶಿಲ್ದಾರ್ ಬಸವರಾಜ ನಾಗರಾಳ ಗುರುವಾರ ಭೇಟಿ ನೀಡಿ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚಿಸಿದರು.
ಸುಮಾರು 20ವರ್ಷಗಳ ಹಿಂದೆ ಕಾಲುವೆ ನಿರ್ಮಿಸಲಾಗಿದ್ದು, ಈ ಕಾಲುವೆಯಲ್ಲಿ ನೀರು ಹರಿದು ಬರುತ್ತಿಲ್ಲ. ನೇಗಿನಹಾಳ ಮತ್ತು ಪಟ್ಟಿಹಾಳ ಸರಹದ್ದಿನಲ್ಲಿ ಸುಮಾರು 15 ರಿಂದ 20 ಅಡಿ ಎತ್ತರದ ತಡೆಗೋಡೆಯಂತೆ ನಿರ್ಮಾಣವಾಗಿ ಕಾಲುವೆಯಿಂದ ಪ್ರತಿವರ್ಷ ಮಳೆಯಾದರೆ ರೈತರ ಜಮೀನಿನಲ್ಲಿ ನೀರು ನಿಂತು ಮಳೆಗಾಲದ ಬೆಳ ನಷ್ಟವಾಗುತ್ತಿದೆ. ಇದರಿಂದ ಕೆಲವು ರೈತರು ಸಾಲದ ಸುಳಿಯಲ್ಲಿ ಸಿಲುಕಿ ತಮ್ಮ ಜಮೀನು ಸಹ ಮಾರಾಟ ಮಾಡಿದ್ದಾರೆಂದು ರೈತರು ದೂರಿದರು.
ತಹಶಿಲ್ದಾರ್ ಬಸವರಾಜ ನಾಗರಾಳ ಮಾತನಾಡಿ, ರೈತರ ಜಮೀನು ಮತ್ತು ಕಾಲುವೆಯನ್ನು ಪರೀಶೀಲಿಸಿ ಅಧಿಕಾರಿಗಳಿಗೆ ಶೀಘ್ರವಾಗಿ ನೀರು ದಾಟಿಸಲು ಕ್ರಮ ಕೈಗೊಳ್ಳಲು ತಿಳಿಸಲಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಅನ್ನಕೊಡುವ ರೈತ ಸಂಕಷ್ಟ ಪಡಬಾರದು. ರೈತರ ಜಮೀನು ನೀರಲ್ಲಿ ಮುಳುಗುವುದರಿಂದ ಹೊಲದಲ್ಲಿ ಹಾಕಿದ ಬಂಡವಾಳ ನಷ್ಟವಾಗಿ ರೈತ ಸಾಲದ ಸುಳಿಯಲ್ಲಿ ಸಿಲಕುವಂತಾಗುತ್ತದೆ. ಯಾವುದೇ ಕಾರಣಕ್ಕೂ ತಡಮಾಡದೇ ಸಮಸ್ಯೆಗೆ ಪರಿಹಾರ ಒದಗಿಸಬೇಕೆಂದು ತಿಳಿಸಿದರು.
ನೀರಾವರಿ ಅಧಿಕಾರಿ ಯಲಿಗಾರ ಮಾತನಾಡಿ, ನಾಳೆಯಿಂದಲೇ ಜೆಸಿಬಿ ಯಂತ್ರದ ಮೂಲಕ ರೈತರ ಜಮೀನಿನಲ್ಲಿ ನಿಂತ ನೀರು ತಾತ್ಕಾಲಿಕವಾಗಿ ದಾಟಿಸುವ ಕಾರ್ಯಕೈಗೊಳ್ಳುತ್ತೇನೆ. ಮೇಲಾಧಿಕಾರಿಗಳ ಗಮನಕ್ಕೆ ತಂದು ಇಲ್ಲಿ ನೀರು ದಾಟುವಂತೆ ಬ್ರಿಡ್ಜ್ ನಿರ್ಮಾಣ ಮಾಡಿಸಿಕೊಡುತ್ತೇನೆ ಎಂದರು.
ಕಂದಾಯ ನೀರೀಕ್ಷಕ ರಮೇಶ ಕೊಲಕಾರ, ನೇಗಿನಹಾಳ, ಚಿಕ್ಕಬಾಗೇವಾಡಿ ಗ್ರಾಮ ಲೆಕ್ಕಾಧಿಕಾರಿಗಳಾದ ಛತ್ರಪತಿ ಕೆ.ಎನ್. ಸುನೀಲ ಚೌಹಾನ್, ಗ್ರಾಮಸ್ಥರಾದ ಪಕ್ಕೀರ್ಪ ತಳವಾರ, ಯಲ್ಲಪ್ಪ ತಳವಾರ, ದೇಮಪ್ಪ ಪಡದಪ್ಪನವರ, ಗಂಗಪ್ಪ ಹಾರುಗೊಪ್ಪ, ಶಿವಾನಂದ ಕುರಿ, ಯಲ್ಲಪ್ಪ ಗುಮ್ಮಗೋಳ, ವಿಠ್ಠಲ ಜುಂಜರಿ ಮತ್ತಿತರರು ಉಪಸ್ಥಿತರಿದ್ದರು.