ಚಿಕ್ಕೋಡಿ

ಜಾಗತಿಕ ಮಟ್ಟದಲ್ಲಿ ನೀರಿನ ಜಾಗೃತಿ ಅಗತ್ಯ: ದೇಸಾಯಿ

ಜಾಗತಿಕ ಮಟ್ಟದಲ್ಲಿ ನೀರಿನ ಜಾಗೃತಿ ಅಗತ್ಯ: ದೇಸಾಯಿ
ಬೇಡಕಿಹಾಳ ಗ್ರಾಮದಲ್ಲಿ ವಿಶ್ವಜಲ ನಿಮಿತ್ಯ ಜನಜಾಗೃತಿ ರ‍್ಯಾಲಿ ನಡೆಯಿತು.

ಮಾಂಜರಿ 26; ಇಂದು ಜಾಗತಿಕ ಮಟ್ಟದಲ್ಲಿ ನೀರಿನ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅಗತ್ಯವಿದೆ. ನಮ್ಮ ದೇಶದಲ್ಲಿ ಸಿಹಿ ನೀರಿನ ಸಂಗ್ರಹ ದೊಡ್ಡ ಪ್ರಮಾಣದಲ್ಲಿದೆ. ಇದರಿಂದಾಗಿ ನಮ್ಮ ದೇಶದ ಮೇಲೆ ಅನೇಕ ದೇಶಗಳು ಕಣ್ಣಿಟ್ಟಿವೆ. ನೀರಿನ ಕುರಿತು ಜಾಗೃತಿ ವಹಿಸದೆ ಇದ್ದಲ್ಲಿ ಮುಂದೊಂದು ದಿನ ನೀರಿಗಾಗಿ ಹೋರಾಟ ಮಾಡುವ ಪ್ರಸಂಗ ಬರಲಿದೆ ಎಂದು ಕೃಷಿ ಪಂಡಿತ ಸುರೇಶ ದೇಸಾಯಿ ಅಭಿಪ್ರಾಯ ವ್ಯಕ್ತ ಪಡಿಸಿದರು. 

ಅವರು ಸಮೀಪದ ಬೇಡಕಿಹಾಳ ಗ್ರಾಮದಲ್ಲಿ ಗ್ರಾಮ ಪಂಚಾಯತಿಯವರು ವಿಶ್ವಜಲ ನಿಮಿತ್ಯ ಏರ್ಪಡಿಸಿದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ನಮ್ಮ ದೇಶದಲ್ಲಿ ಮುಂಜಾಗೃತೆ ಕ್ರಮ ಕೈಗೊಳ್ಳದೆ ಇರುವುದರಿಂದ ನೀರು ಹೆಚ್ಚಿನ ಪ್ರಮಾಣದಲ್ಲಿ ವ್ಯರ್ಥವಾಗುತ್ತಿದೆ. ಮಳೆ ನೀರು ಕೊಯ್ಲು ಯೋಜನೆ ಹಾಗೂ ಇಂಗು ಗುಂಡಿಗಳನ್ನು ನಿರ್ಮಾಣ ಮಾಡಿ ಅಂತರ್ಜಲ ಮಟ್ಟ ಹೆಚ್ಚಳ ಮಾಡಬೇಕಿದೆ ಎಂದರು.

ಮುಖ್ಯ ಅತಿಥಿಗಳಾಗಿದ್ದ ಡಾ. ರಾಜೇಂದ್ರ ಜೋಶಿ ಮಾತನಾಡಿ ಜೀವನ ನಡೆಸಲು ನೀರು ಮಹತ್ವದ ಪಾತ್ರ ವಹಿಸುತ್ತದೆ. ಪ್ರತಿಯೊಬ್ಬರು ಶುದ್ಧ ಮತ್ತು ಸ್ವಚ್ಛ ನೀರಿನ ಬಳಕೆ ಮಾಡಬೇಕು. ನೀರಿನ ಮಹತ್ವ ತಿಳಿದುಕೊಂಡು ಸಮರ್ಪಕ ಬಳಕೆ ಮಾಡಬೇಕು. ಅನಾವಶ್ಯಕ ನೀರು ವ್ಯರ್ಥ ಮಾಡಬಾರದು ಎಂದು ಹೇಳಿದರು.  

ಗ್ರಾಪಂ ಅಧ್ಯಕ್ಷೆ ಮೇಘಾ ಮೋಹಿತೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಭಿವೃದ್ಧಿ ಅಧಿಕಾರಿ ಮಾರ್ಗದರ್ಶನ ಮಾಡಿದರು. ಅಶೋಕ ಝೇಂಡೆ, ಉಪಾಧ್ಯಕ್ಷ ಸ್ವಾತಿ ಕಾಂಬಳೆ, ಸದಸ್ಯರಾದ ವಿದ್ಯಾ ದೇಸಾಯಿ, ದತ್ತಕುಮಾರ ಪಾಟೀಲ, ಸಚೀನ ಪಾಟೀಲ, ಗಂಗಾಧರ ಸೂರ್ಯವಂಶಿ, ಕೃಷ್ಣಾ ಅರಗೆ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಮುಂತಾದವರಿದ್ದರು. ಪ್ರಾರಂಭದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ನೀರಿನ ಕುರಿತು ಜನಜಾಗೃತಿ ರ‍್ಯಾಲಿ ನಡೆಯಿತು. 

ಸುದ್ದಿ ಓದಿ