ಅಂತರರಾಷ್ಟ್ರೀಯ

ಟ್ರಂಪ್–ಝೆಲೆನ್ಸ್ಕಿ ನಡುವಿನ ಭಿನ್ನಾಭಿಪ್ರಾಯ ತೀವ್ರ: ಪೇಟ್ರಿಯಾಟ್ ಕ್ಷಿಪಣಿಗಳ ಸಂಗ್ರಹ ಖಾಲಿಯಾದ ಉಕ್ರೇನ್

ಟ್ರಂಪ್–ಝೆಲೆನ್ಸ್ಕಿ ನಡುವಿನ ಭಿನ್ನಾಭಿಪ್ರಾಯ ತೀವ್ರ: ಪೇಟ್ರಿಯಾಟ್ ಕ್ಷಿಪಣಿಗಳ ಸಂಗ್ರಹ ಖಾಲಿಯಾದ ಉಕ್ರೇನ್
ಕೀವ್/ವಾಷಿಂಗ್ಟನ್, ಅ. 16 : ಅಮೆರಿಕ ನಿರ್ಮಿತ ಪೇಟ್ರಿಯಾಟ್ ಪ್ರತಿಬಂಧಕ ಕ್ಷಿಪಣಿಗಳ ಸಂಗ್ರಹವನ್ನು ಉಕ್ರೇನ್ ಸಂಪೂರ್ಣವಾಗಿ ಖಾಲಿ ಮಾಡಿಕೊಂಡಿದ್ದು, ರಷ್ಯಾದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಗಳಿಗೆ ದೇಶವು ಮತ್ತಷ್ಟು ದುರ್ಬಲವಾಗುವ ಆತಂಕ ಎದುರಾಗಿದೆ. ಇದೇ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನಡುವಿನ ಉದ್ವಿಗ್ನತೆ ಹೆಚ್ಚುತ್ತಿದೆ ಎಂದು ಪರಿಸ್ಥಿತಿಯ ಅರಿವಿರುವ ಮೂಲವೊಂದು ತಿಳಿಸಿದೆ.

ಬುಧವಾರ ರಾತ್ರಿ ರಷ್ಯಾ ನಡೆಸಿದ ದಾಳಿಯ ಸಂದರ್ಭದಲ್ಲಿ ಕ್ಷಿಪಣಿಗಳ ಕೊರತೆ ಸ್ಪಷ್ಟವಾಗಿ ಗೋಚರಿಸಿದೆ. ಅಗತ್ಯ ಪ್ರತಿಬಂಧಕ ಕ್ಷಿಪಣಿಗಳಿಲ್ಲದ ಕಾರಣ ಒಳಬಂದ ಬಹುತೇಕ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಡೆಯಲು ಉಕ್ರೇನ್‌ಗೆ ಸಾಧ್ಯವಾಗಲಿಲ್ಲ ಎಂದು ಮೂಲವನ್ನು ಉಲ್ಲೇಖಿಸಿ ಸಿಎನ್‌ಎನ್ ವರದಿ ಮಾಡಿದೆ.

“ಕಳೆದ ದಾಳಿಯಲ್ಲಿ ಬಂದ ಬಹುತೇಕ ಎಲ್ಲಾ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪ್ರತಿಬಂಧಕ ಕ್ಷಿಪಣಿಗಳ ಕೊರತೆಯಿಂದಾಗಿ ತಡೆಯಲು ಸಾಧ್ಯವಾಗಲಿಲ್ಲ” ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಮೂಲ ತಿಳಿಸಿದೆ.

ರಷ್ಯಾದ ದಾಳಿಗಳು ಕೀವ್‌ನಲ್ಲಿರುವ ಮೂರು ವಿದ್ಯುತ್ ಸ್ಥಾವರಗಳಿಗೆ ಅಪ್ಪಳಿಸಿದ್ದು, ಖಾರ್ಕಿವ್‌ನ ಇಂಧನ ಮೂಲಸೌಕರ್ಯವನ್ನೂ ಗುರಿಯಾಗಿಸಿಕೊಂಡಿವೆ. ಉಕ್ರೇನ್ ರಾಜಧಾನಿ ಕೀವ್‌ನಲ್ಲಿ ಈ ದಾಳಿಗಳಿಂದ ನಾಲ್ವರು ಮೃತಪಟ್ಟಿದ್ದು, ಕನಿಷ್ಠ 25 ಮಂದಿ ಗಾಯಗೊಂಡಿದ್ದಾರೆ. ಚಳಿಗಾಲ ಸಮೀಪಿಸುತ್ತಿರುವ ಸಂದರ್ಭದಲ್ಲಿ ದೇಶದ ವಾಯು ರಕ್ಷಣಾ ವ್ಯವಸ್ಥೆ ಎದುರಿಸುತ್ತಿರುವ ಸವಾಲುಗಳನ್ನು ಈ ಘಟನೆ ಎತ್ತಿ ತೋರಿಸಿದೆ.

ರಷ್ಯಾದ ಇಸ್ಕಂದರ್-ಎಂ ಸೇರಿದಂತೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪ್ರತಿಬಂಧಿಸುವ ಸಾಮರ್ಥ್ಯ ಹೊಂದಿರುವ ಕೆಲವೇ ಆಯುಧ ವ್ಯವಸ್ಥೆಗಳಲ್ಲಿ ಪೇಟ್ರಿಯಾಟ್ ಕೂಡ ಒಂದಾಗಿದೆ. ಆದರೆ, ಈ ಕ್ಷಿಪಣಿಗಳು ದುಬಾರಿಯಾಗಿದ್ದು, ಜಾಗತಿಕ ಮಟ್ಟದಲ್ಲಿ ಪೂರೈಕೆಯೂ ಸೀಮಿತವಾಗಿದೆ. ಹೀಗಾಗಿ, ತನ್ನ ಸಂಗ್ರಹವನ್ನು ತ್ವರಿತವಾಗಿ ಮರುಪೂರಣಗೊಳಿಸುವುದು ಕೀವ್‌ಗೆ ಕಷ್ಟಕರವಾಗಿದೆ.

ಈ ಪ್ರತಿಬಂಧಕ ಕ್ಷಿಪಣಿಗಳನ್ನು ತಯಾರಿಸುವ ಅಮೆರಿಕದ ರಕ್ಷಣಾ ಉತ್ಪಾದನಾ ಸಂಸ್ಥೆ ಲಾಕ್‌ಹೀಡ್ ಮಾರ್ಟಿನ್ ಜುಲೈನಲ್ಲಿ ಕಡಿಮೆ ವೆಚ್ಚದ ಪಿಎಸಿ-3 ಎಸಿಇ ಮಾದರಿಯನ್ನು ಪರಿಚಯಿಸಿತ್ತು. ಇದರ ಆರಂಭಿಕ ಉತ್ಪಾದನೆ ಮುಂದಿನ 36 ತಿಂಗಳೊಳಗೆ ಪ್ರಾರಂಭವಾಗುವ ನಿರೀಕ್ಷೆಯಿದೆ. ಪ್ರಸ್ತುತ ಬಳಕೆಯಲ್ಲಿರುವ ಪಿಎಸಿ-3 ಪ್ರತಿಬಂಧಕ ಕ್ಷಿಪಣಿಯೊಂದಕ್ಕೆ ಸುಮಾರು 40 ಲಕ್ಷ ಅಮೆರಿಕನ್ ಡಾಲರ್ ವೆಚ್ಚವಾಗುತ್ತದೆ. ದೀರ್ಘಕಾಲದ ರಷ್ಯಾದ ದಾಳಿಗಳ ಸಂದರ್ಭದಲ್ಲಿ ವಾಯು ರಕ್ಷಣಾ ಕಾರ್ಯಾಚರಣೆಗಳನ್ನು ಮುಂದುವರಿಸುವುದು ಇದರಿಂದ ಇನ್ನಷ್ಟು ದುಬಾರಿಯಾಗಲಿದೆ.

ಚಳಿಗಾಲಕ್ಕೂ ಮುನ್ನ ಉಕ್ರೇನ್‌ನ ನಗರಗಳು ಮತ್ತು ಪ್ರಮುಖ ಮೂಲಸೌಕರ್ಯಗಳಿಗೆ ಹೆಚ್ಚಿನ ರಕ್ಷಣೆ ಒದಗಿಸಲು ಹೆಚ್ಚುವರಿ ವಾಯು ರಕ್ಷಣಾ ವ್ಯವಸ್ಥೆಗಳು ಹಾಗೂ ಮದ್ದುಗುಂಡುಗಳನ್ನು ಪೂರೈಸುವಂತೆ ಝೆಲೆನ್ಸ್ಕಿ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳನ್ನು ಪದೇಪದೇ ಒತ್ತಾಯಿಸಿದ್ದಾರೆ.

ಶುಕ್ರವಾರ ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸನ್ ಅವರೊಂದಿಗಿನ ಸಭೆಯಲ್ಲಿ ಮಾತನಾಡಿದ ಝೆಲೆನ್ಸ್ಕಿ, ರಷ್ಯಾದ ದಾಳಿಗಳ ವಿರುದ್ಧ ಉಕ್ರೇನ್‌ನ ರಕ್ಷಣೆಯನ್ನು ಬಲಪಡಿಸಲು ಹೆಚ್ಚಿನ ಪ್ರಯತ್ನಗಳ ಅಗತ್ಯವಿದೆ ಎಂದು ಹೇಳಿದರು.

“ವಾಯು ರಕ್ಷಣೆಯೇ ಅತ್ಯಂತ ಪ್ರಮುಖ ಆದ್ಯತೆಯಾಗಿದೆ. ಅದರಲ್ಲೂ ಮೊದಲನೆಯದಾಗಿ ಬ್ಯಾಲಿಸ್ಟಿಕ್ ಕ್ಷಿಪಣಿಗಳ ವಿರುದ್ಧದ ರಕ್ಷಣೆ ಮತ್ತು ಜೆಟ್ ಚಾಲಿತ ‘ಶಾಹೆದ್’ ಡ್ರೋನ್‌ಗಳನ್ನು ಪ್ರತಿಬಂಧಿಸಲು ನೆರವಾಗುವ ಎಲ್ಲ ವ್ಯವಸ್ಥೆಗಳು ಅಗತ್ಯವಾಗಿವೆ” ಎಂದು ಅವರು ಹೇಳಿದರು. ರಷ್ಯಾ ಬಳಸುತ್ತಿರುವ ಇರಾನ್ ವಿನ್ಯಾಸದ ದಾಳಿ ಡ್ರೋನ್‌ಗಳನ್ನು ಅವರು ಉಲ್ಲೇಖಿಸಿದರು.

ಕ್ಷಿಪಣಿಗಳ ಕೊರತೆಯು ಉಕ್ರೇನ್‌ನ ಮಿಲಿಟರಿ ಕಾರ್ಯತಂತ್ರ ಮತ್ತು ಯುದ್ಧವನ್ನು ಅಂತ್ಯಗೊಳಿಸುವ ಸಾಧ್ಯತೆಗಳ ಕುರಿತು ಟ್ರಂಪ್ ಹಾಗೂ ಝೆಲೆನ್ಸ್ಕಿ ನಡುವಿನ ಭಿನ್ನಾಭಿಪ್ರಾಯ ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲೇ ಎದುರಾಗಿದೆ.

ಗುರುವಾರ ನ್ಯೂಸ್‌ಮ್ಯಾಕ್ಸ್‌ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್, ಝೆಲೆನ್ಸ್ಕಿ ಅವರನ್ನು “ನಮ್ಮೊಂದಿಗೆ ವ್ಯವಹರಿಸಲು ಒಳ್ಳೆಯ ವ್ಯಕ್ತಿಯಲ್ಲ” ಎಂದು ಟೀಕಿಸಿದರು. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗಿಂತ ಉಕ್ರೇನ್ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸುವುದು ಹೆಚ್ಚು ಕಷ್ಟಕರವಾಗಿದೆ ಎಂದರು.

“ಪುಟಿನ್‌ಗಿಂತ ಝೆಲೆನ್ಸ್ಕಿ ಅವರೊಂದಿಗೆ ವ್ಯವಹರಿಸುವುದು ನನಗೆ ಹೆಚ್ಚು ಕಷ್ಟಕರವೆನಿಸುತ್ತದೆ” ಎಂದು ಟ್ರಂಪ್ ಹೇಳಿದರು.

ಮಾಸ್ಕೋ ಜೊತೆ ಒಪ್ಪಂದಕ್ಕೆ ಬರಲು ಝೆಲೆನ್ಸ್ಕಿ ಸಿದ್ಧರಿದ್ದಾರೆಯೇ ಎಂಬ ಬಗ್ಗೆ ಟ್ರಂಪ್ ಅನುಮಾನ ವ್ಯಕ್ತಪಡಿಸಿದ್ದಾರೆ. ರಷ್ಯಾದ ತೈಲ ಸಂಸ್ಕರಣಾಗಾರಗಳ ಮೇಲಿನ ದಾಳಿಗಳನ್ನು ನಿಲ್ಲಿಸುವಂತೆಯೂ ಕೀವ್‌ಗೆ ಅವರು ಒತ್ತಾಯಿಸಿದ್ದಾರೆ. ಇಂಧನ ಮೂಲಸೌಕರ್ಯಗಳ ಮೇಲಿನ ದಾಳಿಗಳು ಇಂಧನ ಪೂರೈಕೆಗೆ ಅಡ್ಡಿಪಡಿಸಿ, ಡೀಸೆಲ್ ಬೆಲೆ ಏರಿಕೆಗೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದಾರೆ.

ರಷ್ಯಾದೊಂದಿಗೆ ಒಪ್ಪಂದಕ್ಕೆ ಬರಲು ಸಮರ್ಥವಾಗಿರುವ ಹೊಸ ನಾಯಕತ್ವ ಉಕ್ರೇನ್‌ಗೆ ಅಗತ್ಯವಾಗಬಹುದು ಎಂದೂ ಟ್ರಂಪ್ ಹೇಳಿದ್ದಾರೆ. ಇದರಿಂದ ಕೀವ್‌ಗೆ ಅಮೆರಿಕದ ದೀರ್ಘಕಾಲೀನ ಬೆಂಬಲದ ಕುರಿತು ಅನಿಶ್ಚಿತತೆ ಮತ್ತಷ್ಟು ಹೆಚ್ಚಾಗಿದೆ.

ಆದರೆ, ರಷ್ಯಾದ ಪಡೆಗಳು ತನ್ನ ಭೂಪ್ರದೇಶದ ಮೇಲೆ ದಾಳಿಗಳನ್ನು ಮುಂದುವರಿಸಿರುವುದರಿಂದ ಉಕ್ರೇನ್‌ಗೆ ನಿರಂತರ ಮಿಲಿಟರಿ ನೆರವು ಮತ್ತು ಬಲಿಷ್ಠ ವಾಯು ರಕ್ಷಣಾ ವ್ಯವಸ್ಥೆಗಳು ಅಗತ್ಯವೆಂದು ಝೆಲೆನ್ಸ್ಕಿ ಪ್ರತಿಪಾದಿಸಿದ್ದಾರೆ.

ರಷ್ಯಾದ ಇಂಧನ ಸೌಲಭ್ಯಗಳ ಮೇಲಿನ ದಾಳಿಗಳನ್ನು ನಿಲ್ಲಿಸುವಂತೆ ವಾಷಿಂಗ್ಟನ್ ಕೀವ್‌ಗೆ ಸೂಚಿಸಿದೆ ಎಂಬ ವರದಿಗಳ ಬಳಿಕ ಈ ವಿವಾದ ಮತ್ತಷ್ಟು ತೀವ್ರಗೊಂಡಿದೆ. ಉಕ್ರೇನ್ ದಾಳಿಗಳನ್ನು ಮುಂದುವರಿಸಿದರೆ ಅಮೆರಿಕದ ಶಸ್ತ್ರಾಸ್ತ್ರ ಪೂರೈಕೆ ಮತ್ತು ಗುಪ್ತಚರ ಮಾಹಿತಿಯ ಹಂಚಿಕೆ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರಬಹುದು ಎಂಬ ವರದಿಗಳೂ ಪ್ರಕಟವಾಗಿವೆ. ಆದರೆ, ಉಕ್ರೇನ್‌ನೊಂದಿಗೆ ಗುಪ್ತಚರ ಮಾಹಿತಿಯ ಹಂಚಿಕೆಯನ್ನು ಅಮೆರಿಕ ನಿಲ್ಲಿಸಿಲ್ಲ ಎಂದು ಟ್ರಂಪ್ ನಿರಾಕರಿಸಿದ್ದಾರೆ.

ಎಲಾನ್ ಮಸ್ಕ್ ಅವರ ಸ್ಪೇಸ್‌ಎಕ್ಸ್ ಸಂಸ್ಥೆ ನಿರ್ವಹಿಸುವ ಸೇನಾ ಬಳಕೆಯ ಉಪಗ್ರಹ ಸಂವಹನ ಸೇವೆಯಾದ ಸ್ಟಾರ್‌ಶೀಲ್ಡ್ ಮೇಲೆ ನಿರ್ಬಂಧಗಳು ವಿಧಿಸಲಾಗಿದೆ ಎಂಬ ವರದಿಗಳ ಬಳಿಕ ಗುಪ್ತಚರ ಬೆಂಬಲದ ಬಗ್ಗೆಯೂ ಪ್ರಶ್ನೆಗಳು ಉದ್ಭವಿಸಿವೆ.

ಈ ಸೇವೆಯಲ್ಲಿನ ವ್ಯತ್ಯಯಗಳಿಂದ ಸೇನಾ ಸಂವಹನ, ಸರಕು ಸಾಗಣೆ ಮತ್ತು ಕೆಲವು ಡ್ರೋನ್ ಕಾರ್ಯಾಚರಣೆಗಳಿಗೆ ತೊಂದರೆಯಾಗಿದೆ ಎಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಸೇವೆಯನ್ನು ಭಾಗಶಃ ಪುನಃಸ್ಥಾಪಿಸಲಾಗಿದೆ. ಸ್ಟಾರ್‌ಶೀಲ್ಡ್ ವ್ಯವಸ್ಥೆಗಳು ಅಮೆರಿಕ ಸರ್ಕಾರದ ಒಡೆತನದಲ್ಲಿದ್ದು, ಅದರ ಬಳಕೆ ಮತ್ತು ನಿರ್ಬಂಧಗಳ ಕುರಿತು ನಿರ್ಧಾರ ಕೈಗೊಳ್ಳುವ ಅಧಿಕಾರ ಸರ್ಕಾರಕ್ಕಿದೆ ಎಂದು ಮಸ್ಕ್ ಹೇಳಿದ್ದಾರೆ.

ಕ್ಷಿಪಣಿಗಳ ಕೊರತೆ ಮತ್ತು ಸಂವಹನ ವ್ಯವಸ್ಥೆಯಲ್ಲಿನ ವ್ಯತ್ಯಯಗಳು ರಷ್ಯಾದ ದಾಳಿಗಳನ್ನು ಎದುರಿಸಲು ಉಕ್ರೇನ್ ಅಮೆರಿಕದ ಸೇನಾ ಉಪಕರಣಗಳು, ತಂತ್ರಜ್ಞಾನ ಮತ್ತು ಗುಪ್ತಚರ ಬೆಂಬಲದ ಮೇಲೆ ಎಷ್ಟರಮಟ್ಟಿಗೆ ಅವಲಂಬಿತವಾಗಿದೆ ಎಂಬುದನ್ನು ಸ್ಪಷ್ಟಪಡಿಸಿವೆ.

ಜಾಗತಿಕ ಮಟ್ಟದಲ್ಲಿ ಪೇಟ್ರಿಯಾಟ್ ಪ್ರತಿಬಂಧಕ ಕ್ಷಿಪಣಿಗಳ ಪೂರೈಕೆ ಸೀಮಿತವಾಗಿರುವುದರಿಂದ, ಉಕ್ರೇನ್‌ನ ಸಂಗ್ರಹವನ್ನು ಮರುಪೂರಣಗೊಳಿಸುವುದು ಕ್ಷಿಪಣಿಗಳ ಲಭ್ಯತೆ ಹಾಗೂ ಅಮೆರಿಕ ಮತ್ತು ಇತರ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳ ನಿರ್ಧಾರಗಳ ಮೇಲೆ ಅವಲಂಬಿತವಾಗಿದೆ.

ಸೆಪ್ಟೆಂಬರ್ ಅಂತ್ಯದಲ್ಲಿ ಉಕ್ರೇನ್‌ನ ಪೇಟ್ರಿಯಾಟ್ ವಾಯು ರಕ್ಷಣಾ ವ್ಯವಸ್ಥೆಗಳಿಗೆ ಹೊಸ ಕ್ಷಿಪಣಿ ಪ್ಯಾಕೇಜ್ ಪಡೆಯಲು ಒಪ್ಪಂದ ಮಾಡಿಕೊಂಡಿರುವುದಾಗಿ ಝೆಲೆನ್ಸ್ಕಿ ಘೋಷಿಸಿದ್ದರು. ಅಮೆರಿಕದಲ್ಲಿರುವ ಉಕ್ರೇನಿಯನ್ ಸಮುದಾಯದ ಪ್ರತಿನಿಧಿಗಳೊಂದಿಗಿನ ಸಭೆಯ ಬಳಿಕ ಈ ಘೋಷಣೆ ಮಾಡಲಾಗಿತ್ತು. ಆದರೆ, ಯಾವ ದೇಶದಿಂದ ಕ್ಷಿಪಣಿಗಳನ್ನು ಖರೀದಿಸಲಾಗುವುದು ಎಂಬುದನ್ನು ಅವರು ಬಹಿರಂಗಪಡಿಸಿರಲಿಲ್ಲ.

ರಷ್ಯಾದ ದಾಳಿಗಳು ಮುಂದುವರಿಯುತ್ತಿರುವುದರಿಂದ ಉಕ್ರೇನ್‌ನ ವಾಯು ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವುದು ಕೀವ್ ಎದುರಿಸುತ್ತಿರುವ ತಕ್ಷಣದ ಸವಾಲಾಗಿದೆ. ಯುದ್ಧಭೂಮಿಯಲ್ಲಿ ಒತ್ತಡ ಹೆಚ್ಚುತ್ತಿರುವ ಮತ್ತು ಮಾತುಕತೆಯ ಮೂಲಕ ಸಂಘರ್ಷವನ್ನು ಅಂತ್ಯಗೊಳಿಸುವಂತೆ ಹೊಸದಾಗಿ ಕರೆಗಳು ಕೇಳಿಬರುತ್ತಿರುವ ಸಂದರ್ಭದಲ್ಲಿ, ಟ್ರಂಪ್ ಮತ್ತು ಝೆಲೆನ್ಸ್ಕಿ ನಡುವಿನ ಹದಗೆಡುತ್ತಿರುವ ಸಂಬಂಧವು ಭವಿಷ್ಯದ ಮಿಲಿಟರಿ ನೆರವಿನ ಕುರಿತು ಅನಿಶ್ಚಿತತೆಯನ್ನು ಹೆಚ್ಚಿಸಿದೆ.

ಸುದ್ದಿ ಓದಿ