ತಾಳಿಕೋಟಿ

ಮತದಾನ ನಿಮ್ಮ ಹಕ್ಕು, ಕಡ್ಡಾಯವಾಗಿ ಮತದಾನ ಮಾಡಿ

ಮತದಾನ ನಿಮ್ಮ ಹಕ್ಕು, ಕಡ್ಡಾಯವಾಗಿ ಮತದಾನ ಮಾಡಿ

ತಾಳಿಕೋಟೆ, 18 ವರ್ಷ ತುಂಬಿದ ಪ್ರತಿಯೊಬ್ಬ ಯುವಕ, ಯುವತಿಯರು ಸಾರ್ವತ್ರಿಕ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಸದೃಡ್ಢ ದೇಶ ನಿರ್ಮಾಣ ಮಾಡಬೇಕು, ಮತದಾನ ನಿಮ್ಮ ಹಕ್ಕು, ಪ್ರಜಾಪ್ರಭುತ್ವದಲ್ಲಿ ಮತದಾನಕ್ಕಿಂತ ದೊಡ್ಡ ಹಕ್ಕು ಬೇರೆ ಇಲ್ಲ ಎಂದು ತಹಶೀಲ್ದಾರ ಎಸ್‌.ಎಚ್‌.ಅರಿಕೇರಿ ಹೇಳಿದರು. 

ಅವರು ಪಟ್ಟಣದ ವೀ.ವಿ.ಸಂಘದ, ಶ್ರೀ ಖಾಸ್ಗತೇಶ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ವಿಭಾಗ ಹಾಗೂ ಚುನಾವಣಾ ಸಾಕ್ಷರತಾ ಕೂಟ ಹಾಗೂ ತಹಶೀಲ್ದಾರ ಕಚೇರಿ ಇವರ ಸಹಯೋಗದಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. 

ಸರ್ಕಾರವು ಯುವಕರಲ್ಲಿ ಜಾಗೃತಿಯನ್ನು ಮೂಡಿಸಲು ಶಿಕ್ಷಣ ಕ್ಷೇತ್ರಗಳಲ್ಲಿ ಚುನಾವಣಾ ಸಾಕ್ಷರತಾ ಕೂಟಗಳನ್ನು ಸ್ಥಾಪಿಸುವುದರ ಮೂಲಕ ಭವ್ಯ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ. ಮತವನ್ನು ಮಾರಿಕೊಳ್ಳಬಾರದು. ಮತವನ್ನು ಮಾರಿಕೊಂಡರೇ ತಾಯಿಯನ್ನು ಮಾರಿಕೊಂಡಂತೆ. ಸಂವಿಧಾನವನ್ನು ನಮಗೆ ಮಾತನಾಡುವ ಹಕ್ಕು ಹೇಗೆ ಕೊಟ್ಟಿದೆಯೋ ಅದರಂತೆ ಈ ಮತದಾನದ ಹಕ್ಕು ಸಹ ನೀಡಿದೆ, ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು. ಅಭ್ಯರ್ಥಿಗಳು ನಿಮಗೆ ಇಷ್ಟ ಇರಲಿ ಇಲದೆ ಇರಲಿ ಮತದಾನ ಮಾಡಬೇಕು, ಈಗ ನೋಟ ಸಹ ಬಂದಿರುವದರಿಂದ ಅದಕ್ಕೆ ಮತದಾನ ಮಾಡಿದರೆ ನೀವು ಮತ ಹಾಕಿದಂತೆ ಎಂದರು. 

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೋ.ಆರ್‌.ವಿ.ಜಾಲವಾದಿ ಮಾತನಾಡಿ, ಮತದಾನ ನಮ್ಮ ಹಕ್ಕು ಮಾತ್ರವಲ್ಲ  ಅದು ಕರ್ತವ್ಯವೂ ಆಗಿದೆ. ಯಾರು ಸಹ ಮತದಾನವನ್ನ ತಪ್ಪಿಸಿಕೊಳ್ಳಬಾರದು ಎಂದರು. 

ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಅಜೇಯ ಅಬ್ಬಾರ ಮಾತನಾಡಿದರು. ಈ ಸಂದರ್ಬದಲ್ಲಿ ಉಪತಹಶಿಲ್ದಾರ ಜೆ.ಎಲ್‌.ಜೈನಾಪೂರ, ತಹಶೀಲ್ದಾರ ಕಛೇರಿ ಸಿಬ್ಬಂದಿ ವರ್ಗದವರು ಹಾಗೂ ಮಹಾವಿದ್ಯಾಲಯದ ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿ ಮತ್ತು  ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಪ್ರೋ.ಕೆ.ಬಿ.ದೇಸಾಯಿ ನಿರೂಪಿಸಿದರು, ಲಲಿತಾ ಗೌಡರ ಸ್ವಾಗತಿಸಿದರು, ಕುಮಾರಿ ರುಕ್ಸಾನಾ ಚೌಧರಿ ಪ್ರತಿಜ್ಞಾ ವಿಧಿ ಬೋಧಿಸಿದರು, ಪ್ರೋ.ಯು.ಎ.ಖಾಜಿ ವಂದಿಸಿದರು. 




ಸುದ್ದಿ ಓದಿ