ಮತ ಚಲಾಯಿಸಿ ಪ್ರಜಾತಂತ್ರದ ಆಶಯ ಉಳಿಸಿ...
ನಮ್ಮದು ಪ್ರಜಾಸತ್ತಾತ್ಮಕ ದೇಶ. ಪ್ರಜೆಗಳ ಮತವನ್ನು ಸ್ವೀಕರಿಸಿ, ಅದಕ್ಕೆ ಪೂರಕವಾಗಿ ಸರಕಾರ ನಡೆಸಬೇಕೆಂಬುದೇ ಪ್ರಜಾತಂತ್ರದ ಆಶಯ, ಅಭಿಪ್ರಾಯ. ಸರಕಾರವು ಜನಾಭಿಪ್ರಾಯದಂತೆ ನಡೆಯುತ್ತಿರಬೇಕು. ಜನಕ್ಕೆ ಬೇಕಾದ ಆಹಾರ, ವಸತಿ, ಶಿಕ್ಷಣ, ನೀರು, ಬೆಳಕು, ಓಷಧಿ ಇತ್ಯಾದಿಗಳ ಸಮರ್ಕ ಅರಿವು, ಹಂಚಿಕೆ ಎಲ್ಲವನ್ನೂ ಸರಕಾರವೇ ನಡೆಸಬೇಕು.
ಈ ಕಾರಣದಿಂದಲೇ ಆಯಾ ಪ್ರದೇಶದ ಪರವಾಗಿ ಮತದಾನದ ಮೂಲಕ ಯೋಗ್ಯ ಪ್ರತಿನಿಧಿಗಳನ್ನು ಆರಿಸಿ, ಸರಕಾರ ನಡೆಸಲು ಕಳಿಸುವ ಗುರುತರ ಹೊಣೆಗಾರಿಕೆ ಎಲ್ಲಾ ಜನಗಳದು. ಇಂತಹ ಚುನಾವಣೆಗಳು ಪ್ರಜಾತಂತ್ರದ ಆಧಾರಗಳೂ ಆಗಿವೆ. ಜನವರಿ 25ನೇ ತಾರೀಖನ್ನು ‘ರಾಷ್ಟ್ರೀಯ ಮತದಾರರ ದಿನ’ ಎಂದು ಆಚರಿಸಲಾಗುತ್ತದೆ. ಏಕೆಂದರೆ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತದಾನದ ಪಾತ್ರ ಅತ್ಯಂತ ಮಹತ್ತರವಾದುದು. ಜನತಂತ್ರದ ಮುಖ್ಯ ಅಂಗವೇ ಚುನಾವಣೆಗಳು.
ನಾವು ತೀರ್ಮಾನಿಸಿ ಕೊಡುವ ಅಧಿಕಾರ. ಪ್ರಜೆಗಳಿಂದ ಆಯ್ಕೆಯಾದ ಸರ್ಕಾರ ಜನರ ಆಶೋತ್ತರಗಳಂತೆಯೇ ನಡೆಯಬೇಕೆಂಬುದು ಸಂವಿಧಾನದ ನಿಯಮ. ಹೀಗಾಗದಿದ್ದಾಗ ಜನವಿರೋಧಿ ಸರ್ಕಾರವನ್ನು ಮತದಾನದ ಮೂಲಕವೇ ಕಿತ್ತೆಸೆಯಲೂಬಹುದು. ಹೀಗೆ ಮತದಾನವು ಪ್ರಜೆಗಳಿಗೆ ಸರಕಾರವನ್ನು ಸ್ಥಾಪಿಸುವ ಮತ್ತು ಅಧಿಕಾರದಿಂದ ಕೆಳಗಿಳಿಸುವ ಹಕ್ಕನ್ನು ನೀಡಿದೆ. ಇದನ್ನೇ ‘ಜನತಾಧಿಕಾರ’ ಎನ್ನುವುದು. ಮತದಾನವು ರಾಜಕೀಯ ವ್ಯವಸ್ಥೆಯನ್ನು ನಿಯಂತ್ರಿಸುವ ಸಲುವಾಗಿ ಪ್ರಜೆಗಳಿಗೆ ಕೊಟ್ಟಿರುವ ಒಂದು ಬಲವಾದ ಅಂಕುಶ ಎನ್ನಲೂಬಹುದು. ಈ ವ್ಯವಸ್ಥೆ ಪ್ರಜೆಗಳಿಗೆ ಪರೋಕ್ಷವಾಗಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡಲು ಅವಕಾಶ ನೀಡಿದೆ. ಇದರಿಂದಲೇ ಭ್ರಷ್ಟ ಸರಕಾರಗಳನ್ನು ಶಾಂತಿಯುತವಾಗೇ ಬದಲಾಯಿಸಲು ಸಾಧ್ಯವಾಗಿರುವುದು. ಆದ್ದರಿಂದಲೇ ಮತದಾನವನ್ನು ಪ್ರಜಾಪ್ರಭುತ್ವದ ‘ಆಧಾರ ಸ್ತಂಭ’ ಎಂದಿರುವುದು.
ಮುಕ್ತ ಮತ್ತು ನಿರ್ಭೀತ ಚುನಾವಣೆಗಳು ಆರೋಗ್ಯವಂತ ಪ್ರಜಾಪ್ರಭುತ್ವದ ಲಕ್ಷಣವಾಗಿದ್ದು ರಾಷ್ಟ್ರದ ಪ್ರತಿಷ್ಠೆ ಹಾಗೂ ಮೌಲ್ಯಗಳನ್ನು ಹೆಚ್ಚಿಸುತ್ತದೆ. ಇತ್ತೀಚಿನ ಸಮೀಕ್ಷೆಯ ಪ್ರಕಾರ ಭಾರತದ ಜನಸಂಖ್ಯೆ 129 ಕೋಟಿಯಷ್ಟು. ಇದರಲ್ಲಿ ಕರ್ನಾಟಕದ ಜನಸಂಖ್ಯೆ 6.30ರಷ್ಟು. ಇವರಲ್ಲಿ ಮತದಾನದ ಹಕ್ಕು ಪಡೆದಿರುವವರು ಸುಮಾರು 90 ಹೆಚ್ಚು ಕೋಟಿಯಷ್ಟು, ಕರ್ನಾಟಕದಲ್ಲಿ ಸುಮಾರು 4.85 ಕೋಟಿಯಷ್ಟು ಜನ ಮತದಾನದ ಹಕ್ಕನ್ನು ಹೊಂದಿದ್ದಾರೆ. ಆಸ್ಟ್ರೇಲಿಯಾ ಮುಂತಾದ ದೇಶಗಳಲ್ಲಿ ಮತದಾನ ಮಾಡದೇಹೋದರೆ, ಅಪರಾಧವಾಗುತ್ತದೆ. ಅನಕ್ಷರತೆ ಇರುವ ನಮ್ಮ ದೇಶದಲ್ಲಿ ಕಡ್ಡಾಯ ಮತದಾನ ಕಷ್ಟಕರವಾದುದು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಮೂಲಕ ಮತದಾನದ ಪಾವಿತ್ರ್ಯತೆ ತಿಳಿಸಬೇಕಾಗಿದೆ.
ದುರಂತವೆಂದರೆ ವಿದ್ಯಾವಂತರೆನಸಿದ ಅವಿವೇಕಿಗಳೇ ಮತದಾನ ಮಾಡುತ್ತಿಲ್ಲ ಎಂಬುದು ಖೇದಕರ. ಚುನಾವಣಾ ಆಯೋಗವು ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.್ಖ ವಿಕಲಚೇತನರ ಸ್ನೇಹಿ ಮತ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಅಂಗವಿಕಲರಿಗೆ ಉತ್ತಮ ವಾತಾವರ ಕಲ್ಪಿಸಿದೆ. ಇದರಿಂದ ಅಂಗವಿಕಲರು ಸರಳವಾಗಿ ಬಂದು ಮತದಾನ ಮಾಡಬಹುದಾಗಿದೆ.
ಮಹಿಳಾ ಸ್ನೇಹಿ ಮತದಾನ ಕೇಂದ್ರಗಳು. “ಪಿಂಕ್ ಮತದಾನ ಕೇಂದ್ರ" ಸ್ಥಾಪನೆ ಮೂಲಕ ಮಹಿಳಾ ಮತದಾನ ಹೆಚ್ಚುಗೊಳಿಸಿದೆ.
ಹೊಸ ಮತದಾರರ ನೋಂದಣಿಯನ್ನು ಸರಳವಾಗಿ ಸೇರಿಸುವ ಕ್ರಮ ಕೈಗೊಂಡಿದೆ.
ಮತದಾನ ದಿನನ್ನು ಹಲವಾರು ವಿಭಿನ್ನ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.
ನ್ಯಾಯಾಸಮ್ಮತ ಚುನಾವಣೆಗಳನ್ನು ನಡೆಸುತ್ತಿದೆ.
ಸಂಪೂರ್ಣ ಭದ್ರತೆ, ಸುರಕ್ಷಿತ ಚುನಾವಣೆ ನಡೆಸುತ್ತಿದೆ.
ದೇಶದ ಪ್ರತಿಯೊಂದು ಮತದಾನ ಕೇಂದ್ರವು ಮೂಲಭೂತ ಸೌಕರ್ಯಗಳನ್ನು ಒಳಗೊಂಡಿದೆ. ಶೌಚಾಲಯ, ಕುಡಿಯುವ ನೀರು, ಗುಪ್ತ ಮತದಾನಕ್ಕೆ ಸ್ಥಳ, ರಸ್ತೆಗಳು, ನಿರ್ಭಿತ ವಾತಾವರಣಗಳನ್ನು ಸೃಷ್ಟಿಸಿದೆ. 1982ರಲ್ಲಿ ಸಂಸತ್ತು ಮತದಾನದ ವಯಸ್ಸನ್ನು 21 ರಿಂದ 18 ವರ್ಷಕ್ಕೆ ಇಳಿಸಿತು. ವಯಸ್ಕ ಮತದಾನದ ಪದ್ಧತಿಯಲ್ಲಿ ಜಾತಿ, ಧರ್ಮ, ಬಡತನ, ಸಿರಿತನ, ಲಿಂಗ ಭೇದ, ಇತ್ಯಾದಿ ಯಾವುದೇ ತಾರತಮ್ಯಗಳಿಲ್ಲ. ಇದು ಪ್ರಜೆಗಳ ಪರಮಾಧಿಕಾರದ ಸಂಕೇತವಾಗಿರುತ್ತದೆ. ಅದೇ ರೀತಿ ಎಷ್ಟೇ ಬಲಶಾಲಿ ವ್ಯಕ್ತಿಗಳಾಗಲೀ, ಅವರು ಮತದಾನವನ್ನು ಎದುರಿಸಿ, ಗೆದ್ದು ಅಧಿಕಾರಕ್ಕೆ ಬರಬೇಕು ಮತ್ತು ಈ ಅಧಿಕಾರ ಶಾಶ್ವತವೂ ಅಲ್ಲ ಅಥವಾ ವಂಶಾನುಕ್ರಮವೂ ಅಲ್ಲ, ಇತ್ಯಾದಿ ಉತ್ತಮ ಅಂಶಗಳು ಸಹ ಇದೆ. ಇನ್ನು ಲೋಪಗಳೆಂದರೆ, ಮತ ನೀಡುವವರಿಗೆ ಮತ್ತು ಚುನಾವಣೆಗೆ ನಿಲ್ಲುವವರೆಗೆ ವಿದ್ಯೆ, ಬುದ್ಧಿ ಏನೂ ಬೇಕಾಗಿಲ್ಲ. ವಯಸ್ಸೊಂದೇ ಅರ್ಹತೆ. ಮತ್ಯಾವ ಯೋಗ್ಯತೆಯೂ ಬೇಕಾಗಿಲ್ಲ. ಇದು ಒಳ್ಳೆಯದೋ, ಕೆಟ್ಟದ್ದೋ ಅವರವರಿಗೇ ಬಿಟ್ಟಿದ್ದು. ಈ ರೀತಿಯ ನಮ್ಮ ಮತದಾನ ಪದ್ಧತಿಗೆ ಹಲವು ದಶಕಗಳು ಕಳೆದಿವೆ . ನಮ್ಮ ಸರಕಾರ ತಜ್ಞರ ಸಲಹೆ ಪಡೆದು ಚುನಾವಣಾ ಪ್ರಣಾಳಿಕೆಯಲ್ಲಿ ಕೆಲವು ಬದಲಾವಣೆ ಮಾಡಿಕೊಂಡರೆ ಉತ್ತಮ ಸರಕಾರದ ನಿರ್ಮಾಣ ಸಾಧ್ಯವಾಗಬಹುದೆಂಬ ಆಸೆ. ಇದೇ ರೀತಿ ಯಾವುದೇ ಲೋಭ, ಆಮಿಷಕ್ಕೆ ಒಳಗಾಗದೇ ಯೋಚಿಸಿ, ಉತ್ತಮ ದಕ್ಷವ್ಯಕ್ತಿಯನ್ನು ಆಯ್ಕೆಮಾಡಿಕೊಳ್ಳುವುದು ಎಲ್ಲರ ಕರ್ತವ್ಯವೂ ಆಗಿರುತ್ತದೆ.ಹಕ್ಕನ್ನು ಸದ್ಬಳಕೆ ಮಾಡಿಕೊಳ್ಳಿ: ಈ ಆಡಳಿತ ಯಂತ್ರವನ್ನು ಬಳಸಿಕೊಂಡು ಐದು ವರ್ಷಗಳಿಗೊಮ್ಮೆ ಚುನಾವಣೆ ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹಕ್ಕನ್ನು ನಮ್ಮ ಸಂವಿಧಾನ ನಮಗೆ ನೀಡಿದೆ. ದೇಶ ಮಾತ್ರವಲ್ಲ ದೇಶದ ಚುಕ್ಕಾಣಿ ಹಿಡಿಯುವ ನಾಯಕರ ಭವಿಷ್ಯವನ್ನು ಅಳೆಯುವ ಚುನಾವಣೆಯಲ್ಲಿ ನಿಮ್ಮ ಮತ ವ್ಯರ್ಥವಾಗಬಾರದು.ಪ್ರಜಾಪ್ರಭುತ್ವವನ್ನು ಉಳಿಸಿ ಬೆಳೆಸಿ ಗಟ್ಟಿಗೊಳಿಸಲು ಪ್ರಜೆಗಳ ಪ್ರತ್ಯಕ್ಷ ಮತ್ತು ಪರೋಕ್ಷ ಪಾಲ್ಗೊಳ್ಳುವಿಕೆ ನಿರಂತರವಾಗಿ ಇರಬೇಕು. ಚುನಾವಣೆ ನಡೆದಾಗ ಮತಗಟ್ಟೆಗೆ ಬಂದು ಮತದಾನ ಮಾಡುವುದು ಅದರಲ್ಲಿ ಕಣ್ಣಿಗೆ ಕಾಣುವ ಒಂದು ಸಣ್ಣ ಸಂಕೇತ; ಇದರ ಪರಿಣಾಮ ಮಾತ್ರ ಬಹಳ ದೊಡ್ಡದು. ಆದರೂ ಜನರು ತಮ್ಮ ಬದುಕಿನಲ್ಲಿ ಬೇಕಾದ ಸಂಗತಿಗಳಿಗೆ ಸಹಜವಾಗಿ ಆಸಕ್ತಿ ತೋರುವಂತೆ, ಬೇಕಾದ ಸರ್ಕಾರವನ್ನು ಆರಿಸಿಕೊಳ್ಳಲು ಆಸಕ್ತಿ ತೋರುವುದಿಲ್ಲ. ‘ಆಸಕ್ತಿ ತೋರಿಸಿ, ಮತದಾನ ಮಾಡಿ’ ಆಸ್ಟ್ರೇಲಿಯ, ಬೆಲ್ಜಿಯಂ, ಬೊಲಿವಿಯ, ಇಟಲಿ, ಸಿಂಗಪುರ ಮುಂತಾದ ಅನೇಕ ದೇಶಗಳಲ್ಲಿ ಅರ್ಹ ಪ್ರಜೆಗಳಿಗೆ ಮತದಾನವನ್ನು ಕಡ್ಡಾಯ ಮಾಡಲಾಗಿದೆ. ಇನ್ನೂ ಕೆಲವು ದೇಶಗಳಲ್ಲಿ ಅದನ್ನು ಹೋಲುವ ಕ್ರಮಗಳು ಜಾರಿಯಲ್ಲಿವೆ. ಮತದಾನ ಮಾಡುವುದು ನಿಮ್ಮ ಹಕ್ಕೂ ಹೌದು, ನಿಮ್ಮ ಕರ್ತವ್ಯವೂ ಹೌದು ಎನ್ನುವುದು ಆ ದೇಶಗಳ ವಾದ. ನೀವಿಲ್ಲದೆ ನನಗೇನಿದೆ ಎನ್ನುವುದು ಪ್ರಜಾಪ್ರಭುತ್ವ ಅಲ್ಲಿನ ಜನರಿಗೆ ಕೇಳುವ ಪ್ರಶ್ನೆ. ಮತ ಹಾಕದ ಜನರಿಗೆ ಆ ದೇಶಗಳಲ್ಲಿ ಸಣ್ಣಪುಟ್ಟ ದಂಡ ಅಥವಾ ಶಿಕ್ಷೆಯೂ ಇದೆ. ಆಸ್ಟ್ರೇಲಿಯದಲ್ಲಿ ಕಡ್ಡಾಯಕ್ಕೆ ಮೊದಲು ಮತದಾನದ ಪ್ರಮಾಣ ಕೇವಲ ಶೇ 28 ಇತ್ತಂತೆ. ಮತದಾನ ಕಡ್ಡಾಯ ಕ್ರಮಕ್ಕೆ ಆ ದೇಶಗಳಲ್ಲಿ ಪ್ರತಿಯೊಂದಕ್ಕೂ ಅದರದೇ ಸಮರ್ಥನೆಗಳುಂಟು. ಅವುಗಳ ಪೈಕಿ, ಪ್ರಜಾಪ್ರಭುತ್ವದಲ್ಲಿ ‘ನೈಜ ಪ್ರಾತಿನಿಧ್ಯ’ ಮತ್ತು ‘ನೈಜ ಜನಾದೇಶ’ ಇರಬೇಕು, ಇರದಿದ್ದರೆ (ಕಾನೂನಿನ ಕೋಲು ಹಿಡಿದಾದರೂ) ಅದನ್ನು ತರಬೇಕು ಅನ್ನುವ ಸಮರ್ಥನೆಯೇ ಬಹಳ ಮುಖ್ಯ. ಏನಾದರೂ ಮತದಾನಕ್ಕೆ ಜನರ ನಿರಾಸಕ್ತಿ ಒಂದು ಜಾಗತಿಕ ಲಕ್ಷಣ. ನೈಜ ಪ್ರಾತಿನಿಧ್ಯ ಮತ್ತು ನೈಜ ಜನಾದೇಶದ ಉದಾಹರಣೆಗೆ ನಮ್ಮ ದೇಶದ ನೂರು ಜನ ಮತದಾರರ ಲೆಕ್ಕವನ್ನೇ ತೆಗೆದುಕೊಳ್ಳೋಣ. ಅವರಲ್ಲಿ ಐವತ್ತು ಜನ ಮತಗಟ್ಟೆಗೆ ಬಂದು ಮತ ಹಾಕುತ್ತಾರೆ. ಅನನುಕೂಲ, ಅನಾರೋಗ್ಯ, ಅತಿ ದೂರ, ಆದಾಯನಷ್ಟ ಮುಂತಾದ ‘ಒಪ್ಪಬಹುದಾದ’ ಕಾರಣಗಳಿಂದ ಹತ್ತು ಜನರಿಗೆ ಬರಲು ಸಾಧ್ಯವಾಗುವುದಿಲ್ಲ. ಆದರೆ ಮಿಕ್ಕ ನಲವತ್ತು ಜನ ಬರದೇ ಇರಲು ಏನು ಕಾರಣ? ಅನಾಸಕ್ತಿ, ಅಸಡ್ಡೆ, ಅಜ್ಞಾನ ಅಥವಾ ಅಹಂಕಾರ ‘ಯಾವ ರಾಜ ಬಂದರೇನು ರಾಗಿ ಬೀಸುವುದು ತಪ್ಪುವುದಿಲ್ಲ’ ಎಂಬ ಅಸಮಾಧಾನ.ಬೇರೆ ಬೇರೆ ವಿಷಯಗಳಿಗೆ ಇರುವ ಹುಮ್ಮಸ್ಸೇ, ಕಡ್ಡಾಯ ಮತದಾನ ಕುರಿತು ದೇಶದಲ್ಲಿ .ಈ ವಿಷಯ ಕುರಿತ ಚರ್ಚೆ ಪಕ್ಷವನ್ನು ಮೀರಿ, ಮರೆತು ನಡೆಯಬೇಕು. ಹೆಚ್ಚು ಕಡಿಮೆ ಇದೇ ಸಮಯದಲ್ಲಿ, ಸುಪ್ರೀಂಕೋರ್ಟ್ ಮಾತ್ರವಲ್ಲದೆ, ಬಾಂಬೆ ಮತ್ತು ಲಖನೌ ಹೈಕೋರ್ಟ್ಗಳೂ ಕಡ್ಡಾಯ ಮತದಾನಕ್ಕೆ ಆಗ್ರಹಿಸುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳಿಗೆ ಸಂಬಂಧಿಸಿದಂತೆ ಅಭಿಪ್ರಾಯ ವ್ಯಕ್ತಪಡಿಸುತ್ತಾ ‘ಕಡ್ಡಾಯ ಮತದಾನ ಕುರಿತು ಆಲೋಚಿಸಬಾರದೇಕೆ’ ಎಂದು ಕೇಂದ್ರ ಸರ್ಕಾರವನ್ನೂ ಸಾರ್ವಜನಿಕರನ್ನೂ ಕೇಳಿವೆ. ಚುನಾವಣೆಯ ದಿನ ರಜೆ ಕೊಟ್ಟರೆ ನಮ್ಮ ಜನ ಬಂದು ಮತದಾನ ಮಾಡದೆ ಸುಮ್ಮನೆ ರಜೆಯ ಖುಷಿ ಅನುಭವಿಸುತ್ತಾರಲ್ಲ, ಇದನ್ನು ತಪ್ಪಿಸಲು ಏನಾದರೂ ಮಾಡಬೇಕಲ್ಲವೇ ಎಂದು ಬಾಂಬೆ ಹೈಕೋರ್ಟ್ ಕಾಳಜಿ ವ್ಯಕ್ತಪಡಿಸಿದೆ. ಮತದಾನ ಕಡ್ಡಾಯ ಮಾಡುವ ದಿಕ್ಕಿನಲ್ಲಿ ನ್ಯಾಯಾಲಯಗಳ ಈ ಅಭಿಪ್ರಾಯಗಳು ಬಹಳ ಮುಖ್ಯ ಮತ್ತು ಗಮನಾರ್ಹ. ಕಡ್ಡಾಯ ಮತದಾನದ ವಿಚಾರದಲ್ಲಿ ಮೊದಲಿಗೆ, ಯಾವುದನ್ನಾದರೂ ಕಡ್ಡಾಯ ಮಾಡುವುದೇ ಸರ್ವಾಧಿಕಾರವಲ್ಲವೇ ಎಂಬ ಪ್ರಶ್ನೆ ಏಳುವುದು ಸಹಜ. ಇದರ ಪಕ್ಕದಲ್ಲೇ ರಾಜಕಾರಣಿಗಳ ಸರ್ವಾಧಿಕಾರಿ ಮನೋಭಾವವನ್ನು ಅಳಿಸಿ ಪ್ರಜಾಸತ್ತೆಯನ್ನು ಬಲಪಡಿಸಲು ಕಡ್ಡಾಯ ಮತದಾನ ಅಗತ್ಯ ಎಂಬ ವಾದ ಬಲವಾಗಿದೆ. ಜನರು ಮತದಾನ ಮಾಡದಿರುವುದು ಏನನ್ನು ಹೇಳುತ್ತದೆ ಎಂಬುದನ್ನು ಗುರುತಿಸುವ ಸೂಕ್ಷ್ಮತೆ ರಾಜಕಾರಣಿಗಳಿಗೆ ಬೇಕು, ಅವರಿಗೆ ಮತದಾರರಿಗಿಂತ ಹೆಚ್ಚಾಗಿ ರಾಜಕೀಯ ವ್ಯವಸ್ಥೆಯ ಬಗ್ಗೆ ಹೆಚ್ಚು ಅನುಮಾನ ಬರಬೇಕು, ರಾಜಕಾರಣಿಗಳು ಜನರನ್ನು ಮತಗಟ್ಟೆಗಳಿಗೆ ತರುವುದಕ್ಕೆ ತಂತ್ರ ಮಾಡಬಾರದು, ಜನರು ಮತಗಟ್ಟೆಗಳಿಗೆ ಬರುವುದಕ್ಕೆ ಏಕೆ ಹಿಂಜರಿಯುತ್ತಿದ್ದಾರೆ ಎನ್ನುವುದರ ಬಗ್ಗೆ ಚಿಂತಿಸಬೇಕು ಎಂಬ ಹತ್ತಾರು ರೀತಿಯ ಟೀಕೆಗಳೂ ಇವೆ. ಆದರೆ ಜನರಿಗೆ ರಾಜಕಾರಣಿಗಳ ಬಗ್ಗೆ ನಂಬಿಕೆ ಇಲ್ಲದಿದ್ದರೂ ಪರವಾಗಿಲ್ಲ, ಚುನಾವಣೆ ವ್ಯವಸ್ಥೆಯ ಬಗ್ಗೆ ನಂಬಿಕೆ ಇರಬೇಕು, ಅದನ್ನು ಮೂಡಿಸಲು ಕಡ್ಡಾಯ ಮತದಾನ ಬೇಕು ಎಂಬ ಉತ್ತರ ಅದಕ್ಕಿದೆ.ಕಡ್ಡಾಯ ಮತದಾನಕ್ಕೆ ಎಷ್ಟು ವಿರೋಧ ಇದೆಯೋ ಅಷ್ಟೇ ಬೆಂಬಲವೂ ಇರುವುದು ಸಾರ್ವಜನಿಕ ಸಂವಾದದ ಶಕ್ತಿ ಮತ್ತು ಜೀವಂತಿಕೆಯನ್ನು ಎತ್ತಿ ತೋರಿಸುತ್ತಿದೆ. ಮತದಾನ ಕಡ್ಡಾಯವಾದರೆ ಚುನಾವಣೆ ಸಮಯದ ಅಕ್ರಮಗಳು ಕಡಿಮೆ ಆಗುತ್ತವೆ, ಈಗ ಮತದಾನಕ್ಕೆ ಬರುವ ಕಡಿಮೆ ಜನರನ್ನು ತನ್ನತ್ತ ಸೆಳೆಯಲು ಅಭ್ಯರ್ಥಿ ಮುಂದಿಡುವ ಆಮಿಷಗಳು ಆಗ ಅನಗತ್ಯವಾಗುತ್ತವೆ ಎಂಬಂಥ ಆಸೆಗಳೂ ನಮ್ಮ ದೇಶದಲ್ಲಿ ಇರುವುದು ಸುಳ್ಳಲ್ಲ. ಕಡ್ಡಾಯ ಮತದಾನದ ಮೂಲಕ ಸಿಗುವ ಜನಬೆಂಬಲ, ಜನಬಲವಾಗಿ ಪರಿವರ್ತನೆ ಹೊಂದುತ್ತದೆ ಎಂದು ಹಲವು ದೇಶಗಳು ನಂಬುತ್ತವೆ. ಅದಕ್ಕಾಗಿ ತಮ್ಮ ಸಂವಿಧಾನ-ಸಂಹಿತೆಗಳಲ್ಲಿ ಅಲ್ಪಸ್ವಲ್ಪ ತಿದ್ದುಪಡಿ ಮಾಡಲು ಅವು ಹಿಂಜರಿದಿಲ್ಲ. ನಾವಂತೂ ಸಂವಿಧಾನವನ್ನು ಈಗಾಗಲೇ 98 ಹೆಚ್ಚು ಬಾರಿ ತಿದ್ದುಪಡಿ ಮಾಡಿದ್ದೇವೆ. ‘ನಾನು ಎಷ್ಟು ಬೇಕಾದರೂ ಹಣ ಸಂಪಾದಿಸುತ್ತೇನೆ, ನನ್ನ ಸಂಪಾದನೆಗೆ ಸರ್ಕಾರಕ್ಕೇಕೆ ತೆರಿಗೆ ಕೊಡಲಿ?’ ಎಂದು ಕೇಳುವುದು ಹೇಗೆ ಅಸಂಬದ್ಧವೋ ಹಾಗೆಯೇ ದೇಶದ ವ್ಯವಸ್ಥೆ ನೀಡುವ ಸಕಲ ಸವಲತ್ತುಗಳನ್ನು ಅನುಭವಿಸುವ ವ್ಯಕ್ತಿ ‘ನಾನೇಕೆ ಮತ ಹಾಕಲಿ?’ ಎಂದು ಕೇಳುವುದೂ ಅಸಂಬದ್ಧ ಎನ್ನುವ ಪ್ರಬಲ ಬೆಂಬಲವೂ ಕಡ್ಡಾಯ ಮತದಾನಕ್ಕೆ ಸಿಕ್ಕಿದೆ. ಮತದಾನ ಕಡ್ಡಾಯ ಮಾಡಿ ತಪ್ಪಿದವರಿಗೆ ಶಿಕ್ಷೆ ವಿಧಿಸಿದರೆ, ಕೋಟ್ಯಂತರ ಜನ ಹಿಡಿಸುವ ಸೆರೆಮನೆಗಳೆಲ್ಲಿವೆ ಎಂಬ ಕೆಲವರ ಆತಂಕಕ್ಕೆ ಆಧಾರವಿಲ್ಲ. ಒಂದೊಮ್ಮೆ ಮತದಾನ ಕಡ್ಡಾಯ ಕರ್ತವ್ಯ ಎಂದಾಗಿಬಿಟ್ಟು ಮತದಾರ ಮತಗಟ್ಟೆಗೆ ಬಂದೇ ಬರಬೇಕಾದರೂ, ಯಾರಿಗೂ ಮತ ಹಾಕದಿರುವ ಹಕ್ಕು ಮತಯಂತ್ರದ ‘ನೋಟ’ ದಲ್ಲಿ ಢಾಳಾಗಿ ಕಾಣಿಸುತ್ತಿದೆಯಲ್ಲ! ಕರ್ತವ್ಯಪಾಲನೆಯಲ್ಲೂ ಹಕ್ಕು ಇರುವುದು ನಮ್ಮ ಪ್ರಜಾಪ್ರಭುತ್ವದ ವಿಶೇಷ.
- ಶಿವನಗೌಡ ಪೊಲೀಸ್ ಪಾಟೀಲ
ಕೊಪ್ಪಳ
9845646370