ಹೂಲಿಕಟ್ಟಿಯಲ್ಲಿ ವಾಂತಿಬೇಧಿ ಪ್ರಕರಣ
ಸವದತ್ತಿ 22: ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ಕಳೆದೆರಡು ದಿನದಲ್ಲಿ ಸುಮಾರು 6 ರಿಂದ 7 ವಾಂತಿ ಬೇಧಿ ಪ್ರಕರಣಗಳು ಕಂಡು ಬಂದಿದ್ದು, ಸೋಮವಾರ ಮಧ್ಯರಾತ್ರಿ 1 ರಿಂದ 2 ಗಂಟೆ ಸುಮಾರಿಗೆ ಒಟ್ಟು 13 ರೋಗಿಗಳು ತೀವ್ರತರದ ವಾಂತಿ ಬೇಧಿಗೆ ತುತ್ತಾಗಿ ರಾತ್ರಿ ವೇಳೆಯೇ ತಾಲೂಕಾ ಸಾರ್ವಜನಿಕ ಆಸ್ಪತ್ರೆ ಹಾಗೂ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಯಕ್ಕೇರಿ ಕರೆಮ್ಮದೇವಿ ಮತ್ತು ಹೂಲಿಕಟ್ಟಿ ಗ್ರಾಮದ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಸೋಮವಾರ ಕರೆಮ್ಮ ದೇವಿ ಗ್ರಾಮ ಪ್ರದಕ್ಷಿಣೆಗೆಂದು ಬರುವಿಕೆಗಾಗಿ ಗ್ರಾಮರ ಪ್ರತಿ ಕುಟುಂಬದಲ್ಲಿ ಸಂಪ್ರದಾಯದಂತೆ ವಿಶೇಷವಾಗಿ ಹೋಳಿಗೆ ಹಾಗೂ ಮಾವಿನ ಹಣ್ಣಿನ ಸಿಹಿ ಖಾದ್ಯ ತಯಾರಿಸಲಾಗಿದೆ. ಇದನ್ನು ಸೇವಿಸಿದ ಗ್ರಾಮಸ್ಥರಲ್ಲಿ ವಾಂತಿ ಬೇಧಿ ಲಕ್ಷಣ ಕಂಡು ಬಂದಿದೆ.
13 ಜನರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನುಳಿದ 11 ಜನರಲ್ಲಿ ಕೆಲವರಿಗೆ ರಕ್ತದೊತ್ತಡ ಕಡಿಮೆಯಾಗಿದ್ದು ಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುವ ಲಕ್ಷಣಗಳು ಕಂಡುಬಂದಿವೆ. ವಾಂತಿ ಬೇಧಿಗೆ ತುತ್ತಾದ ಈ 13 ಜನರಲ್ಲಿ 6 ವರ್ಷದ ಬಾಲಕಿ ಸೇರಿ ವಯೋವೃದ್ಧರೂ ಇದ್ದಾರೆ. ಸ್ಥಳಕ್ಕೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಸಂಜಯ ದೊಡಮನಿ, ಟಿಎಚ್ಒ ಶ್ರೀಪಾದ ಸಬನೀಸ್ ಹಾಗೂ ಪ್ರಮುಖ ಅಧಿಕಾರಿಗಳು ಭೇಟಿ ನೀಡಿ ಪರೀಶೀಲಿಸಿದ್ದಾರೆ.
ಆಹಾರ ಮತ್ತು ನೀರನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಅನುಸಾರ ಪ್ರಕರಣಗಳ ಕುರಿತು ನಿಖರ ಮಾಹಿತಿ ತಿಳಿಯಲಿದೆ ಎಂದು ಮುಖ್ಯ ವೈದ್ಯಾಧಿಕಾರಿ ಎಚ್.ಎಮ್. ಮಲ್ಲನಗೌಡರ ತಿಳಿಸಿದರು.