ಕಾರವಾರ

ಮುಂಡಗೋಡದಲ್ಲಿ ಸ್ವಚ್ಛತಾ ಶ್ರಮದಾನ

ಮುಂಡಗೋಡದಲ್ಲಿ ಸ್ವಚ್ಛತಾ ಶ್ರಮದಾನ


ಮುಂಡಗೋಡ 02:  ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ‘ಸ್ವಚ್ಛತಾ ಹೀ ಸೇವಾ’ ಅಭಿಯಾನದಡಿ “ಒಂದು ದಿನ, ಒಂದು ಗಂಟೆ, ಎಲ್ಲರೂ ಒಟ್ಟಿಗೆ ಶ್ರಮದಾನ” ಘೋಷವಾಕ್ಯದೊಂದಿಗೆ ತಾಲೂಕು ಕ್ರೀಡಾಂಗಣದಲ್ಲಿ ಬೃಹತ್ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.  ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಟಿ.ವಾಯ್‌. ದಾಸನಕೊಪ್ಪ ಹಾಗೂ ತಹಶೀಲ್ದಾರ್ ಎ.ಎಸ್‌. ಪ್ರಸಾದ್ ಅವರ ನೇತೃತ್ವದಲ್ಲಿ ತಾಲೂಕು ಪಂಚಾಯತ್ ಮತ್ತು ಪಟ್ಟಣ ಪಂಚಾಯತ್ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆರಂಭದಲ್ಲಿ ಸ್ವಚ್ಛತೆ ಹಾಗೂ ‘ಸ್ವಚ್ಛ ಭಾರತ’ ನಿರ್ಮಾಣದ ಕುರಿತು ಪ್ರತಿಜ್ಞೆ ಸ್ವೀಕರಿಸಲಾಯಿತು. ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ‘ಬೆಳಕು ತಂಡ’ ಹಾಗೂ ಶಾಲಾ ವಿದ್ಯಾರ್ಥಿಗಳು ಎರಡು ಗಂಟೆಗೂ ಹೆಚ್ಚು ಕಾಲ ಶ್ರಮದಾನ ಮಾಡಿ ಕ್ರೀಡಾಂಗಣದಲ್ಲಿದ್ದ ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಕಸಕಡ್ಡಿಗಳನ್ನು ತೆರವುಗೊಳಿಸಿದರು. ಇದೇ ವೇಳೆ ನಗರದ ಸ್ವಚ್ಛತೆಗಾಗಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.  ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸುಮಾ ಜಿ. ಪಶುಸಂಗೋಪನಾ ಇಲಾಖೆಯ ಕೃಷ್ಣಮೂರ್ತಿ ಹೆಗಡೆ, ಆರೋಗ್ಯ ಇಲಾಖೆಯ ಶ್ರೀಶೈಲ ಪಟ್ಟಣಶೆಟ್ಟಿ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. 


ಸುದ್ದಿ ಓದಿ