ಬರಪೀಡಿತ ತಾಲೂಕು ಘೋಷಣೆಗೆ ರೈತರ ಮನವಿ
ಲೋಕದರ್ಶನ ವರದಿ
ದಾಂಡೇಲಿ 01 : ತಾಲೂಕಿನಲ್ಲಿ ನೀರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭತ್ತ, ಕಬ್ಬು ಹಾಗೂ ತರಕಾರಿ ತೋಟಗಾರಿಕೆ ಬೆಳೆಗಳು ನೀರಿನ ಕೊರತೆಯಿಂದ ಒಣಗಿ ಅಪಾರ ನಷ್ಟ ಉಂಟಾಗಿದೆ. ಕೃಷಿ ಚಟುವಟಿಕೆಗಳಿಗಾಗಿ ವಿವಿಧ ಸಹಕಾರಿ ಬ್ಯಾಂಕ್ಗಳಿಂದ ಸಾಲ ಪಡೆದಿರುವ ರೈತರು, ಬೆಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಸಾಲ ಮರುಪಾವತಿಸಲು ಸಾಧ್ಯವಾಗದೆ ಸಂಕಷ್ಟದಲ್ಲಿದ್ದಾರೆ.
ಮಳೆ ಕೊರತೆಯಿಂದ ಕೆರೆ-ಹಳ್ಳಗಳು ಬತ್ತುತ್ತಿದ್ದು, ಅಂತರ್ಜಲ ಮಟ್ಟವೂ ಕುಸಿಯುತ್ತಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗುವ ಆತಂಕವಿದೆ. ಈ ಹಿನ್ನೆಲೆಯಲ್ಲಿ ದಾಂಡೇಲಿ ತಾಲೂಕನ್ನು ಅಧಿಕೃತವಾಗಿ ಬರಪೀಡಿತ ಪ್ರದೇಶವೆಂದು ಘೋಷಿಸಿ, ಕೃಷಿ ಸಾಲ ಮನ್ನಾ, ಹೊಸ ಬೆಳೆ ಸಾಲ ಸೌಲಭ್ಯ, ಬರ ಪರಿಹಾರ ಕಾಮಗಾರಿಗಳು ಹಾಗೂ ಜಾನುವಾರುಗಳಿಗೆ ಸಮರ್ಕ ಮೇವು ಮತ್ತು ನೀರಿನ ವ್ಯವಸ್ಥೆ ಕಲ್ಪಿಸುವಂತೆ ರೈತರು ಒತ್ತಾಯಿಸಿದ್ದಾರೆ. ಈ ಕುರಿತು ರೈತರು ತಹಶೀಲ್ದಾರ್ ಮೂಲಕ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ವಾಮನ ನಾರಾಯಣ ಮಿರಾಶಿ ಸೇರಿದಂತೆ ಮಾರೂತಿ ಕಾಂಬ್ರೇಕರ್, ಗೀರೀಶ್ ಟೋಸೂರ್, ಲಕ್ಷ್ಮಣ ಜಾಧವ್, ಪುಂಡಲೀಕ ಕಾಂಬ್ರೇಕರ್ ಮತ್ತಿತರರು ಉಪಸ್ಥಿತರಿದ್ದರು.