ವನ್ಯಜೀವಿ ಸಪ್ತಾಹ: ಕಾಳಿ ನದಿ ಸಂಗಮ ಕ್ಷೇತ್ರದಲ್ಲಿ 1,825 ಕೆ.ಜಿ. ತ್ಯಾಜ್ಯ ಸಂಗ್ರಹ
ಲೋಕದರ್ಶನ ವರದಿ
ಕಾರವಾರ 2: 72ನೇ ವನ್ಯಜೀವಿ ಅಂಗವಾಗಿ ಕಾಳಿ ನದಿ ಸಂಗಮ ಕ್ಷೇತ್ರದಲ್ಲಿ ಶುಕ್ರವಾರ ಬೃಹತ್ ಸ್ವಚ್ಛತಾ ಅಭಿಯಾನ ನಡೆಸಲಾಯಿತು. ಕಡಲತೀರದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್, ಗಾಜಿನ ತ್ಯಾಜ್ಯ, ಮೀನುಬಲೆ, ಡೈಪರ್, ನ್ಯಾಪ್ಕಿನ್, ರಬ್ಬರ್ ಸೇರಿದಂತೆ ವಿವಿಧ ಘನ ತ್ಯಾಜ್ಯಗಳನ್ನು ಸಂಗ್ರಹಿಸಿ ಒಟ್ಟು 1,825 ಕೆ.ಜಿ. ತ್ಯಾಜ್ಯವನ್ನು ತೆರವುಗೊಳಿಸಲಾಯಿತು. ಅರಣ್ಯ ಇಲಾಖೆಯ ಸುಮಾರು 150 ಸಿಬ್ಬಂದಿ, ರೋಟರಿ ಕ್ಲಬ್ನ 40 ಸದಸ್ಯರು ಹಾಗೂ ಅಗ್ನಿವೀರ ತರಬೇತಿಯ 40 ಅಭ್ಯರ್ಥಿಗಳು ಅಭಿಯಾನದಲ್ಲಿ ಪಾಲ್ಗೊಂಡು ಸ್ವಚ್ಛತಾ ಕಾರ್ಯ ಕೈಗೊಂಡರು.
ಅಭಿಯಾನದ ಬಳಿಕ ಜಿಲ್ಲಾಧಿಕಾರಿ ಕಚೇರಿಯಿಂದ ಜಾಥಾ ನಡೆಸಿ, ನಂತರ ‘ವನಸಿರಿ’ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಕಾರವಾರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಟೋನಿ ಮರಿಯಪ್ಪ, ಸಾಮಾಜಿಕ ಅರಣ್ಯ ವಿಭಾಗದ ಡಿಎಫ್‌ಒ ಮಂಜುನಾಥ್ ನಾವಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಡಿ. ನಾಯಕ್, ರೋಟರಿ ಕ್ಲಬ್ ಅಧ್ಯಕ್ಷ ಡಾಲ್ವಿಚ್, ಕಾರವಾರ ವಲಯ ಅರಣ್ಯಾಧಿಕಾರಿ ಕಿರಣ್ ಮಾನವಚಾರಿ ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.