ವಿಠ್ಠಲಸಿಂಗ್ ಅವರಿಗೆ ಸಹಕಾರ ರತ್ನ ಪ್ರಶಸ್ತಿ ಗರಿ
ತಾಳಿಕೋಟೆ 15: ಪಟ್ಟಣದ ದಿ.ತಾಳಿಕೋಟೆ ಸಹಕಾರಿ ಬ್ಯಾಂಕ್ ನಿಯಮಿತದ ಅಧ್ಯಕ್ಷ, ಸಹಕಾರಿ ದುರೀಣ ವಿಠ್ಠಲಸಿಂಗ ಅಮರಸಿಂಗ ಹಜೇರಿ ಅವರಿಗೆ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ಬೆಂಗಳೂರು ನೀಡುವ ಸಹಕಾರ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪಟ್ಟಣದ ಹಿರಿಯರಾದ ವಿಠ್ಠಲಸಿಂಗ ಹಜೇರಿ ಅವರು ಸಹಕಾರ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸುದೀರ್ಘ 40 ವರ್ಷ ಸೇವೆ ಸಲ್ಲಿಸಿದ್ದಾರೆ. 1960ರಲ್ಲಿ ಸ್ಥಾಪನೆಯಾದ ದಿ.ತಾಳಿಕೋಟೆ ಸಹಕಾರಿ ಬ್ಯಾಂಕ್ನ 1996-97ನೇ ಸಾಲಿನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಅಲ್ಲಿಂದ ಇಲ್ಲಿಯವರೆಗೂ ಸೇವೆ ಸಲ್ಲಿಸುತ್ತ ಬ್ಯಾಂಕ್ ಎಳೆಗೆಗೆ ಶ್ರಮಿಸುತ್ತ ಬಂದಿದ್ದಾರೆ. ಅಲ್ಲದೇ ಅಡತ್ ಮರ್ಚಂಟ್ ಅಸೋಶಿಯೇಷನ್ ಅಧ್ಯಕ್ಷರಾಗಿ ಕಳೆದ 10 ವರ್ಷಗಳಿಂದಲೂ ಸಾರ್ಥಕ ಸೇವೆ ಮಾಡುತ್ತ ಬಂದಿರುವ ಇವರು, ಕಳೆದ 60 ವರ್ಷಗಳಿಂದ ನಗರದ ಗಣ್ಯ ವರ್ತಕರಾಗಿ ಅನೇಕ ಜವಾಬ್ದಾರಿ ನಿರ್ವಹಣೆ ಮಾಡುತ್ತ ಸಾಗಿದ್ದಾರೆ. ವಿದ್ಯಾಭಾರತಿ, ಮಾಧವ ಶಿಶು ಮಂದಿರ, ವಿದ್ಯಾಭಾರತಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಗಳನ್ನು ಜ್ನಾನ ಭಾರತಿ ಅಡಿಯಲ್ಲಿ ಸ್ಥಾಪಿಸಿ, ಶಿಕ್ಷಣ ಹಾಗೂ ಸಹಕಾರಿ ಸಂಘಗಳಲ್ಲಿ ಛಾಪು ಮೂಡಿಸಿದ್ದಾರೆ. ಸ್ಥಳೀಯ ಮರಾತನ ಪಾಂಡುರಂಗ ವಿಠಲ ದೇವಸ್ಥಾನದ ಸಂಪೂರ್ಣ ಜೀರ್ಣೋದ್ದಾರ ಕಾರ್ಯ ಕೈಗೆತ್ತಿಕೊಂಡು, ದೇವಾಲಯ ಕಡೆಗೆ ಭಕ್ತ ಸಮೂಹದ ಮನಸೆಳೆಯುವಂತೆ ಮಾಡಿರುವುದು ಜನಮೆಚ್ಚುಗೆಗೆ ಪಾತ್ರವಾಗಿದೆ. ಪಟ್ಟಣದ ಹಿರಿಯರಾದ ಇವರು, ತಾಳಿಕೋಟಿ ಭಾಗದ ಸುಮಾರು 60 ಗ್ರಾಮಗಳಲ್ಲಿ ಗಣ್ಯಮಾನ್ಯರು, ಸಹಕಾರಿ ಸಂಘಕ್ಕೆ ಸಂಬಂಧಿಸಿದ ವರ್ಗಕ್ಕೆ ಪ್ರೀತಿಗೆ ಪಾತ್ರರಾಗಿದ್ದಾರೆ.