ರೇಬಿಸ್ಗೆ ನಾಟಿ ಓಷಧಿ ಮಾಡಿಕೊಳ್ಳದೆ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ: ಡಾ.ಇಂಗಳೆ
ಲೋಕದರ್ಶನ ವರದಿ
ಮುಂಡಗೋಡ:ರೇಬಿಸ್ ಒಂದು ಮಾರಣಾಂತಿಕ ರೋಗ ಇದನ್ನು ತಡೆಗಟ್ಟಬಹುದಾಗಿದೆ ಎಂದು ಆಡಳಿತ ವೈದ್ಯಾಧಿಕಾರಿ ಎಚ್.ಎಫ್.ಇಂಗಳೆ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆಡಳಿತ, ತಾಲೂಕು ಪಂಚಾಯತ, ತಾಲೂಕಾ ಆರೋಗ್ಯಾಧಿಕಾರಿಗಳು ಸರ್ಕಾರಿ ಪದವಿಪೂರ್ವ ಕಾಲೇಜ್ ಮತ್ತು ಪಶುಸಂಗೋಪನಾ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ರೇಬಿಸ್ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವೈರಾಣುಗಳು ನಾಯಿ ಮತ್ತು ಇತರ ಕೆಲವು ಪ್ರಾಣಿಗಳ ಜೊಲ್ಲಿನಿಂದ ಮನಿಷ್ಯನಿಗೆ ಕಚ್ಚುವುದರ ಮೂಲಕ ಹರಡುವ ಮಾರಣಾಂತಿಕ ಕಾಯಿಲೆ. ನಾಯಿ ಕಚ್ಚಿದಾಗ ತಡಮಾಡದೆ ಗಾಯವನ್ನು ಸಾಬೂನು ಮತ್ತು ಹರಿಯುವ ನೀರಿನಿಂದ ಕನಿಷ್ಠ 5ನಿಮಿಷ ತೊಳೆಯಬೇಕು. ಗಾಯದ ಮೇಲೆ ಏನನ್ನೂ ಹಚ್ಚಬಾರದು. ಬಟ್ಟೆ ಕಟ್ಟಬಾರದು. ನಾಟಿ ಓಷಧಿ ಮಾಡಿಕೊಳ್ಳದೆ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಯ್ಯಾಂಟಿ ರೇಬಿಸ್ ವ್ಯಾಕ್ಸಿನ್(ಎ.ಆರ್.ವಿ.) ನಿಗದಿತ ಸಮಯದಲ್ಲಿ ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಬಿಪಿಎಲ್ ಕಾರ್ಡುದಾರರಿಗೆ ಉಚಿತವಾಗಿ ವ್ಯಾಕ್ಸಿನ್(ಎ.ಆರ್.ವಿ.) ನೀಡಲಾಗುವುದು ಮತ್ತು ಎಪಿಎಲ್ ಕಾರ್ಡುದಾರರಿಗೆ 100ರೂ. ಇರುತ್ತದೆ. ನಾಯಿಗಳು ಕಚ್ಚಿದಾಗ ಕಚ್ಚಿದ ನಾಯಿಗಳ ಮೇಲೆ ನಿಗಾ ಇಡಬೇಕು. ಹುಚ್ಚು ಹಿಡಿದಿರುವ ಲಕ್ಷಣಗಳು ಇದ್ದರೆ ಅಂತಹ ನಾಯಿ ಕಚ್ಚಿದವರಿಗೆ ಪ್ರತ್ಯೇಕ ವ್ಯಾಕ್ಸಿನೇಷನ್ ಇರುತ್ತದೆ. ಅದನ್ನು ಅನುಸರಿಸಬೇಕು. ಜೊಲ್ಲು ಸೋರಿಸುವುದು, ಬೆಳಕು ನೀರು ನೋಡಿದಾಗ ಭಯಪಡುವುದು ರೇಬಿಸ್ ರೋಗದ ಲಕ್ಷಣಗಳು ಎಂದರು.
ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಕೃಷ್ಣಮೂರ್ತಿ ಹೆಗಡೆ ಮಾತನಾಡಿ ರೇಬಿಸ್ ಮಾರಣಾಂತಿಕವಾದರೂ ಜಾಗೃತಿಯಿಂದ ಮರಣವನ್ನು ತಡೆಗಟ್ಟಬಹುದು. ಬೀದಿ ನಾಯಿಗಳಿಂದ ಅಂತರ ಕಾಯ್ದುಕೊಳ್ಳಬೇಕು. ಅವುಗಳನ್ನು ಚೇಡಿಸಬಾರದು ಎಂದರು. ಪ.ಪಂ.ಅಧ್ಯಕ್ಷೆ ಜಯಸುಧಾ ಭೋವಿವಡ್ಡರ ಕಾರ್ಯಕ್ರಮ ಉದ್ಘಾಟಿಸಿದರು. ಉಪಾಧ್ಯಕ್ಷ ಶ್ರೀಕಾಂತ ಸಾನು, ಪ.ಪಂ.ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠ, ಉಪನ್ಯಾಸಕ ಮೇಘರಾಜ, ಸತೀಶ ಕುಂಬಾರ ಉಪಸ್ಥಿತರಿದ್ದರು. ಶಾಲಾ ಮಕ್ಕಳು ಪ್ರಾರ್ಥಿಸಿದರು. ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಎಸ್.ಪಟ್ಟಣಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸರ್ಕಾರಿ ಪದವಿಪೂರ್ವ ಕಾಲೇಜ್ನ ಪ್ರಾಂಶುಪಾಲ ಜಿ.ಟಿ.ಕಡೇಮನಿ ವಂದಿಸಿದರು.