ವಕೀಲರ ಮೇಲೆ ಮಾನವ ಹಕ್ಕುಗಳ ಉಲ್ಲಂಘನೆ ನಾಗರಿಕ ಸಮುದಾಯಕ್ಕೆ ಅವಮಾನ: ಬಿ.ಜಯರಾಮ್
ಬಳ್ಳಾರಿ 30: ರಂದು ನಡೆದ ನಗರದಲ್ಲಿ ಇಂದಿನ ಆಧುನಿಕ ಪ್ರಪಂಚದಲ್ಲಿ ತಂತ್ರಜ್ಞಾನ ಮತ್ತು ನಾಗರಿಕತೆ ತುಂಬಾ ವೇಗವಾಗಿ ಬೆಳೆಯುತ್ತಿದ್ದು, ಸುಶೀಲಾನಗರದಲ್ಲಿ ವಕೀಲರ ಮೇಲೆ ಮಾನವ ಹಕ್ಕುಗಳ ಉಲ್ಲಂಘನೆಯಾಗಿರುವುದು ನಾಗರಿಕ ಸಮುದಾಯ ತಲೆತಗ್ಗಿಸಬೇಕಾದಂಥ ವಿಚಾರವಾಗಿದೆ. ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಸರ್ಕಾರಿ ಅಧಿಕಾರಿಗಳು ಒಳಗೊಂಡಂತೆ ಎಲ್ಲರೂ ಕೈ ಜೋಡಿಸಬೇಕೆಂದು ಹಿರಿಯ ವಕೀಲರಾದ ಬಿ.ಜಯರಾಮ್ ತಿಳಿಸಿದ್ದಾರೆ.
ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನದಲ್ಲಿ ದಂಡ ಕಟ್ಟಿಸಿಕೊಳ್ಳುವ ಅಧಿಕಾರ ಕೇವಲ ಕಾನೂನಿಗೆ ಮಾತ್ರ ಇದೆ. ಜನರ ಯಾವುದೇ ಸಮಸ್ಯೆಗಳಿಗೆ ಪಂಚಾಯಿತಿ ಮಾಡಿ ಹಣದ ರೂಪದಲ್ಲಿ ದಂಡ ಪಡೆಯುವುದು, ಹೆದರಿಸುವುದು, ಅವರ ಕುಟುಂಬದವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸುವುದು, ಕೊಲೆ ಬೆದರಿಕೆ ಒಡ್ಡುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಇಂತಹ ಪ್ರಕರಣಗಳು ನಡೆಯದಂತೆ 1993ರಲ್ಲಿ ಈ ಕಾಯ್ದೆ ಜಾರಿಯಾಗಿದ್ದು, ದಂಡ ಕಟ್ಟಿಸಿಕೊಳ್ಳುವವರ ವಿರುದ್ಧ ಯಾರು ಬೇಕಾದರೂ ದೂರು ನೀಡಬಹುದು. ವ್ಯಕ್ತಿಯ ಮಾನ ಹರಾಜು, ಆಸ್ತಿ ನಷ್ಟ ಆದಾಗ ಮಾನವ ಹಕ್ಕುಗಳ ಕಾಯ್ದೆ ಉಲ್ಲಂಘನೆಯಡಿ ದೂರು ನೀಡಿದಲ್ಲಿ ಪೊಲೀಸರು, ಸರ್ಕಾರಿ ಅಧಿಕಾರಿಗಳು, ವಕೀಲರು, ಪತ್ರಕರ್ತರು ಎಲ್ಲರೂ ಕೈ ಜೋಡಿಸಿ ಇಂತಹ ಅನಿಷ್ಟ ಪದ್ಧತಿಯನ್ನು ನಿರ್ಮೂಲನೆ ಮಾಡಲು ಮುಂದಾಗಬೇಕೆಂದು ಹೇಳಿದರು.
ವಕೀಲ ಡಿ.ಮಲ್ಲಿಕಾರ್ಜುನ ಅವರು ನ್ಯಾಯವಾದಿಯಾಗಿದ್ದು ಅವರ ಗ್ರಾಮದಲ್ಲಿ ರೂ.2500 ದಂಡ ವಸೂಲಿ ಮಾಡಿದ್ದಲ್ಲದೆ, ಕೊಲೆ ಬೆದರಿಕೆ ನೀಡಿರುವುದು ಅಕ್ಷಮ್ಯ. ಕೊಲೆ ಬೆದರಿಕೆ ನೀಡಿದವರೊಂದಿಗೆ ಪೊಲೀಸರು ಸಮಾರಂಭಗಳಲ್ಲಿ ಗುರುತಿಸಿಕೊಂಡು, ಕೇಕ್ ಕತ್ತರಿಸಿ ಅವರೊಂದಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಶೋಭೆಯಲ್ಲ ಎಂದರು.
ಸಮಾಜದಲ್ಲಿ ಅಶಾಂತಿ ಸೃಷ್ಟಿಸುವವರೊಂದಿಗೆ ಪೊಲೀಸರು ಗುರುತಿಸಿಕೊಂಡರೆ ಇನ್ನು ಸಾಮಾನ್ಯರ ರಕ್ಷಣೆ ಯಾರ ಹೊಣೆ? ಇದರಿಂದ ಇಡೀ ಪೊಲೀಸ್ ಇಲಾಖೆಯ ಬಗ್ಗೆ ಸಾರ್ವಜನಿಕರು ಅನುಮಾನ ಪಡುವಂತಾಗುತ್ತದೆ. ರೌಡಿ ಶೀಟರ್ಗಳನ್ನು ಕರೆದು ಪಕ್ಕ ಕೂಡಿಸಿಕೊಂಡು ನ್ಯಾಯದಿಂದ ವಂಚಿತರಾದವರಿಗೆ ಭಯ ಬೀಳಿಸುವುದು ಪೊಲೀಸರಿಗೆ ಸಮಂಜಸವಲ್ಲ. ಇದರ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು, ನಾಗರಿಕರು, ಶಿಕ್ಷಣವಂತರು ಖಂಡಿಸಬೇಕೆಂದರು. ನ್ಯಾಯವಾದಿ ಡಿ.ಮಲ್ಲಿಕಾರ್ಜುನ ಅವರು ಮಾತನಾಡಿ, ಸುಶೀಲಾನಗರದಲ್ಲಿ ತಮಗೆ ಮತ್ತು ತಮ್ಮ ಕುಟುಂಬದ ಮೇಲೆ ಆಗಿರುವ ದೌರ್ಜನ್ಯಗಳನ್ನು ಹೇಳಿದರು.
ತಮಗೆ ಪ್ರಾಣ ಬೆದರಿಕೆ ಇದ್ದು ಪೊಲೀಸ್ ಇಲಾಖೆ ರಕ್ಷಣೆ ನೀಡುವಂತೆ ಹೇಳಿದರು. ಸುಶೀಲಾನಗರದಲ್ಲಿ ಗ್ರಾಮದ ಅಭಿವೃದ್ಧಿಗೆ ಸಂಬಂಧಿಸಿದಂತೆ ನ್ಯಾಯಯುತ ಹೋರಾಟ ಮಾಡಲು ತೆರಳಿದಾಗ ಕೆಲವರು ತಮಗೆ ಪ್ರಾಣ ಬೆದರಿಕೆ ಹಾಕಿದ್ದಾರೆ. ಕುಟುಂಬ ಸದಸ್ಯರ ಮೇಲೂ ದಾಳಿ ಮಾಡಿದ್ದಾರೆ. ಸತತ 14 ವರ್ಷಗಳಿಂದ ವಿಪರೀತ ಕಿರುಕುಳ ನೀಡಿದ್ದಲ್ಲದೆ, ದಂಡ ಪಡೆದುಕೊಂಡು ಗ್ರಾಮ ತೊರೆಯುವಂತೆ ಮಾಡಿದ್ದಾರೆ. ಈ ಕುರಿತು ನಾನು ನ್ಯಾಯಾಲಯದ ಮೊರೆ ಹೋಗಿದ್ದೇನೆ. ನನಗೆ ನ್ಯಾಯಾಲಯದಿಂದ ನ್ಯಾಯ ದೊರೆಯತ್ತದೆ ಎನ್ನುವ ದೃಢವಿಶ್ವಾಸ ಇದೆ. ಈ ಕುರಿತು ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿಗಳ ಜೊತೆಯೂ ಹಲವಾರು ಬಾರಿ ಮನವಿ ಮಾಡಿದ್ದೇನೆ. ನನ್ನ ಮತ್ತು ನನ್ನ ಕುಟುಂಬದ ಮೇಲೆ ಆಗಿರುವ ಅವಮಾನ, ದೌರ್ಜನ್ಯಗಳಿಗೆ ಕಾರಣರಾದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ನನಗಾದಂತೆ ಬೇರೆ ಯಾರಿಗೂ ಇಂತಹ ಪರಿಸ್ಥಿತಿ ಬರಬಾರದು. ಗ್ರಾಮದಲ್ಲಿ ಇಂತಹ ಪ್ರಕರಣಗಳು ನಡೆಯಬಾರದು. ಇದಕ್ಕಾಗಿ ಧಾರವಾಡ ಉಚ್ಛ ನ್ಯಾಯಾಲಯದ ಆದೇಶದ ಮೇರೆಗೆ ಪಿಸಿಆರ್-01 ಆಫ್ 2020 ಪ್ರಕರಣದಲ್ಲಿ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೇ ತನಿಖೆಯನ್ನು ಮಾಡಬೇಕು ಎಂದು ಒತ್ತಾಯಿಸಿದರು.
ಈ ಸುದ್ದಿಗೋಷ್ಠಿಯಲ್ಲಿ ವಕೀಲರಾದ ಲಕ್ಷ್ಮಣ, ಮಲ್ಲೇಶ್ ನಾಯಕ, ಜಾಲಿಹಾಳ ಕೆ.ಗವಿಸಿದ್ಧಪ್ಪ ಇನ್ನಿತರರು ಇದ್ದರು.