“ವಿಜಯಾನಂದ” ಅ. 24ರಂದು ಮುಹೂರ್ತ
ಬೆಂಗಳೂರು, ಅ. 11: ಸಾರಿಗೆ, ಪತ್ರಿಕೋದ್ಯಮ ಸೇರಿ ಹಲವು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ವಿಆರ್ಎಲ್ ಸಂಸ್ಥೆ, ವಿಆರ್ಎಲ್ ಫಿಲಂ ಪ್ರೊಡಕ್ಷನ್ಸ್ ಮೂಲಕ ಮೊದಲ ಸಲ ಚಿತ್ರನಿರ್ಮಾಣಕ್ಕಿಳಿದಿದೆ. ಮೊದಲ ಕಾಣಿಕೆಯಾಗಿ ಪದ್ಮಶ್ರೀ ಪುರಸ್ಕೃತ ಮತ್ತು ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರ ಜೀವನ ಆಧರಿತ ಬಯೋಪಿಕ್ ‘ವಿಜಯಾನಂದ’ ಸಿದ್ಧವಾಗುತ್ತಿದೆ.
ಚಿತ್ರೀಕರಣ ಪೂರ್ವ ಕೆಲಸಗಳನ್ನು ಮುಗಿಸಿಕೊಂಡಿರುವ ‘ವಿಜಯಾನಂದ’ ತಂಡ ಕಲಾವಿದರ ಆಯ್ಕೆಯ ಕೊನೇ ಹಂತದಲ್ಲಿದೆ. ಇದು ಮುಗಿಯುತ್ತಿದ್ದಂತೆ ಇದೇ 24ರಂದು ಹುಬ್ಬಳ್ಳಿಯಲ್ಲಿ ಚಿತ್ರದ ಅದ್ದೂರಿ ಮುಹೂರ್ತ ಸಮಾರಂಭ ನಡೆಯಲಿದೆ. ಚಿತ್ರಕ್ಕೆ ರಿಶಿಕಾ ಶರ್ಮಾ ನಿರ್ದೇಶನ ಮಾಡಿದರೆ, ನಿಹಾಲ್ ರಜಪೂತ್ ನಾಯಕರಾಗಿ ನಟಿಸುತ್ತಿದ್ದಾರೆ. ಅನಂತ್ ನಾಗ್ ಚಿತ್ರದಲ್ಲಿ ವಿಜಯ್ ಸಂಕೇಶ್ವರ ಅವರ ತಂದೆಯ ಪಾತ್ರದಲ್ಲಿ ನಟಿಸಲಿದ್ದಾರೆ.
“ವಿಜಯಾನಂದ” ಚಿತ್ರದ ಇನ್ನಿತರ ಪಾತ್ರಗಳಿಗಾಗಿ ಈಗಾಗಲೇ ಮೆಗಾ ಆಡಿಷನ್ ನಡೆಸಲಾಗಿದ್ದು, ಸಾವಿರಾರು ಕಲಾವಿದರು ಆಗಮಿಸಿದ್ದರು. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ ಮಾತ್ರವಲ್ಲದೆ, ಸುತ್ತಲಿನ ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ, ಹಾಸನ ಜಿಲ್ಲೆಗಳಿಂದಲೂ ನಟನಾ ಆಕಾಂಕ್ಷಿಗಳು ಆಗಮಿಸಿ ತಮ್ಮ ಅಭಿನಯ ಚಾತುರ್ಯವನ್ನು ಪ್ರದರ್ಶಿಸಿದ್ದಾರೆ.