ಬಳ್ಳಾರಿ

ಹಿರೇಹೆಗ್ಡಾಳ್ ಜನರ ಸಮಸ್ಯೆಗಳಿಗೆ ದನಿಯಾದ ವಿಜಯನಗರ ಡಿಸಿ ಅನಿರುದ್ಧ ಶ್ರವಣ್

ಹಿರೇಹೆಗ್ಡಾಳ್ ಜನರ ಸಮಸ್ಯೆಗಳಿಗೆ ದನಿಯಾದ ವಿಜಯನಗರ ಡಿಸಿ ಅನಿರುದ್ಧ ಶ್ರವಣ್

ವಿಜಯನಗರ(ಹೊಸಪೇಟೆ) 16:  ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಕಾರ್ಯಕ್ರಮದ ನಿಮಿತ್ತ  ವಿಜಯನಗರ ಜಿಲ್ಲಾಧಿಕಾರಿಗಳಾದ ಅನಿರುದ್ಧ ಪಿ. ಶ್ರವಣ್ ಅವರು ಶನಿವಾರದಂದು ಕೂಡ್ಲಿಗಿ ತಾಲ್ಲೂಕಿನ ಹಿರೇಹೆಗ್ಡಾಳ್ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಗಳಿಗೆ ದನಿಯಾದರು. 

ಹಿರೇಹೆಗ್ಡಾಳ್ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರನ್ನು ಗ್ರಾಮಸ್ಥರು ಅತ್ಯಂತ ಪ್ರೀತಿಯಿಂದ ಗ್ರಾಮದೊಳಗೆ ಬರಮಾಡಿಕೊಂಡರು. 

ನಂತರ ಗ್ರಾಮದ ಎರಡು ವಾರ್ಡ್‌ಗಳ ಎಲ್ಲಾ ಬೀದಿಗಳಿಗೆ ಭೇಟಿ ನೀಡಿ ಮೂಲಭೂತ ಸೌಕರ್ಯಗಳ ಬಗ್ಗೆ ಪರೀಶೀಲನೆ ಮಾಡಿದರು. ಹಿರೇಹೆಗ್ಡಾಳ್ ಗ್ರಾಮದ ಈಶ್ವರ ದೇವಸ್ಥಾನದ ಮುಂಭಾಗದಿಂದ ಅಂಬೇಡ್ಕರ್ ಕಾಲೋನಿಯ ಆಶ್ರಯ ಬಡಾವಣೆಯಿಂದ ಪ.ಪಂಗಡದ ಕಾಲೋನಿಯಲ್ಲಿ ಭೇಟಿ ನೀಡಿ ಸಾರ್ವಜನಿಕರ ಸಮಕ್ಷಮದಲ್ಲಿ ಪರೀಶೀಲನೆ ನಡೆಸಿದರು. 

ಗ್ರಾಮಸ್ಥರು ಪಿಂಚಣಿ,ಮನೆ,ಚರಂಡಿ,ಕುಡಿಯುವ ನೀರು,ಪೋಡಿ,ಹದ್ದುಬಸ್ತು, ವಿವಿಧ ಮೂಲಸೌಕರ್ಯಗಳನ್ನು ಗ್ರಾಮಕ್ಕೆ ಕಲ್ಪಿಸುವಂತೆ ಕೇಳಿಕೊಂಡದ್ದು ಕಂಡುಬಂದಿತು. 

ಹಿರೇಹೆಗ್ಡಾಳ್ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಗ್ರಾಮದ ಸ.ಹಿ.ಪ್ರಾ.ಶಾಲೆ ಅಂಬೇಡ್ಕರ್ ನಗರದ ಶಾಲಾ ಕೊಠಡಿಗಳನ್ನು ಉದ್ಘಾಟಿಸಿದರು. 

ಸರ್ಕಾರಿ ಪ್ರೌಢಶಾಲಾ ಆವರಣದ ವೇದಿಕೆಯ ಎಡಭಾಗದಲ್ಲಿ ಸಂಬಂಧಪಟ್ಟ ಇಲಾಖೆಯ ಕೌಂಟರಿನಲ್ಲಿ ಸಾರ್ವಜನಿಕರಿಂದ ಅರ್ಜಿ ಸ್ವೀಕಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. 

ಪಿಂಚಣಿ ಹಾಗೂ ಇನ್ನೀತರ ಕೆಲ ಅರ್ಜಿಗಳನ್ನು ಡಿಸಿ ಅನಿರುದ್ಧ ಶ್ರವಣ್ ಅವರು ಸ್ಥಳದಲ್ಲಿಯೇ ಬಗೆಹರಿಸಿ ಮಂಜೂರಾತಿ ಪತ್ರಗಳನ್ನು ಸಹ ವೇದಿಕೆಯಲ್ಲಿಯೇ ಫಲಾನುಭವಿಗಳಿಗೆ ನೀಡಿದರು. 

ಈ ಸಂದರ್ಭದಲ್ಲಿ ಕೂಡ್ಲಿಗಿ ತಹಶೀಲ್ದಾರರಾದ ಟಿ.ಜಗದೀಶ್, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು. 


ಸುದ್ದಿ ಓದಿ