ಮನರಂಜನೆ

ವಿಘ್ನೇಶ್, ನಯನತಾರಾ ನಿರ್ಮಾಣದ “ಕೋಳಾಂಗಳ್” ಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ

ವಿಘ್ನೇಶ್, ನಯನತಾರಾ ನಿರ್ಮಾಣದ “ಕೋಳಾಂಗಳ್” ಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ

 
ಚೆನ್ನೈ, ಆಗಸ್ಟ್ 09 ನಟಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಅಭಿನಯದ “ಕೋಳಾಂಗಳ್” (‘ಪೆಬ್ಬಲ್ಸ್’) ಚಿತ್ರಕ್ಕೆ ಅಂತಾರಾಷ್ಟ್ರೀಯ ಮಟ್ಟದ ಟೈಗರ್ ಪ್ರಶಸ್ತಿ ದೊರಕಿದೆ.
 
ಚಿತ್ರ ನಿರ್ಮಾಣ ಕಾರ್ಯದಲ್ಲಿ ಸೂಪರ್ ಜೋಡಿಯಾಗಿ ಯಶಸ್ವಿಯಾಗಿರುವ ವಿಘ್ನೇಶ್, ನಯನತಾರಾ, ರಿಯಲ್ ಲೈಫ್ ನಲ್ಲಿಯೂ ಲವ್ ನಲ್ಲಿ ಬಿದ್ದಿದ್ದಾರೆ.  .ತಾವಿಬ್ಬರೂ ಒಟ್ಟಿಗೆ ನಿರ್ಮಿಸಿರುವ ಕೋಳಾಂಗಲ್ ಚಿತ್ರಕ್ಕೆ ಪ್ರಶಸ್ತಿ ಸಿಕ್ಕಿರುವ ಖುಷಿಯ ವಿಚಾರವನ್ನು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
 
ನಮ್ಮ ಚಿತ್ರಕ್ಕೆ ಮೊದಲ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ ಎಂದು ನಯನತಾರಾ ಪೋಸ್ಟ್ ಹಾಕಿದ್ರೆ, ವಿಘ್ನೇಶ್ ಶಿವನ್, ''ಪೆಬ್ಬಲ್ಸ್'' ('ಕೋಳಾಂಗಳ್') ಚಿತ್ರಕ್ಕೆ ಟೈಗರ್ ಪ್ರಶಸ್ತಿ ಸಿಕ್ಕಿದೆ. ಇದು ಮೊದಲ ಅಂತಾರಾಷ್ಟ್ರೀಯ ಪ್ರಶಸ್ತಿ. ನಮ್ಮ ಇಡೀ ತಂಡಕ್ಕೆ ಹೃದಯಪೂರ್ವಕ ಧನ್ಯವಾದಗಳು'' ಎಂದಿದ್ದಾರೆ. 'ರೌಡಿ ಪಿಕ್ಚರ್ಸ್' ಎಂಬ ಹೆಸರಿನಲ್ಲಿ ವಿಘ್ನೇಶ್ ಶಿವನ್ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಇದಕ್ಕೆ ನಯನತಾರ ಸಹ ಸಹ ಮಾಲೀಕರು ಎನ್ನುವುದು ವಿಶೇಷ. ಈ ಸಂಸ್ಥೆಯಡಿ ಹಲವು ಚಿತ್ರಗಳು ನಿರ್ಮಾಣ ಆಗುತ್ತಿದೆ. ಖುದ್ದು ನಯನತಾರಾ ನಟಿಸಿರುವ 'ನೇಟ್ರಿಕಣ್' ರೌಡಿ ಪಿಕ್ಚರ್ಸ್‌ನಲ್ಲಿ ನಿರ್ಮಾಣವಾಗಿದೆ. ಇದರ ಜೊತೆಗೆ 'ರಾಕಿ', 'ಪೆಬ್ಬಲ್ಸ್' ಹಾಗೂ ವಿಜಯ್ ಸೇತುಪತಿ, ಸಮಂತಾ ಹಾಗೂ ನಯನತಾರಾ ನಟಿಸಿ ವಿಘ್ನೇಶ್ ಶಿವನ್ ನಿರ್ದೇಶನ ಮಾಡುತ್ತಿರುವ ಚಿತ್ರವೂ ಇದೇ ಸಂಸ್ಥೆಯಲ್ಲಿ ನಿರ್ಮಾಣವಾಗುತ್ತಿದೆ.
 
 ಪಿಎಸ್ ವಿನೋದ್ ರಾಜ್ ನಿರ್ದೇಶನ ಮಾಡಿರುವ 'ಪೆಬ್ಬಲ್ಸ್' ಸಿನಿಮಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಗಮನ ಸೆಳೆಯುತ್ತಿದೆ. ಇದೀಗ, ದಕ್ಷಿಣ ಹಾಲೆಂಡ್‌ನಲ್ಲಿ ನಡೆಯುವ 'ರೋಟರ್‌ಡ್ಯಾಮ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ'ದಲ್ಲಿ ಭಾಗವಹಿಸಿ ಪ್ರಶಸ್ತಿ ಸಹ ಪಡೆದುಕೊಂಡಿದೆ. ಯುವನ್ ಶಂಕರ್ ರಾಜಾ ಚಿತ್ರಕ್ಕೆ ಸಂಗೀತ ಒದಗಿಸಿದ್ದಾರೆ.
 
 ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನವಾಗುತ್ತಿರುವ ಭಾರತದ ಎರಡನೇ ಸಿನಿಮಾ 'ಕೋಳಾಂಗಳ್'. ಇದಕ್ಕೂ ಮುನ್ನಾ ಮಲಯಾಳಂ ನಿರ್ದೇಶಕ ಕುಮಾರ್ ಶಶಿಧರನ್ ನಿರ್ದೇಶಿಸಿದ್ದ 'ದುರ್ಗಾ' ಈ ಪ್ರಶಸ್ತಿಗೆ ಭಾಜನವಾಗಿತ್ತು. 'ಕಠೋರವಾದ ವಿಷಯವನ್ನಿಟ್ಟುಕೊಂಡು, ಮಾನವೀಯತೆ, ಹಾಸ್ಯದ ಮಿಳಿತದೊಂದಿಗೆ ಮಾಡಲಾಗಿರುವ ಅದ್ಭುತ ಚಲನಚಿತ್ರ ಇದು. ಈ ಸಿನಿಮಾ 'ಸಿನಿಮಾ ವ್ಯಾಕರಣಕ್ಕೆ' ಒಳ್ಳೆಯ ಉದಾಹರಣೆ' ಎಂದು ಸಿನಿಮಾವನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವ ಜ್ಯೂರಿಗಳು ಹೇಳಿದ್ದಾರೆ.
 
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಅಣ್ಣಾತ್ತೆ' ಚಿತ್ರದಲ್ಲಿ ನಯನತಾರಾ ನಟಿಸಿದ್ದಾರೆ. ಜೊತೆಗೆ ವಿಘ್ನೇಶ್ ಶಿವನ್ ನಿರ್ಮಾಣದ 'ನೇಟ್ರಿಕಣ್' ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಜೊತೆಗೆ ವಿಜಯ್ ಸೇತುಪತಿ ಹಾಗೂ ಸಮಂತಾ ಜೊತೆ ಮಾಡುತ್ತಿರುವ ಚಿತ್ರ ಶೂಟಿಂಗ್ ಹಂತದಲ್ಲಿದೆ. ಇದರ ಜೊತೆಗೆ ತೆಲುಗಿನಲ್ಲಿ 'ಆರಡುಗಲಾ ಬುಲೆಟ್' ಎನ್ನುವ ಸಿನಿಮಾಗೆ ಆಯ್ಕೆಯಾಗಿದ್ದಾರೆ. ಶಾರೂಖ್ ಖಾನ್ ಹಾಗೂ ಅಟ್ಲಿ ಕಾಂಬಿನೇಷನ್‌ನಲ್ಲಿ ಮೂಡಿ ಬರಲಿರುವ ಹೊಸ ಚಿತ್ರದಲ್ಲಿಯೂ ನಯನತಾರ ನಾಯಕಿ ಎನ್ನುವ ವಿಚಾರ ಚರ್ಚೆಯಾಗುತ್ತಿದೆ. ಆದರೆ, ಅಧಿಕೃತವಾಗಿ ಈ ಬಗ್ಗೆ ಮಾಹಿತಿ ಹೊರಬಿದ್ದಿಲ್ಲ
 
 2012ರಲ್ಲಿ 'ಪೋಡಾ ಪೋಡಿ' ಚಿತ್ರದ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡ ವಿಘ್ನೇಶ್ ಶಿವನ್, ನಟ, ನಿರ್ಮಾಪಕ, ಚಿತ್ರ ಸಾಹಿತಿಯೂ ಹೌದು.

ಸುದ್ದಿ ಓದಿ