ಧಾರವಾಡ - ಹುಬ್ಬಳ್ಳಿ

ವಿದ್ಯಾರಣ್ಯ ಪ್ರೌಢಶಾಲೆ; ಪ್ರತಿಭಾವಂತರ ಪುರಸ್ಕಾರ

ವಿದ್ಯಾರಣ್ಯ ಪ್ರೌಢಶಾಲೆ; ಪ್ರತಿಭಾವಂತರ ಪುರಸ್ಕಾರ

ಧಾರವಾಡ 01: ಪಾಲಕರು ಮಕ್ಕಳಿಗಾಗಿ ಆಸ್ತಿ ಮಾಡುವ ಬದಲಾಗಿ ಮಕ್ಕಳನ್ನೆ ಆಸ್ತಿ ಮಾಡಿರಿ. ಮಕ್ಕಳ ಶ್ರೇಯಸ್ಸಿಗಾಗಿ ನಿಮ್ಮ ಪರಿಶ್ರಮದ ಅಗತ್ಯವಿದೆ. ಪಾಲಕರ ಸಹಕಾರದಿಂದ ಮಕ್ಕಳು ಸಾಧನೆ ಮಾಡಲು ಸಾಧ್ಯವಾಗುವುದು ಎಂದು ಲೇಖಕ ಹಾಗೂ ನಿವೃತ್ತ ಉಪನ್ಯಾಸಕ ಹರ್ಷ ಡಂಬಳ ಅಭಿಪ್ರಾಯಪಟ್ಟರು.  ಸ್ಥಳೀಯ ವಿದ್ಯಾರಣ್ಯ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾದ ಪ್ರತಿಭಾವಂತ ವಿದ್ಯಾರ್ಥಿಗಳ ಸತ್ಕಾರ ಹಾಗೂ ವಾರ್ಷಿಕೋತ್ಸವ ಸಮಾರಂಭದ ಮುಖ್ಯಅಥಿತಿಗಳಾಗಿ ಅವರು ಮಾತನಾಡಿದರು.   

ವಿದ್ಯಾರಣ್ಯ ಶಾಲೆಯ ಮಣ್ಣಲ್ಲಿ ತಪ್ಪಸ್ಸಿನ ಶಕ್ತಿ ಇದೆ. ಶಾಲೆಯ ಇತಿಹಾಸದಲ್ಲಿ ರಾಷ್ಟ್ರಭಕ್ತಿ, ಆಧ್ಯಾತ್ಮಿಕ ಶಕ್ತಿ ಹಾಗೂ ಅಚಲ ನಂಬಿಕೆಗಳು ನೆಲೆಗೊಂಡಿವೆ. ಆಗಿನ ಮಕ್ಕಳು ಮತ್ತು ಶಿಕ್ಷಕರಲ್ಲಿ ದೇಶಾಭಿಮಾನ ಹಾಗೂ ತ್ಯಾಗದ ಗುಣಗಳು ಈ ಶಾಲೆ ಕಟ್ಟಲು ಆಧಾರ ಸ್ಥಂಭಗಳಾಗಿದ್ದವು. ಇಂದಿನ ಮಕ್ಕಳಿಗೆ ಶಾಲೆಯಲ್ಲಿ ಸಾಕಷ್ಟು ಸೌಲಭ್ಯಗಳಿವೆ. ಸಂಸ್ಥೆಯ ಆಡಳಿತ ಮಂಡಳಿ ಮಕ್ಕಳ ಸರ್ವಾಂಗೀನ ವಿಕಾಸಕ್ಕಾಗಿ ಸಾಕಷ್ಟು ಪ್ರಯತ್ನಿಸುತ್ತಿದೆ. ಮಕ್ಕಳು ಮತ್ತು ಪಾಲಕರು ಇದರ ಸದುಪಯೋಗವನ್ನು ಪಡೆದು ಶಾಲೆಯ ಕೀರ್ತಿ ಹೆಚ್ಚಿಸಬೇಕು ಎಂದು ಹೇಳುವ ಮೂಲಕ ಶಾಲೆ ಬೆಳೆದು ಬಂದ ಐತಿಹಾಸಿಕ ಘಟನೆಗಳನ್ನು ಹೇಳಿ ಸ್ಮರಿಸಿದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಕಾರ್ಯಾಧ್ಯಕ್ಷ ಶ್ರೀಕಾಂತ ಪಾಟೀಲ, ನಮ್ಮ ಸಂಸ್ಥೆ ಶತಮಾನದಿಂದ ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದೆ. ಸಂಸ್ಥೆಯ ರೂವಾರಿಗಳು ಮಕ್ಕಳ ಸರ್ವಾಂಗಿನ ವಿಕಾಸಕ್ಕಾಗಿ ಸಂಸ್ಕಾರಯುತ ಶಿಕ್ಷಣ ನೀಡುತ್ತಾ ಬಂದಿದ್ದಾರೆ. ಈಗಲೂ ಕೂಡಾ ಈ ಪರಂಪರೆ ಮುಂದ ವರೆದಿದೆ. ಪಾಲಕರು ಮತ್ತು ಮಕ್ಕಳು ಸದುಪಯೋಗ ಪಡೆದುಕೊಳ್ಳಲು ಮುಂದಾಗಬೇಕು ಎಂದು ಅವರು ತಿಳಿಸಿದರು.      

ಕಳೆದ ವರ್ಷ ಎಸ್‌. ಎಸ್‌. ಎಲ್‌. ಸಿ ಪರೀಕ್ಷೆಯಲ್ಲಿ 622 ಅಂಕ ಪಡೆದು ರಾಜ್ಯಕ್ಕೆ ನಾಲ್ಕನೆಯ ಸ್ಥಾನ ಪಡೆದ ಶಾಲೆಯ ವಿದ್ಯಾರ್ಥಿನಿ ಗೌತಮಿ ಪಂಚಾಕ್ಷರಿ ಇವಳು ನಗದು ಪಾರಿತೋಷಕ ಪಡೆದು ಅನಿಸಿಕೆ ಹಂಚಿಕೊಂಡಳು.  ಶಿಕ್ಷಕರುಗಳಾದ ಪ್ರತಿಮಾ ಉಪಾಧ್ಯೆ, ಮಾರುತಿ ಶಿಂಧೆ, ಆರತಿ ಕುಲಕರ್ಣಿ, ರೀತು ನಾವಳ್ಳಿ ಅವರು ಬಹುಮಾನ ವಿತರಣೆ ಹಾಗೂ ಸಾಧಕರ ಪುರಸ್ಕಾರ ಕಾರ್ಯಕ್ರಮ ನಡೆಸಿಕೊಟ್ಟರು.  

ಸಂಸ್ಥೆಯ ಕಾರ್ಯದರ್ಶಿ ಡಿ. ಎಸ್‌. ರಾಜಪುರೋಹಿತ,  ಖಜಾಂಚಿ ಎಸ್‌. ಎಸ್‌. ಕುಲಕರ್ಣಿ, ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಶ್ರೀಧರ ಉದಗಟ್ಟಿ, ಉಪಾಧ್ಯಕ್ಷ ರೋಹಿತ್ ಪಾಟೀಲ, ಪ್ರಾಂಶುಪಾಲರಾದ ಡಾ. ಶರಣಮ್ಮ ಗೋರೆಬಾಳ, ಉಪಪ್ರಾಂಶುಪಾಲರಾದ ಸಿಂಧು ಶಿರೂರ, ವ್ಹಿ. ಆರ್‌. ಮೂಲಿಮನಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. 

ಉಪಪ್ರಾಂಶುಪಾಲರಾದ ಸಿಂಧು ಶಿರೂರ ಅವರು ಸ್ವಾಗತಿಸಿದರು. ಶಿಕ್ಷಕ ಅನಂತ ಹದ್ಲಿ ಅತಿಥಿಗಳನ್ನು ಪರಿಚಯಿಸಿದರು, ಬಸವರಾಜ ಪಾಟೀಲ ಮತ್ತು ನೇತ್ರಾ ವಡವಿ ಕಾರ್ಯಕ್ರಮ ನಿರೂಪಿಸಿದರು. ಸತ್ಕಾರ ಸಮಿತಿ ಸಂಚಾಲಕಿ ಕಾವೇರಿ ಗಡದ ವಂದಿಸಿದರು.  

ಶಿಕ್ಷಕಿ ಸಂಗೀತಾ ಹಲಗತ್ತಿ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ರಸಮಂಜರಿ ಕಾರ್ಯಕ್ರಮ ಸಭಿಕರ ಮನ ಸೂರೆಗೊಂಡಿತು. ಶಿಕ್ಷಕಿಯರಾದ ಸಂಗೀತಾ ಹಲಗತ್ತಿ, ಶೃತಿ ರಾಂಪೂರ್ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು. 


ಸುದ್ದಿ ಓದಿ