ರಸ್ತೆ ಮೇಲೆ ಮಳೆ ನೀರು ನಿಂತು ವಾಹನ ಸಂಚಾರ ಅಸ್ತ-ವ್ಯಸ್ತ: ಸವಾರರ ಹಿಡಿಶಾಪ
ಲೋಕದರ್ಶನ ವರದಿ
ಮುಂಡಗೋಡ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಶನಿವಾರ ಸಂಜೆ ಸುರಿದ ಭಾರಿ ಮಳೆ-ಗಾಳಿಗೆ ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರ ಅಸ್ತ-ವ್ಯಸ್ತಗೊಂಡು ವಿವಿಧ ಕಡೆಗಳಲ್ಲಿ ಹಾನಿ ಸಂಭವಿಸಿದೆ.
ವಾಡಿಕೆಯಂತೆ ಪಟ್ಟಣದ ಬಂಕಾಪುರ ರಸ್ತೆಯಲ್ಲಿ ರಭಸದಿಂದ ಬಿದ್ದ ಮಳೆ ನೀರು ಚರಂಡಿಗಳಲ್ಲಿ ಹರಿದು ಹೋಗದೆ ರಸ್ತೆಯ ಮೇಲೆ ತುಂಬಿಕೊಂಡು ನಿಂತು ಕೆಲವು ಗಂಟೆಗಳ ಕಾಲ ವಾಹನ ಸಂಚಾರ ಅಸ್ತ-ವ್ಯಸ್ತಗೊಂಡಿತು. ಕೆಲವರು ಮಳೆ ನಿಲ್ಲುವವರೆಗೂ ಕಾದು ನಿಂತು ನಂತರ ಹೋದರೆ ಇನ್ನು ಕೆಲವರು ಮೊಣಕಾಲವರೆಗೂ ಮಳೆ ನೀರು ತುಂಬಿಕೊಂಡ ರಸ್ತೆಯಲ್ಲಿ ತಮ್ಮ ವಾಹನಗಳನ್ನು ಚಲಾಯಿಸಿಕೊಂಡು ಪ್ರತಿ ವರ್ಷದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಾ ನಡೆದರು. ಮಳೆಗಾಲ ಬಂದಿತೆಂದರೆ ಈ ರಸ್ತೆಯ ಡಾ.ರವಿ ಹೆಗಡೆ ಅವರ ಆಸ್ಪತ್ರೆಯಿಂದ ಹಿಡಿದು ಸಿಂಡಿಕೇಟ್ ಬ್ಯಾಂಕ್ವರೆಗೂ ರಸ್ತೆಯ ಮೇಲೆ ನೀರು ನಿಂತು ಬೈಕ್ ಸವಾರರು, ವಾಹನ ಚಾಲಕರು ಮತ್ತು ಪಾದಚಾರಿಗಳು ತೊಂದರೆ ಅನುಭವಿಸುತ್ತಿರುವುದು ಮಾಮೂಲಿಯಾಗಿದೆ. ಹುಬ್ಬಳ್ಳಿ ರಸ್ತೆಯಲ್ಲಿ ಕೆಲ ಹೊತ್ತು ರಸ್ತೆಯ ಮೇಲೆ ನೀರು ನಿಂತು ಹರಿಯುತ್ತಿರುವುದು ಕಂಡು ಬಂತು. ಪಟ್ಟಣದ ಸುಭಾಸ ನಗರ, ಇಂದಿರಾ ನಗರ, ಕಂಬಾರಗಟ್ಟಿ ಸೇರಿದಂತೆ ಇನ್ನೂ ಕೆಲವು ಬಡಾವಣೆಗಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತು.
ತಾಲೂಕಿನ ಇಂದೂರ ಗ್ರಾಮ ಪಂಚಾಯತ ವ್ಯಾಪ್ತಿಯ ಕೊಪ್ಪ ಗ್ರಾಮದ ಬಿಜು ಪಾರೇಲ್ ಎಂಬುವರ ಟ್ರ್ಯಾಕ್ಟರ್ ಶೆಡ್ ಮಳೆ-ಗಾಳಿಗೆ ಕುಸಿದು ಬಿದ್ದು ಟ್ರ್ಯಾಕ್ಟರ್ಗೆ ಹಾನಿಯಾಗಿದೆ. ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಗುಡುಗು ಮತ್ತು ಮಿಂಚು ಸಹಿತ ಸುರಿದ ಮಳೆ-ಗಾಳಿಗೆ ಜನ ಜೀವನ ಅಸ್ತವ್ಯಸ್ತಗೊಂಡಿತು.