ಮುಂದಗೋಡ

ಧರ್ಮವೆಂಬ ಅಮೃತ ಕುಡಿದು ಮನುಷ್ಯ ಸುಖಿಯಾಗಬೇಕು

ಧರ್ಮವೆಂಬ ಅಮೃತ ಕುಡಿದು ಮನುಷ್ಯ ಸುಖಿಯಾಗಬೇಕು

ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ  

ಮುಂಡಗೋಡ:ಭಗವಂತನಿಂದ ಬಂದ ಆತ್ಮ ಕೊನೆಗೆ ಭಗವಂತನಿಗೆ ಸೇರಬೇಕು ಧರ್ಮವೆಂಬ ಅಮೃತ ಕುಡಿದು ಮನುಷ್ಯ ಸುಖಿಯಾಗಬೇಕು ಅಮೂಲ್ಯ ಧರ್ಮದ ಜಾಗೃತಿಯಾಗಬೇಕು ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು. 

ವಿವಿಧ ಧಾರ್ಮಿಕ, ಸಾಮಾಜಿಕ ಹಾಗೂ ಜನ ಜಾಗೃತಿ ಪಾದಯಾತ್ರೆಯ ಅಂಗವಾಗಿ ಶುಕ್ರವಾರ ಪಟ್ಟಣದ ಶ್ರೀವೀರಭದ್ರೇಶ್ವರ-ಶ್ರೀಬಸವೇಶ್ವರ ದೇವಸ್ಥಾನದಲ್ಲಿ ಶ್ರೀಗಳು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಮಾಜಮುಖಿ ಕಾರ್ಯಕ್ರಮದ ಮೂಲಕ ಶ್ರೀಕ್ಷೇತ್ರ ಯಡಿಯೂರಿನಿಂದ ಶ್ರೀಶೈಲದವರೆಗೆ ಧರ್ಮ ಜಾಗೃತಿಯ ಪಾದಯಾತ್ರೆ ಮಾಡುವುದು. ವಾಸ್ತವ್ಯ ಮಾಡಿದ ಸ್ಥಳಗಳಲ್ಲಿ ಜಾತ್ಯಾತೀತವಾಗಿ, ಉಚಿತವಾಗಿ ಮತ್ತು ಸಾಮೂಹಿಕವಾಗಿ ಕನಿಷ್ಠ 25ಸಾವಿರ ಲಿಂಗ ಧಾರಣೆ ಮಾಡುವ ಗುರಿ ಹೊಂದಿದ್ದೇವೆ. ಇತ್ತೀಚಿನ ದಿನಗಳಲ್ಲಿ ಲಿಂಗಧಾರಿ ಇಲ್ಲದ ಲಿಂಗಾಯತರು ಜಾಸ್ತಿ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ದುಶ್ಚಟಗಳಿಂದ ದೂರವಿರಲು ನಮ್ಮ ಜೊತೆ ಇದ್ದ ಸ್ವಾಮಿಗಳ ಜೋಳಿಗೆಗಳಲ್ಲಿ ದುಶ್ಚಟಗಳ ಭಿಕ್ಷೆ ಬೇಡುವ ಮೂಲಕ ದುಶ್ಚಟಗಳಿಂದ ದೂರ ಮಾಡುವುದು. ಸುಮಾರು 560 ಕಿ.ಮೀ. ರಸ್ತೆಯ ಎರಡೂ ಬದಿಗಳಲ್ಲಿ ಗಿಡಗಳನ್ನು ನೆಡುವ ಕಾರ್ಯ ರಾಜ್ಯ ಅರಣ್ಯ ಇಲಾಖೆ ಸಹಯೋಗದೊಂದಿಗೆ ಈಗಾಗಲೆ ಜೂ.26ರಿಂದ ಆರಂಭವಾಗಿದೆ. ನ.30ಕ್ಕೆ ಪಾದಯಾತ್ರೆ ಮುಗಿದ ನಂತರ ಡಿ.1ರಿಂದ ಜ.10ವರೆಗೆ 2ನೇ ಹಂತದ ಧಾರ್ಮಿಕ ಅನುಷ್ಠಾನ ಆರಂಭವಾಗುವುದು. ರುದ್ರಹೋಮ ರೂ.5000, ಇಷ್ಟಲಿಂಗ ಮಹಾಪೂಜೆಗೆ ರೂ.10ಸಾವಿರ, ಅನ್ನದಾನಕ್ಕೆ ರೂ.15ಸಾವಿರ, ಜಗದ್ಗುರು ತುಲಾಭಾರಕ್ಕೆ ರೂ.21ಸಾವಿರ, ಎಲ್ಲ ಪೂಜೆಗಳಲ್ಲಿ ಪಾಲ್ಗೊಳ್ಳಲು ರೂ.51ಸಾವಿರದಂತೆ ಸಮಿತಿಯವರು ಕಾರ್ಯಕ್ರಮಕ್ಕೆ ಬೇಕಾದ ಸಂಪನ್ಮೂಲ ಕೂಢೀಕರಿಸಲು ಹಣ ನಿಗದಿ ಮಾಡಿದ್ದಾರೆ.  ಜ.10ರಿಂದ ಜ.15ರವರೆಗೆ 3ನೇ ಹಂತದ 5 ದಿನಗಳ ವಿಶೇಷ ಕಾರ್ಯಕ್ರಮಗಳಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಮಹಾ ಅಧಿವೇಶನ ಜರುಗುವುದು.     

ಕಳೆದ 7ತಿಂಗಳ ಹಿಂದೆ ಆಂಧ್ರ ಸರ್ಕಾರ ಶ್ರೀಶೈಲ ಪೀಠಕ್ಕೆ 10ಎಕರೆ ಜಾಗ ಮಂಜೂರು ಮಾಡಿದೆ. ಈಗಾಗಲೆ 5 ಎಕರೆ ಜಾಗ ಕೊಟ್ಟಿದ್ದು ಅದನ್ನು ಅಭಿವೃದ್ಧಿ ಮಾಡಿದ ನಂತರ ಉಳಿದ 5ಎಕರೆ ಜಾಗ ನೀಡಲಿದೆ.  ಈ 5 ಎಕರೆ ಜಾಗದಲ್ಲಿ ಭಕ್ತರಿಗೆ ತಂಗಲು 500 ಕೊಠಡಿಗಳ ನಿರ್ಮಾಣ, ಕಂಬಿ ಮಂಟಪ, 100 ಬೆಡ್‌ಗಳ ಸುಸಜ್ಜಿತ ಆಸ್ಪತ್ರೆ, ರೆಸಿಡೆನ್ಸಿಯಲ್ ಸ್ಕೂಲ್ ನಿರ್ಮಾಣ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಖರ್ಚು ಮಾಡಿ ಉಳಿದ ಹಣದಿಂದ 5ಎಕರೆ ಜಾಗದಲ್ಲಿ ಹಾಕಿಕೊಂಡ ಯೋಜನೆಗಳಿಗೆ ಬಳಸಲಾಗುವುದು. ತುಲಾಭಾರದಿಂದ ಬಂದ ಹಣವನ್ನು ಮಾತ್ರ ಆಸ್ಪತ್ರೆ ನಿರ್ಮಾಣಕ್ಕೆ ಬಳಸಲಾಗುವುದು ಎಂದರು.   

ಕಲಘಟಗಿ 12 ಎತ್ತಿನ ಮಠದ ಶ್ರೀಗಳು ಆಶೀರ್ವಚನ ನೀಡಿ ಪುಣ್ಯ ಮಾಡಿದವರಿಗೆ ಮಾತ್ರ ಗುರುವಿನ ಆಶೀರ್ವಾದ ದೊರಕುವುದು. ನಮ್ಮ ಜಿಲ್ಲೆ ಶರಣರ ನಾಡು. ಲಿಂಗವಿಲ್ಲದವರಿಗೆ ಲಿಂಗಧಾರಣೆ ಮಾಡಿ ಅಖಂಡ ಜಗತ್ತಿಗೆ ಜಗದ್ಗುರುಗಳಾಗಿದ್ದಾರೆ. ಭಕ್ತರಿಂದ ಪಡೆದ ಕಾಣಿಕೆಯನ್ನು ಲೋಕಕಲ್ಯಾಣಕ್ಕೆ ಉಪಯೋಗಿಸುತ್ತಾರೆ ಎಂದರು. ವೇ.ಮೂ.ರುದ್ರಮುನಿ ಶ್ರೀಗಳು ಆಶೀರ್ವಚನ ನೀಡಿ ಮಾತನಾಡುವ ದೇವರು, ನಡೆದಾಡುವ, ಸಮಾಜವನ್ನು ತಿದ್ದುವ ವ್ಯಕ್ತಿಯೇ ಗುರು. ಶರೀರ ದಂಡನೆ ಮಾಡುವ ಸಾಮರ್ಥ್ಯವಿರುವವನೇ ಗುರು ಎಂದರು. 

ಇದೇ ಸಂದರ್ಭದಲ್ಲಿ ದೇವಸ್ಥಾನದ ನೂತನ ರಥದ ನಿರ್ಮಾಣಕ್ಕೆ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಚಾಲನೆ ನೀಡಿದರು. ಈ ವೇಳೆ ಮಾಜಿ ಶಾಸಕ ವಿ.ಎಸ್‌.ಪಾಟೀಲ, ಬಸವರಾಜ ಒಶಿಮಠ, ಉಮೇಶ ಬಿಜಾಪುರ, ನಾಗಭೂಷಣ ಹಾವಣಗಿ, ಜಯಸುಧಾ ಭೋವಿವಡ್ಡರ, ನಿಂಗಯ್ಯ ಹಿರೇಮಠ, ರಾಮಣ್ಣ ಕುನ್ನೂರ, ನಾಗಪ್ಪ ಕಡಗಿ, ವಿಶ್ವನಾಥ ಪವಾಡಶೆಟ್ಟರ, ರಮೇಶ ಸವಣೂರ, ಸಿದ್ದಣ್ಣ ಹಡಪದ, ಕೆ.ಎ.ರಾಜ, ಚಂದ್ರಶೇಖರ ಗಾಣಿಗೇರ, ಶಂಬುಲಿಂಗ ನಿಡಗುಂದಿ ಮುಂತಾದವರಿದ್ದರು. ಪೂರ್ಣಕುಂಭ ಹೊತ್ತ ಮಹಿಳೆಯರು ಶ್ರೀಗಳನ್ನು ಬರಮಾಡಿಕೊಂಡರು. ಮಾತೆಯರು ಪ್ರಾರ್ಥಿಸಿದರು. ಮಂಜುನಾಥ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. 


ಸುದ್ದಿ ಓದಿ